ಪತ್ನಿ ಫೋಟೋಗೆ ಹಾಕಲು ಹೂವಿನ ಹಾರ ತರಲು ಹೋದ ಪತಿಯ ಮೇಲೆ ಟೆಂಪೊ ಹರಿದು ಮೃತ್ಯು


ಯಳಂದೂರು: ಮೃತ ಪತ್ನಿಯ ಭಾವಚಿತ್ರಕ್ಕೆ ಹಾಕಲೆಂದು ಹೂ ತರಲು ಹೋದ ಪತಿಯ ಮೇಲೆಯೇ ಟೆಂಪೋ ಹರಿದು ಸ್ಥಳದಲ್ಲಿಯೇ ಆತ ದುರಂತ ಅಂತ್ಯ ಕಂಡ ಹೃದಯ ವಿದ್ರಾವಕ ಘಟನೆ ಚಾಮರಾಜನಗರ ಜಿಲ್ಲೆ ಯಳಂದೂರು ಪಟ್ಟಣದಲ್ಲಿ ಸಂಭವಿಸಿದೆ.

ಯರಗಂಬಳ್ಳಿ ಗ್ರಾಮದ ಮರಿಸ್ವಾಮಿ(40) ಮೃತಪಟ್ಟ ದುರ್ದೈವಿ. 

ಮರಿಸ್ವಾಮಿಯವರ ಪತ್ನಿ ಇತ್ತೀಚೆಗೆ ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದರು. ಅಗಲಿದ ಪತ್ನಿಯ ಫೋಟೊವನ್ನು ಮನೆಯಲ್ಲಿ ಇರಿಸಲಾಗಿದ್ದು, ಆ ಫೋಟೊಗೆ ಹಾಕಲೆಂದು ಬೆಳಗ್ಗೆ ಹೂ ಖರೀದಿಸಲು ಮರಿಸ್ವಾಮಿ ಪಟ್ಟಣಕ್ಕೆ ಬಂದಿದ್ದರು. ಯಳಂದೂರು ಪಟ್ಟಣದ ಬಸ್ ನಿಲ್ದಾಣ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅವರು ನಡೆದುಕೊಂಡು ಮರಿಸ್ವಾಮಿ ಹೋಗುತ್ತಿದ್ದರು. 

ಈ ವೇಳೆ ಅಲ್ಲಿಗೆ ಬಂದ ಟೆಂಪೋವೊಂದು ಅವರಿಗೆ ಗುದ್ದಿ, ರಸ್ತೆಗೆ ಬಿದ್ದ ಮರಿಸ್ವಾಮಿಯವರ ತಲೆಯ ಮೇಲೆಯೇ ಹರಿದಿದೆ. ಪರಿಣಾಮ ಅವರ ತಲೆ ನಜ್ಜುಗುಜ್ಜಾಗಿ, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟೆಂಪೋ ಚಾಲಕ ಸ್ಥಳದಲ್ಲಿಯೇ ವಾಹನ ಬಿಟ್ಟು ಪರಾರಿಯಾಗಿದ್ದಾ‌ನೆ. ಸೊಸೆಯನ್ನು ಕಳೆದುಕೊಂಡ ಬೆನ್ನಲ್ಲೇ ಮಗನ ಸಾವಿನ ಸುದ್ದಿಕೇಳಿ ಮೃತರ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಅವಘಡ ಸಂಭವಿಸಿರುವ ಪಟ್ಟಣದ ರಾಷ್ಟ್ರೀಯ  ಹೆದ್ದಾರಿ ಕಿರಿದಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕಿರಿದಾದ ರಸ್ತೆಯಾಗಿರುವುದರಿಂದ ಇಲ್ಲಿ ಆಗಿಂದಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇವೆ.