ಕೊರೋನಾದಿಂದ ಮೃತಪಟ್ಟ ವಕೀಲರಿಗೆ ಭಾರೀ ಮೊತ್ತದ ಪರಿಹಾರ ನೀಡುವಂತೆ ಕೋರಿ ವಕೀಲರೊಬ್ಬರು ಸುಪ್ರೀಮ್ ಕೋರ್ಟ್ ಮುಂದೆ ಅರ್ಜಿಯೊಂದನ್ನು ಸಲ್ಲಿಸಿದ್ದರು. ಇದನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕೊರೋನಾದಿಂದಾಗಿ ಮೃತಪಟ್ಟ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಕೀಲರ ಕುಟುಂಬಕ್ಕೆ ರೂ.50 ಲಕ್ಷ ಪರಿಹಾರ ನೀಡುವಂತೆ ಅರ್ಜಿಯಲ್ಲಿ ಕೋರಿಕೆ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು 'ಇದೊಂದು ಪ್ರಚಾರ ಹಿತಾಸಕ್ತಿ ಅರ್ಜಿ'ಯಾಗಿದೆ. ನೀವು ಕಪ್ಪು ಕೋಟು ಧರಿಸಿದ್ದೀರಿ ಎಂದ ಮಾತ್ರಕ್ಕೆ ನಿಮ್ಮ ಜೀವ ಇತರರಿಗಿಂತ ಹೆಚ್ಚು ಅಮೂಲ್ಯ ಎಂದರ್ಥವಲ್ಲ ಎಂದು ಹೇಳಿತು.
ಇಂತಹ ಹುಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸದಂತೆ ವಕೀಲರನ್ನು ತಡೆಯುವ ಕಾಲ ಬಂದಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.
ಕೊರೋನಾದಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ, ಕೇವಲ ವಕೀಲರಿಗೆ ಮಾತ್ರವೇ ಯಾವುದೇ ರೀತಿಯ ವಿನಾಯಿತಿ ಸೃಷ್ಟಿಸಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ತಿಳಿಸಿದೆ.
