ಮಂಗಳೂರು: ನಾಪತ್ತೆಯಾಗಿದ್ದ ಬಾಲಕಿ ಮೃತದೇಹ ನದಿಯಲ್ಲಿ ಪತ್ತೆ

ಮಂಗಳೂರು: ನಾಪತ್ತೆಯಾಗಿದ್ದ  ಬಾಲಕಿಯ ಮೃತದೇಹ ಮನೆ ಸಮೀಪದ ನದಿಯಲ್ಲಿ ಪತ್ತೆಯಾಗಿದೆ.

ಕುದ್ರೋಳಿ ಹೈದರಾಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಪುತ್ರಿ ಮುಫೀದಾ (11) ಮೃತ ಬಾಲಕಿ.

ಬಾಲಕ ಮುಫೀದಾ ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆಯಿಂದ ನಾಪತ್ತೆಯಾಗಿದ್ದಳು. ತಕ್ಷಣ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಿರಲಿಲ್ಲ. ಬಳಿಕ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದಾಗ ಆಕೆ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ನದಿ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನದಿಯಲ್ಲಿ ಶೋಧ ನಡೆಸಿದಾಗ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಮುಫೀದಾ ವಿಶೇಷ ಚೇತನಳಾಗಿದ್ದು, ಪೋಷಕರ ಗಮನಕ್ಕೆ ಬಾರದೆ ಮನೆಯಿಂದ ಹೊರಬಂದಿದ್ದಾಳೆ ಎನ್ನಲಾಗಿದೆ. ತಕ್ಷಣ ಸ್ಥಳಕ್ಕೆ ಬಂದರು ಠಾಣೆಯ ಪೊಲೀಸರು ಧಾವಿಸಿ ಮೃತದೇಹವನ್ನು ವೆನ್ ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆದ ಬಳಿಕ ಪೋಷಕರಿಗೆ ಮೃತದೇಹ ಹಸ್ತಾಂತರ ಮಾಡಲಿದ್ದಾರೆ.