ಹಾಸನ: ಕರ್ತವ್ಯದಲ್ಲಿರುವಾಗಲೇ ಪೊಲೀಸ್ ಸಮವಸ್ತ್ರ ಧರಿಸಿಕೊಂಡೇ ಪೊಲೀಸರಿಬ್ಬರು ಮದ್ಯಪಾನ ಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿರುವ ಘಟನೆ ಹಾಸನ ಜಿಲ್ಲೆಯ ಲಕ್ಷ್ಮೀಪುರಂ ಬಡಾವಣೆಯಲ್ಲಿರುವ ಬಾರೊಂದರಲ್ಲಿ ಆಗಿದೆ.
ಬಾರ್ ನ ಪ್ರತ್ಯೇಕ ಕೊಠಡಿಯೊಂದರಲ್ಲಿ ಇಬ್ಬರು ಸಮವಸ್ತ್ರದಲ್ಲಿದ್ದ ಪೊಲೀಸರು, ಸಮವಸ್ತ್ರದಲ್ಲಿರದ ಮತ್ತೋರ್ವ ವ್ಯಕ್ತಿ ಸೇರಿ ಮದ್ಯಪಾನ ಮಾಡುತ್ತಿದ್ದರು. ಈ ಸಂದರ್ಭ ಸಾರ್ವಜನಿಕರೊಬ್ಬರು ಆ ಕೊಠಡಿಗೆ ಪ್ರವೇಶಿಸಿದ್ದಾರೆ. ಈ ಬಗ್ಗೆ ಅವರನ್ನು ಸಾರ್ವಜನಿಕರು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿರುವ ವೀಡಿಯೋ ಇದೀಗ ವೈರಲ್ ಆಗಿದೆ.
ಸಾರ್ವಜನಿಕರು ಪೊಲೀಸರನ್ನು 'ನೀವು ಸಮವಸ್ತ್ರ ಧರಿಸಿಕೊಂಡು ಮದ್ಯಪಾನ ಮಾಡುವುದು ಸರಿಯೇ ಎಂದು ಪ್ರಶ್ನಿಸಿ, ಜನಸಾಮಾನ್ಯರು ತಪ್ಪು ಮಾಡಿದರೆ ಗೋಳು ಹೊಯ್ದುಕೊಳ್ಳುವ ನೀವೇ ಹೀಗೆ ತಪ್ಪು ಮಾಡಿದರೆ ಹೇಗೆ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾರ್ವಜನಿಕರ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಾಗದೆ ಪೊಲೀಸರು ತಬ್ಬಿಬ್ಬಾಗಿರುವ, ಮದ್ಯಪಾನ ಮಾಡುತ್ತಿರುವ ದೃಶ್ಯವು ಈ ವೀಡಿಯೋದಲ್ಲಿ ಸೆರೆಯಾಗಿದೆ.
ಪೊಲೀಸ್ ಸಮವಸ್ತ್ರದಲ್ಲಿಯೇ ಮದ್ಯಪಾನ ಮಾಡಿ ಸಿಕ್ಕಿಬಿದ್ದಿರುವ ಪೊಲೀಸರು ಹಾಸನದ ಪೆನ್ಷನ್ ಮೊಹಲ್ಲಾ ಠಾಣೆಯ ಸಿಬ್ಬಂದಿ ಎನ್ನಲಾಗಿದೆ. ಇವರೊಂದಿಗಿದ್ದ ಸಮವಸ್ತ್ರದ ಧರಿಸದ ವ್ಯಕ್ತಿ ಪೊಲೀಸ್ ಹೌದೋ ಅಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ.