ಮಂಗಳೂರು ಮಹಾನಗರ ಪಾಲಿಕೆಯ ಘನ ತ್ಯಾಜ್ಯ ವಿಲೇವಾರಿ ದುಬಾರಿಯಾಗಿ ಪರಿಣಮಿಸುತ್ತಿದೆ. ಕಳೆದ ಒಂದು ದಶಕದಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ಮುಂಬೈ ಮೂಲದ ಆಂಟನಿ ವೇಸ್ಟ್ ಸಂಸ್ಥೆಗೆ ನೀಡಿದ್ದ ಗುತ್ತಿಗೆ ಮುಕ್ತಾಯಗೊಂಡಿದೆ.
ಈ ಹಿನ್ನೆಲಯಲ್ಲಿ ಹೊಸ ಗುತ್ತಿಗೆದಾರರನ್ನು ನೇಮಕ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಈಗಾಗಲೇ ಕರೋನಾ ಸಂಕಷ್ಟ, ಆದಾಯದಲ್ಲಿ ಕುಸಿತ, ಬೆಲೆ ಏರಿಕೆ, ನಿರುದ್ಯೋಗದಿಂದ ಕಂಗೆಟ್ಟ ಜನರಿಗೆ ಮತ್ತೊಂದು ಹೊರೆ ಬೀಳಲಿದೆಯೇ ಎಂಬ ಆತಂಕ ಮನೆ ಮಾಡಿದೆ.
ಈ ಮಧ್ಯೆ, ತ್ಯಾಜ್ಯ ವಿಲೇವಾರಿ ಹೊಣೆಯನ್ನು ತೆಗೆದುಕೊಳ್ಳುವಂತೆ ಕಾಂಗ್ರೆಸ್ ನಿಯೋಗ ರಾಮಕೃಷ್ಣ ಮಠಕ್ಕೆ ಮನವಿ ಮಾಡಿದೆ.
ಸ್ವಚ್ಛ ಭಾರತ್ ಅಭಿಯಾನದಲ್ಲಿ ಮಂಗಳೂರಿನ ವಿವಿಧೆಡೆ ಸ್ವಚ್ಚತಾ ಆಂದೋಲನ ಮಾಡಿದ್ದ ರಾಮಕೃಷ್ಣ ಮಠದ ಸಾಮಾಜಿಕ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿತ್ತು.
ಪ್ರತಿ ಭಾನುವಾರ ನಗರದ ಉತ್ಸಾಹಿ ಯುವಕ-ಯುವತಿರನ್ನು ಒಗ್ಗೂಡಿಸಿ ನಗರದ ವಿವಿಧ ಪ್ರದೇಶಗಳನ್ನು ಶುಚಿಗೊಳಿಸಿ ಬಣ್ಣ ಬಳಿದು ಕಂಗೊಳಿಸುವಂತೆ ಮಾಡಿದ ರಾಮಕೃಷ್ಣ ಮಿಷನ್ ಸ್ವಚ್ಚತೆಯ ವಿಷಯದಲ್ಲಿ ಸದಾ ಮುಂದೆ ಇರುತ್ತದೆ.
ಹಾಗಾಗಿ, ಕಡಿಮೆ ವೆಚ್ಚದಲ್ಲಿ ಕಸ ವಿಲೇವಾರಿ ಮಾಡಿ ನಾಗರಿಕರ ಹೊರೆ ಇಳಿಸುವಂತೆ ಮಾಡಲು ರಾಮಕೃಷ್ಣ ಮಠ ಬಿಟ್ಟರೆ ಇನ್ನೊಂದು ಆಯ್ಕೆ ಇಲ್ಲ ಎಂದು ಕೈ ನಿಯೋಗ ಮನವಿ ಮಾಡಿದ್ದು, ಈ ಜವಾಬ್ದಾರಿಯನ್ನು ಮಂಗಳೂರು ಜನರ ಪರವಾಗಿ ಹೊರುವಂತೆ ನಿಯೋಗ ಒತ್ತಾಯಿಸಿದೆ.
ಮಾಜಿ ಶಾಸಕ ಜೆ.ಆರ್.ಲೋಬೋ, ಪ್ರತಿಪಕ್ಷ ನಾಯಕ ಎ.ಸಿ. ವಿನಯರಾಜ್, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಜೆಸಿಂತಾ ಆಲ್ಫ್ರೆಡ್ ಮೆನೆಜಸ್, ಪ್ರತಿಪಕ್ಷ ನಾಯಕ ಎ.ಸಿ. ವಿನಯರಾಜ್, ಟಿ.ಕೆ.ಸುಧೀರ್ ಸೇರಿದಂತೆ ಗಣ್ಯರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

