-->
ಪ್ರೀತಿಸಿ ಮದುವೆಯಾದ ಜೋಡಿಗೆ ಯುವತಿ ಮನೆಯವರೇ ವಿಲನ್ ಗಳು: ಪತ್ನಿಯನ್ನು ತನ್ನೊಂದಿಗೆ ಇರಲು ಸಹಕರಿಸಲು ಮಾಧ್ಯಮದ ಮುಂದೆ ಅಳಲು ತೋಡಿದ ಯುವಕ

ಪ್ರೀತಿಸಿ ಮದುವೆಯಾದ ಜೋಡಿಗೆ ಯುವತಿ ಮನೆಯವರೇ ವಿಲನ್ ಗಳು: ಪತ್ನಿಯನ್ನು ತನ್ನೊಂದಿಗೆ ಇರಲು ಸಹಕರಿಸಲು ಮಾಧ್ಯಮದ ಮುಂದೆ ಅಳಲು ತೋಡಿದ ಯುವಕ

ಚೆನ್ನೈ: ಮನೆಯವರ ವಿರೋಧದ ಮಧ್ಯೆಯೂ ಅಂತರ್ಜಾತಿ ವಿವಾಹವಾಗಿ ಸುಂದರ ಸಂಸಾರ ನಡೆಸುತ್ತಿದ್ದ ಯುವ ಜೋಡಿಗೆ ಮತ್ತೆ ಯುವತಿ ಮನೆಯವರು ವಿಲನ್​ಗಳಾಗಿದ್ದಾರೆ. ಇದೀಗ ಪತಿಯೊಂದಿಗಿದ್ದ ಮಗಳನ್ನು ಆಕೆಯ ಕುಟುಂಬ ಥಳಿಸಿ ತಮ್ಮ ಮನೆಗೆ ಎಳೆದೊಯ್ದಿದೆ. ಏನೂ ಮಾಡಲಾಗದೆ ಪರಿತಪಿಸುತ್ತಿರುವ ಪತಿಯೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಚೆನ್ನೈನ ಈರೋಡ್​ ಜಿಲ್ಲೆಯ ಭವಾನಿ ಬಳಿಯ ಗ್ರಾಮದವರಾದ ಪಿ. ಸೆಲ್ವನ್​(25) ಮತ್ತು ಜೆ. ಎಲಮತಿ(23) ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ಬಳಿಕ ಪ್ರೀತಿಯ ಕಡೆಗೆ ತಿರುಗಿದೆ.

ಮನೆಯವರ ವಿರೋಧದ ನಡುವೆಯೇ ಸೇಲಂ ಜಿಲ್ಲೆಯ ಕೊಳತೂರು ಬ್ಲಾಕ್​ನ ಕವಲಂದಿಯೂರ್​ ಎಂಬಲ್ಲಿ ಕಳೆದ ವರ್ಷ ಮಾರ್ಚ್​ ತಿಂಗಳಲ್ಲಿ ಈ ಜೋಡಿ ವಿವಾಹವಾಗಿತ್ತು. ಯುವಕ ದಲಿತ ಜಾತಿಯವರಾಗಿದ್ದರಿಂದ ಎಲಮತಿ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. 

ಎಲಮತಿ ವಣ್ಣಿಯಾರ್​ ಜಾತಿಯವರಾಗಿದ್ದರೆ, ಸೆಲ್ವನ್​ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದ. ಈ ಮದುವೆಗೆ ಯುವತಿಯ ಕುಟುಂಬದವರೇ ವಿಲನ್ ಗಳಾಗಿದ್ದರೂ ಡ್ರಾವಿಡರ್​ ವಿದುಥಲೈ ಕಜಗಂ(ಡಿವಿಕೆ) ಸಂಘಟನೆಯ ಸದಸ್ಯ ಕವೈ ಈಶ್ವರನ್ ಮುಂದೆ ನಿಂತು ಮದುವೆ ಮಾಡಿಸಿದ್ದರು. ಇದರ ಬೆನ್ನಲ್ಲೇ ಎಲಮತಿಯ ತಂದೆ 50 ಮಂದಿ ಶಸ್ತ್ರಾಸ್ತ್ರಧಾರಿಗಳೊಂದಿಗೆ ಬಂದು ಬಲವಂತವಾಗಿ ಕವೈ ಈಶ್ವರನ್​ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದರು. ಅಲ್ಲದೆ, ಮಗಳನ್ನು ಅಪಹರಿಸಿದ್ದರು. ಆದರೆ, ಪೊಲೀಸರ ಮಧ್ಯ ಪ್ರವೇಶದಿಂದ ಪ್ರಕರಣ ಸುಖಾಂತ್ಯ ಕಂಡಿತ್ತು. 

ಕಳೆದ ಒಂದು ವರ್ಷಗಳಿಂದ ಪ್ರೀತಿಸಿದ ಜೋಡಿ ದಂಪತಿಯಾಗಿ ಸುಖಕರ ಜೀವನ ನಡೆಸುತ್ತಿತ್ತು. ಹೀಗಿರುವಾಗಲೇ ಮತ್ತೆ ಎಲಮತಿ ಕುಟುಂಬ ಆಕೆಯನ್ನು ಥಳಿಸಿ, ತಮ್ಮೊಂದಿಗೆ ಎಳೆದೊಯ್ದಿದೆ. ಇದರಿಂದ ದಿಕ್ಕೇ ತೋಚದಂತಾದ ಪತಿ ಸೆಲ್ವನ್​, ತನ್ನ ಪತ್ನಿಯನ್ನು ಆಕೆಯ ಮನೆಯವರು ಇಚ್ಛೆಗೆ ವಿರುದ್ಧವಾಗಿ ಎಳೆದೊಯ್ದಿದ್ದಾರೆಂದು ದೂರು ನೀಡಲು ಪೊಲೀಸ್​ ದೂರು ನೀಡಲು ಹೋದರೆ ದೂರು ದಾಖಲಿಸಿಕೊಳ್ಳದೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ.

ಎಲಮತಿ ಕುಟುಂಬ ಅಣ್ಣಾ ಡಿಎಂಕೆ ಪಕ್ಷದ ಮಾಜಿ ಸಚಿವರ ಆಪ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಒತ್ತಡವಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ತವರು ಮನೆಯಲ್ಲಿರುವ ಎಲಮತಿ ಇತ್ತೀಚೆಗೆ ಸೆಲ್ವನ್​ಗೆ ವಾಟ್ಸ್​ಆ್ಯಪ್​ ಸಂದೇಶ ಕಳುಹಿಸಿದ್ದು, ಅದರಲ್ಲಿ " ಇಲ್ಲಿ ತನ್ನನ್ನು ಕೊಂದು ಬಿಡುತ್ತಾರೆ. ಹೇಗಾದರೂ ಕಾಪಾಡು" ಎಂದು ಕೇಳಿಕೊಂಡಿದ್ದಾಳೆ. 

ಕೊನೆಗೆ ಯಾವುದೇ ದಾರಿ ಕಾಣದೆ ಸೆಲ್ವನ್​ ಮಾಧ್ಯಮಗಳ ಮುಂದೆ ಬಂದು ಅಳಲು ತೋಡಿಕೊಂಡಿದ್ದಾನೆ. ಮಾಧ್ಯಮಗಳು ಈ ಬಗ್ಗೆ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article