ಮಲಗಿದ್ದ ಬಾಲಕಿಯ ಕೊರಳು ಸುತ್ತಿ ಬುಸ್ ಎಂದ ನಾಗಪ್ಪ: ಕೊನೆಗೆ ಆಕೆಯನ್ನು ಕಚ್ಚಿ ಹರಿದು ಹೋದ ಹಾವು



ವಾರ್ಧಾ (ಮಹಾರಾಷ್ಟ್ರ): ಮಲಗಿದ್ದ ಬಾಲಕಿಯ ಕೊರಳನ್ನು 2 ಗಂಟೆಗಳ ಕಾಲ ಸುತ್ತಿಕೊಂಡಿದ್ದ ನಾಗರ ಹಾವೊಂದು ಕೊನೆಗೆ ಆಕೆಗೆ ಕಚ್ಚಿ ಅಲ್ಲಿಂದ ಹೋದ ಘಟನೆಯೊಂದು ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದಿದೆ. 

ಮಧ್ಯರಾತ್ರಿ ಸುಮಾರು 12-1 ಗಂಟೆಯ ಆಸುಪಾಸಿನಲ್ಲಿ 7 ವರ್ಷದ ಬಾಲಕಿ ಮಲಗಿದ್ದ ಸಮಯದಲ್ಲಿ ನಾಗರಹಾವು ಬಂದು ಕುತ್ತಿಗೆಗೆ ಸುತ್ತಿಕೊಂಡಿದೆ. ಆದರೆ ಇದರ ಅರಿವು ಇರದ ಬಾಲಕಿ ಹಾಗೆಯೇ ಮಲಗಿದ್ದಳು. ಅದರ ಬುಸ್‌ ಬುಸ್‌ ಸದ್ದಿನಿಂದ ಮನೆಮಂದಿ  ಎಚ್ಚರಗೊಂಡಿದ್ದಾರೆ. 

ಎದ್ದು ನೋಡಿದಾಗ ಹಾವು ಬಾಲಕಿಯ ಕೊರಳನ್ನು ಸುತ್ತಿ ಹೆಡೆ ಎತ್ತಿ ನಿಂತಿದೆ. ಏನು ಮಾಡುವುದೆಂದು ಅರಿಯದೆ ತಕ್ಷಣ ಉರಗ ತಜ್ಞನಿಗೆ ಕರೆ ಮಾಡಿದ್ದಾರೆ. ಆದರೆ ಹಾವು ಸಂಪೂರ್ಣ ಕುತ್ತಿಗೆಗೆ ಸುತ್ತಿಕೊಂಡಿದ್ದರಿಂದ ಅದನ್ನು ಹಿಡಿಯುವುದು ಉರಗತಜ್ಞನಿಗೂ ಕಷ್ಟವಾಯಿತು. 

ಸ್ವಲ್ಪ ಹತ್ತಿರ ಹೋದರೂ ಹಾವು ಬುಸ್ ಬುಸ್ ಎನ್ನುತ್ತಿತ್ತು. ಅಲ್ಲದೆ ಬಾಲಕಿಗೆ ಕಚ್ಚುವ ಸಾಧ್ಯತೆ ಇತ್ತು. ಆದರೂ ತನ್ನ ಕೈಯಲ್ಲಾದ ಪ್ರಯತ್ನ  ಹಾವನ್ನು ಹಿಡಿಯಲು ಆತನಿಗೆ ಸಾಧ್ಯವಾಗಿರಲಿಲ್ಲ. ಎಲ್ಲರೂ ಅಸಹಾಯಕರಾಗಿದ್ದರೇ ಹೊರತು ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ನಡುವೆ ಬಾಲಕಿಗೆ ಎಚ್ಚರವಾಗಿಬಿಟ್ಟಿದೆ. ಆಕೆ ಅಲುಗಾಡುತ್ತಿರುವಂತೆ ಹಾವು ಆಕೆಯನ್ನು ಕಚ್ಚಿ ಅಲ್ಲಿಂದ ಹೋಗಿದೆ. ವಿಷವೇರಿ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಮುಂದುವರೆದಿದೆ. ಘಟನೆಯ ದೃಶ್ಯವನ್ನು ಯಾರೋ ವೀಡಿಯೋ ಮಾಡಿದ್ದಾರೆ. ಅದರ ವಿಡಿಯೋ ವೈರಲ್‌ ಆಗಿದೆ.