objection of power line- ಉಡುಪಿ ಕಾಸರಗೋಡು ವಿದ್ಯುತ್ ಮಾರ್ಗಕ್ಕೆ ವಿರೋಧ: ಎನ್‌ಓಸಿ ನೀಡದಂತೆ ಸ್ಥಳೀಯಾಡಳಿತಗಳಿಗೆ ರೈತ ಮುಖಂಡ ತಾಕೀತು


ಉಡುಪಿ ಕಾಸರಗೋಡು ವಿದ್ಯುತ್ ಮಾರ್ಗಕ್ಕೆ ವಿರೋಧ

ಎನ್‌ಓಸಿ ನೀಡದಂತೆ ಸ್ಥಳೀಯಾಡಳಿತಗಳಿಗೆ ರೈತ ಮುಖಂಡ ತಾಕೀತು 




ಉಡುಪಿ ಮತ್ತು ಕಾಸರಗೋಡು ಮಧ್ಯೆ ಹಾದು ಹೋಗುವ 400 KV ವಿದ್ಯುತ್ ಮಾರ್ಗ ರಚನೆಗೆ ಸ್ಥಳೀಯಾಡಳಿತ ನಿರಪೇಕ್ಷಣ ಪತ್ರ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ವಿಟ್ಲ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಚಳವಳಿ ನಡೆಸಿ ಬಳಿಕ ಸ್ಥಳೀಯ ಪಂಚಾಯಿತ್‌ಗಳಿಗೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಿದ್ಯುತ್ ತಂತಿ ಹಾದು ಹೋಗುವ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಲಾಗುವುದು ಎಂದರು. ರೈತರಿಗೆ ತೊಂದರೆ ಆಗುವ ಕಾರಣ ಯಾವುದೇ ಕಾರಣಕ್ಕೂ ವಿದ್ಯುತ್ ಮಾರ್ಗ ಮಾಡಲು ಕಂಪೆನಿಗೆ ನಿರಪೇಕ್ಷಣಾ ಪತ್ರ ನೀಡಬಾರದು ಎಂದು ಹೇಳಿದರು.


ಈ ಕುರಿತು ರೈತ ಬೇಡಿಕೆಗಳನ್ನು ಆಡಳಿತಕ್ಕೆ ಸಲ್ಲಿಸಲಾಗುವುದು. ನಮ್ಮ ಮನವಿಯನ್ನು ನಿರ್ಲಕ್ಷಿಸಿ ಪಂಚಾಯಿತಿಗಳು ಎನ್‌ಒಸಿ ನೀಡಿದರೆ ಅಂತಹ ಪಂಚಾಯಿತ್‌ಗಳ ವಿರುದ್ದ ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.




ವಿಟ್ಲ ಪಟ್ಟಣ ಪಂಚಾಯತ್‌ ಹಾಗೂ ವೀರಕಂಬ, ಅನಂತಾಡಿ, ವಿಟ್ಲ-ಮುಡ್ನೂರು, ಕೇಪು, ಪುಣಚ್ಚ, ಅಳಿಕೆ ಗ್ರಾಮ ಪಂಚಾಯತ್‌ಗಳಿಗೆ ರೈತ ನಾಯಕರ ನಿಯೋಗ ಭೇಟಿ ನೀಡಿ, ಅಲ್ಲಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಚಳವಳಿ ಅಭಿಯಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಪುಣಚ ವಲಯಾಧ್ಯಕ್ಷ ಇಸುಬು ಪುಣಚ, ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಕಾರ್ಯದರ್ಶಿಗಳಾದ ಲಕ್ಷ್ಮೀನಾರಾಯಣ ಎಂ., ರೋಹಿತಾಶ್ವ ಭಂಗ ವೀರಕಂಬ, ಕೃಷ್ಣ ಪ್ರಸಾದ್ ವಿ., ರೈತರಾದ ಚೋಮಣ್ಣ  ಮಂಜನಾಡಿ, ಅಣ್ಣು  ಗೌಡ, ಭಾಸ್ಕರ  ಗೌಡ, ಸಂಜೀವ ಎಂ., ವಿಶು ಕುಮಾರ್ ಎಂ., ಡೊಂಬ್ಬಯ್ಯ  ಗೌಡ, ಆನಂದ  ಗೌಡ, ಸ್ಟ್ಯಾನಿ ಮಸ್ಕರೇನಸ್, ರಮಾನಂದ ಶೆಟ್ಟಿ, ಸುಭಾಶ್‌ ರೈ, ಶಿವರಾಮ ಮತ್ತಿತರರು ಹಾಜರಿದ್ದರು.