ಕಡಬ: ಪೊಲೀಸ್ ಪೇದೆಯೇ ಅಪ್ರಾಪ್ತೆಯ ಗರ್ಭಿಣಿಯನ್ನಾಗಿಸಿ, ಅಬಾರ್ಷನ್ ಮಾಡಿಸಿದ ಆರೋಪ: ದೂರು ದಾಖಲು

ಕಡಬ: ಪೊಲೀಸ್​ ಪೇದೆಯೇ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದಲ್ಲದೆ, ಗರ್ಭವತಿಯಾದ ಆಕೆಯ ಗರ್ಭಪಾತವನ್ನು ಮಾಡಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ‌ ಆರೋಪಿ ಕಡಬ ಪೊಲೀಸ್ ಠಾಣೆಯ ಕಾನ್​ಸ್ಟೇಬಲ್ ಶಿವರಾಜ್ ವಿರುದ್ಧ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. 

ಎರಡು ವರ್ಷಗಳ ಹಿಂದೆ ತನ್ನ ಮಗಳ ಮೇಲೆ ಅತ್ಯಾಚಾರ ನಡೆದಿತ್ತು. ಆ ಪ್ರಕರಣ ಆರು ತಿಂಗಳ ಹಿಂದೆಯಷ್ಟೇ ಮುಗಿದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ಶಿವರಾಜ್ ದಾಖಲೆಗಳು, ಸಮನ್ಸ್ ನೀಡುವ ವಿಚಾರಕ್ಕೆ ಮನೆಗೆ ಬರುತ್ತಿದ್ದ. ಆಗ ಆತ ಅಪ್ರಾಪ್ತೆಯಾದ ನನ್ನ ಮಗಳ ಪರಿಚಯ ಮಾಡಿಕೊಂಡಿದ್ದ. ಬಳಿಕ ಪ್ರಕರಣ ಮುಗಿದರೂ ನಾನಾ ಕಾರಣ ಹೇಳಿಕೊಂಡು ನಮ್ಮ ಮನೆಗೆ ಬಂದು ಹೋಗುತ್ತಿದ್ದ. ಕ್ರಮೇಣ ಮದುವೆ ಆಗುವುದಾಗಿ ನಂಬಿಸಿ ನನ್ನ ಮಗಳೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. 

ಆದರೆ, ಇತ್ತೀಚೆಗೆ ಮಗಳ ದೈಹಿಕ ಬೆಳವಣಿಗೆಯಲ್ಲಿ ಏರುಪೇರಾಗಿ ಮಗಳು ಗರ್ಭಿಣಿ ಆಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಮಗಳನ್ನು ವಿಚಾರಿಸಿದಾಗ ಕಡಬ ಪೊಲೀಸ್ ಸಿಬ್ಬಂದಿ ಶಿವರಾಜ್ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪರಿಣಾಮ ಇದೀಗ ಐದೂವರೆ ತಿಂಗಳ ಗರ್ಭವತಿಯಾಗಿರುವುದಾಗಿ ಬಾಯಿ ಬಿಟ್ಟಿದ್ದಾಳೆ. ಇದೇ ವೇಳೆ ನಾನು ಶಿವರಾಜ್ ನನ್ನು ಸಂಪರ್ಕ ಮಾಡಿ ಮಗಳನ್ನು ಮದುವೆಯಾಗಬೇಕೆಂದು ಕೇಳಿದ್ದೆ. 

ಆದರೆ ಆತ 'ತಾನು ಆಕೆಯನ್ನು ಮದುವೆಯಾಗುವುದಿಲ್ಲ, ಗರ್ಭಿಣಿ ಆಗಿದ್ದರೆ ಅಬಾರ್ಷನ್ ಮಾಡಿಸುತ್ತೇನೆ. ಅದಕ್ಕೆ ತಗಲುವ ಖರ್ಚು ಕೊಡುತ್ತೇನೆ ಎಂದು ಹೇಳಿದ್ದ. ಇದರಿಂದ ನಾನು ಬಹಳ ಆಘಾತಗೊಳಗಾಗಿದ್ದೆ. ಈ ನಡುವೆ ಸೆ.18ರಂದು ನನ್ನ ಹೆಂಡತಿ ಹಾಗೂ ಮಗಳು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ವಾಪಸ್ ಮನೆಗೆ ಬಂದಿಲ್ಲ' ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ‌ ಶಿವರಾಜ್​ ಅತ್ಯಾಚಾರದ ವಿಚಾರವನ್ನು ತನ್ನ ಪ್ರಭಾವ ಬಳಸಿ ಮುಚ್ಚಿಡಲು ಯತ್ನಿಸಿದ್ದರೂ, ಅದು ಸೋಷಿಯಲ್ ಮೀಡಿಯಾಗಳ ಮೂಲಕ ವೈರಲ್​ ಆಗಿತ್ತು. ಈ ಬಗ್ಗೆ ವರದಿ ಮಾಡದಂತೆ ಪತ್ರಕರ್ತರಿಗೆ ಪೊಲೀಸರು ದುಂಬಾಲು ಬೀಳುತ್ತಿರುವ ವೀಡಿಯೋ ಸಹ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಿಯನ್ನು ಅಮಾನತುಗೊಳಿಸಿ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹೇಳಿಕೊಂಡಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ಅಥವಾ ಸಾರ್ವಜನಿಕರು ಹೆಸರು ಉಲ್ಲೇಖಿಸಿ ದೂರು ನೀಡಿದಲ್ಲಿ ಆರೋಪಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪುತ್ತೂರು ಎಎಸ್‌ಪಿ ಗಾನ ಪಿ. ಕುಮಾರ್ ತಿಳಿಸಿದ್ದಾರೆ.