ಕಿತ್ತೂರು ಕ್ಷೇತ್ರದ ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ್ ಹುಟ್ಟುಹಬ್ಬ ಆಚರಣೆ ವೇಳೆ ಶಾಸಕ ಮಹಾಂತೇಶ್ ದೊಡ್ಡಗೌಡರ್ ಮತ್ತು ಅವರ ಮಡದಿಯನ್ನು ಕುಳ್ಳಿರಿಸಿ, ಪೊಲೀಸ್ ಅಧಿಕಾರಿಗಳು ಹೂವಿನ ಮಳೆ ಸುರಿಸಿದ ಘಟನೆಗೆ ಸಂಬಂಧಿಸಿದಂತೆ ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಸಾತೇನಹಳ್ಳಿ, ನೇಸರಗಿ ಠಾಣೆ ಪಿಎಸ್ಐ ವೈ.ಎಸ್. ಶೀಗಿಹಳ್ಳಿ ಅವರಿಗೆ ಸಂಕಷ್ಟ ಎದುರಾಗಿದ್ದು, ಇಲಾಖೆ ನೋಟಿಸ್ ಜಾರಿಗೊಳಿಸಿದೆ.
ಶಾಸಕ ಮಹಾಂತೇಶ ದೊಡ್ಡಗೌಡರ್ ಮತ್ತು ಅವರ ಪತ್ನಿಯನ್ನು ಕುರಿಸಿ, ಪೊಲೀಸ್ ಅಧಿಕಾರಿಗಳು ಹೂವಿನ ಮಳೆ ಸುರಿದಿರುವುದು ರಾಜ್ಯ ಪೊಲೀಸ್ ಇಲಾಖೆಗೆ ಮುಜುಗರ ತಂದಿದೆ. ಪೊಲೀಸರು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬಾರದು ಎಂಬ ಅಭಿಪ್ರಾಯಗಳು ಕೇಳಿ ಬಂದಿತ್ತು.
ಬೈಲಹೊಂಗಲ ಡಿಎಸ್ಪಿ ಶಿವಾನಂದ ಕಟಗಿ, ಸಿಪಿಐ ಸಾತೇನಹಳ್ಳಿ, ನೇಸರಗಿ ಪೊಲೀಸ್ ಠಾಣೆ ಪಿಎಸ್ಐ ಶೀಗಿಹಳ್ಳಿ, ಎಸ್‌ಐ ವಿಶ್ವನಾಥ್ ಮಲ್ಲನ್ನವರ್, ಪೇದೆಗಳು ಮತ್ತು ಚಾಲಕರು ಶಾಸಕ ಮಹಾಂತೇಶ್ ದೊಡ್ಡಗೌಡರ್ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು.
