-->
ನಟಿ ಶ್ರುತಿ ಲೇಡಿ ವಿಲನ್ ಗೆಟ್ ಅಪ್ ನಲ್ಲಿ ಕಾಣಿಸಿಕೊಂಡಿದ್ದಾರೆ: ನಾಯಕಿ ನಟಿಯನ್ನು ಹೀಗೂ ತೋರಿಸಬಹುದೇ!

ನಟಿ ಶ್ರುತಿ ಲೇಡಿ ವಿಲನ್ ಗೆಟ್ ಅಪ್ ನಲ್ಲಿ ಕಾಣಿಸಿಕೊಂಡಿದ್ದಾರೆ: ನಾಯಕಿ ನಟಿಯನ್ನು ಹೀಗೂ ತೋರಿಸಬಹುದೇ!

ಬೆಂಗಳೂರು: ಅಳುಮುಂಜಿ ಪಾತ್ರದಲ್ಲೇ ಮಿಂಚುತ್ತಿದ್ದ ಇತ್ತೀಚಿನ ಕೆಲ ವರ್ಷಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ‌. ಇದೀಗ ಅವರು ಯುವ ನಿರ್ದೇಶಕ ಹರ್ಷ ನಿರ್ದೇಶನದಲ್ಲಿ ಮೂಡಿ ಬಂದ ಭಜರಂಗಿ 2 ಸಿನಿಮಾದಲ್ಲಿ ಖಡಕ್ ಲೇಡಿ ವಿಲನ್ ಪಾತ್ರ ಮಾಡಿದ್ದಾರೆ.

‘ಹಲವಾರು ನಿರ್ದೇಶಕರುಗಳು ಕೆಲ ಹೀರೋಗಳನ್ನು ಸೃಸ್ಟಿಸಿದ್ದಾರೆ. ಆದರೆ ವಿಲನ್​ಗಳನ್ನು ಯಾರಾದರೂ ಹುಟ್ಟುಹಾಕುತ್ತಾರೆ ಎಂದರೆ ಅದು ಹರ್ಷ ಮಾತ್ರ …’ ಎಂದು ಶ್ರುತಿ ಹೇಳಿದ್ದಾರೆ. ಈ ರೀತಿ ಅವರು ಹೇಳುವುದಕ್ಕೂ ಕಾರಣವಿದೆ. ಚಿತ್ರವಿಚಿತ್ರ ವಿಲನ್​ಗಳನ್ನು ಸೃಷ್ಟಿಸುವುದರಲ್ಲಿ ನಿರ್ದೇಶಕ ಹರ್ಷರದ್ದು ಎತ್ತಿದಕೈ.

 ‘ಭಜರಂಗಿ 2’ ಸಿನಿಮಾದ ಮೂಲಕ ಹರ್ಷ ಮೂವರು ಹೊಸ ವಿಲನ್​ಗಳನ್ನು ತೆರೆಯ ಮೇಲೆ ಪರಿಚಯಿಸಿದ್ದಾರೆ. ಅದರ ಜೊತೆಯಲ್ಲಿ ನಾಯಕಿಯಾಗಿದ್ದ ಶ್ರುತಿಯನ್ನು ಮೊದಲ ಬಾರಿಗೆ ವಿಲನ್ ಆಗಿ ಪರಿಚಯಿಸುತ್ತಿದ್ದಾರೆ. ಅದರಲ್ಲೂ ರಗಡ್ ಲುಕ್, ವಿಭಿನ್ನ ಗೆಟಪ್, ಕೈಯಲ್ಲೊಂದು ಚುಟ್ಟ ಕೊಟ್ಟು ನೋಡಿದವರ ಎದೆಯಲ್ಲಿ ನಡುಕು ಸೃಷ್ಟಿಸುವ ಮುಖಭಾವದ ಮೂಲಕ. 

ಯಾರಾದರೂ ನೋಡಿದರೆ ಇದು ನಿಜಕ್ಕೂ ಶ್ರುತಿ ಅವರೇನಾ? ಎಂದು ಅನುಮಾನಿವಷ್ಟು ಶ್ರುತಿ ಗೆಟ್ ಅಪ್ ಈ ಸಿನಿಮಾದಲ್ಲಿದೆ. ‘ಹರ್ಷ ನನಗೆ ಈ ಪಾತ್ರವನ್ನು ತಾನು ಮಾಡಬೇಕೆಂದು  ಕೇಳಿಕೊಂಡಾಗ, 'ನಾನೇ ಈ ತರಹದ್ದೊಂದು ಪಾತ್ರ ಮಾಡಬೇಕೆಂಬ ಕಲ್ಪನೆ ಏಕೆ ಬಂತು' ಎಂದು ಕೇಳಿದ್ದೆ. ಅದಕ್ಕೆ ಆತ 'ನೀವು ಈ ಪಾತ್ರ ಮಾಡಿದಲ್ಲಿ ವಿಭಿನ್ನವಾಗಿರುತ್ತದೆ‌. ನೀವೇ ಮಾಡಬೇಕು' ಎಂದರು. ಏನೋ ಧೈರ್ಯ ಮಾಡಿ ಈ ಸಿನಿಮಾ ಒಪ್ಪಿಕೊಂಡುಬಿಟ್ಟೆ. ಪಾತ್ರ ಬಹಳ ಖಡಕ್ ಆಗಿರುತ್ತದೆ ಎಂದು ಹೇಳಿದ್ದರು. ಆದರೆ, ಈ ತರಹದ ಇಫೆಕ್ಟ್​ಗಳಿರುತ್ತವೆ ಎಂದು ಹೇಳಿರಲಿಲ್ಲ. ಜೊತೆಗೆ ಮನೆಗೆ ಅಡ್ವಾನ್ಸ್ ಬರುತ್ತದೆ ಎಂದುಕೊಂಡಿದ್ದೆ. ಆದರೆ ಒಂದು ಕವರ್ ಬಂತು. ಅದರಲ್ಲಿ ಚುಟ್ಟ ಕಳಿಸಿದ್ದರು. ದಯವಿಟ್ಟು ಚಿತ್ರಕ್ಕಾಗಿ ಅಭ್ಯಾಸ ಮಾಡಿ ಎಂದು ಹೇಳಿದ್ದರು’ ಎಂದು ಈ ಬಗ್ಗೆ ನೆನಪಿಸಿಕೊಳ್ಳುತ್ತಾರೆ ಶ್ರುತಿ.

ಮೊದಲ ದಿನ ಆ ಲೇಡಿ ವಿಲನ್ ಗೆಟ್ ಅಪ್ ಹಾಕಿಕೊಂಡಾಗ ಬಹಳ ಹೆದರಿಕೆ ಆಗಿತ್ತು. ನನ್ನನ್ನು ನೋಡಿದವರು ಹೆದರುವ ಬದಲು ಎಲ್ಲಿ ನಗುತ್ತಾರೋ ಎಂಬ ಅಂಜಿಕೆಯಿತ್ತು. ಆದರೆ,  ಖಂಡಿತಾ ಯಾರೂ ನಗುವುದಿಲ್ಲ ಎಂಬ ನಂಬಿಕೆ ಹರ್ಷರಲ್ಲಿತ್ತು. ಕ್ಯಾರಾವಾನ್ ಇಳಿದು ಬರುತ್ತಿದ್ದಂತೆಯೇ, ಶಿವಣ್ಣ ನೋಡಿ ಎಷ್ಟು ವಿಭಿನ್ನವಾಗಿ ಕಾಣ್ತಿದ್ದೀಯ ಎಂದು ಹೇಳಿದರು. ಬಹುಶಃ ಅವರೆಲ್ಲಾ ವಿಶ್ವಾಸ ತುಂಬದಿದ್ದರೆ, ಆ ಪಾತ್ರವನ್ನು ಮಾಡಲು ಸಾಧ್ಯವಾಗುತ್ತಿರಲೇ ಇಲ್ಲ‌.

ನಾನು ಸಿನಿಮಾ ರಂಗಕ್ಕೆ ಬಂದು 30 ವರ್ಷವಾಯಿತು. ಓರ್ವ ನಾಯಕಿಯನ್ನು ಈ ರೀತಿಯಲ್ಲೂ ತೋರಿಸಬಹುದೆಂದು ಯಾರೂ ಪ್ರಯತ್ನ ಮಾಡಲಿಲ್ಲ. ಆದರೆ, ಹರ್ಷ ಅದನ್ನು ಮಾಡಿ ತೋರಿಸಿದ್ದಾರೆ ಎಂದು ಹೇಳುತ್ತಾರೆ ಶ್ರುತಿ.

Ads on article

Advertise in articles 1

advertising articles 2

Advertise under the article