ಚಿಕ್ಕಬಳ್ಳಾಪುರ(ಗೌರಿಬಿದನೂರು): ತಾಯಿ-ದೊಡ್ಡಪ್ಪನ ಪ್ರಣಯದಾಟಕ್ಕೆ ಮೂರು ಗಂಡಂದಿರನ್ನು ಕಳೆದುಕೊಂಡು ತವರು ಸೇರಿದ ಮಗಳು ಬಲಿಯಾದ ಘಟನೆ ಗೌರಿಬಿದನೂರು ತಾಲೂಕಿನ ಮಣಿವಾಲದ ವಾಟದಹೊಸಹಳ್ಳಿಯ ನಡೆದಿದೆ. ಸೆ.5ರಂದು ಬಾವಿಯಲ್ಲಿ ಮರದ ಕೊಂಬೆ ಸಹಿತ ನೇಣುಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು.
ಇದೀಗ ಈ ಪ್ರಕರಣಕ್ಕೆ ರೋಚಕ ತಿರುವು ದೊರಕಿದ್ದು, ಮೃತಳ ತಾಯಿ ಮತ್ತು ದೊಡ್ಡಪ್ಪನ ನಡುವಿನ ಅನೈತಿಕ ಸಂಬಂಧದ ಗುಟ್ಟು ಮಗಳ ಕಣ್ಣೆದುರಲ್ಲೇ ರಟ್ಟಾಗಿರುವ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಗೌರಿಬಿದನೂರು ತಾಲೂಕಿನ ಮಣಿವಾಲದ ಫರ್ವಿನಾ ಮುಬಾರಕ್ (22) ಮೃತ ದುರ್ದೈವಿ. 2 ವರ್ಷಗಳ ಹಿಂದೆ ಕುಟುಂಬಸ್ಥರ ಬಲವಂತಕ್ಕೆ ಮದುವೆಯಾಗಿದ್ದ ಫರ್ವಿನಾ ಮುಬಾರಕ್ ಪತಿಯನ್ನು ಬಿಟ್ಟು, ಮಣಿವಾಲದ ಶಿವಪ್ಪ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆ ಬಳಿಕ ಅವಳು ತನ್ನ ಹೆಸರನ್ನು ಶಿಲ್ಪಾ ಎಂಬುದಾಗಿ ಬದಲಿಸಿಕೊಂಡಿದ್ದಳು.
2ನೇ ಪತಿ ಶಿವಪ್ಪ ಅನಾರೋಗ್ಯದಿಂದ ಮೃತಪಟ್ಟಿದ್ದ. ಆ ಬಳಿಕ ವಿನಯ್ ಕುಮಾರ್ ಎಂಬಾತನನ್ನು ವಿವಾಹವಾಗಿದ್ದಳು. ಆತನೂ ಅಪಘಾತದಲ್ಲಿ ಮೃತಪಟ್ಟಿದ್ದ. ಮೂವರೂ ಗಂಡಂದಿರ ಆಸರೆ ತಪ್ಪಿದ ಬಳಿಕ ಕೊನೆಗೆ ಅವಳು ತವರಿಗೇ ಬಂದು ನೆಲೆಸಿದ್ದಳು.
ಆದರೆ ಫರ್ವಿನಾ ಮೃತದೇಹ ಸೆ.5ರಂದು ಏಕಾಏಕಿ ವಾಟದಹೊಸಹಳ್ಳಿ ಗ್ರಾಮದ ಬಾವಿಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆ ಮೃತದೇಹ ಬಾವಿಯಲ್ಲಿ ಪತ್ತೆಯಾಗಿತ್ತು. ಮರದ ಕೊಂಬೆ ಸಹಿತ ಆಕೆಯ ಮೃತದೇಹ ಬಾವಿಗೆ ಬಿದ್ದಂತೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ಮೂವರನ್ನು ವಿವಾಹವಾದರೂ ವೈವಾಹಿಕ ಬದುಕು ಹಾಳಾಯಿತು ಎಂಬ ಕಾರಣಕ್ಕೆ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಳೆಂದು ಜನ ಮಾತನಾಡಿಕೊಳ್ಳುತ್ತಿದ್ದರು.
ಆದರೆ ಪೊಲೀಸರಿಗೆ ಮಾತ್ರ ಇದೊಂದು ಕೊಲೆಯಾಗಿರಬಹುದೆಂಬ ಶಂಕೆ ಮೂಡಿತ್ತು. ಇದರ ಜಾಡುಹಿಡಿದು ಹೊರಟ ಪೊಲೀಸರು 20 ದಿನದೊಳಗೆ ಫರ್ವಿನಾ ಸಾವಿನ ಹಿಂದಿನ ರಹಸ್ಯ ಬಯಲು ಮಾಡಿದ್ದಾರೆ.
ಫರ್ವಿನಾಳನ್ನು ಆಕೆಯ ತಾಯಿ ಗುಲ್ಜಾರ್ ಭಾನು (45) ಹಾಗೂ ದೊಡ್ಡಪ್ಪ ಪ್ಯಾರೇಜಾನ್ ಎಂಬುವರು ಸೇರಿ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದರು. ಇದಕ್ಕೆ ಫರ್ವಿನಾಳ ತಂದೆ ಫಯಾಜ್ (50) ಕೂಡ ಸಾಥ್ ಕೊಟ್ಟಿದ್ದ ಎಂಬ ವಿಚಾರವನ್ನು ಬಯಲಿಗೆಳೆದಿದ್ದರು. ಫರ್ವಿನಾ ಮುಬಾರಕ್ ತಾಯಿ ಗುಲ್ಜಾರ್ ಬಾನು ಹಾಗೂ ಗುಲ್ಜಾರ್ನ ಅಕ್ಕನ ಪತಿ ಪ್ಯಾರೇಜಾನ್ ನಡುವೆ ಅಕ್ರಮ ಸಂಬಂಧ ಇತ್ತು. ಇದು ಫರ್ವಿನಾಳಿಗೆ ಗೊತ್ತಾಗಿದೆ. ಆಕೆ ತಾಯಿ-ದೊಡ್ಡಪ್ಪ ಇಬ್ಬರೂ ಏಕಾಂತದಲ್ಲಿ ಕಣ್ಣಾರೆ ಕಂಡಿದ್ದಳು. ತಮ್ಮ ಅಕ್ರಮ ಸಂಬಂಧದ ಎಲ್ಲಿ ಬಯಲಾಗುತ್ತೋ ಎಂದು ಈ ಕೊಲೆಯ ಸಂಚು ರೂಪಿಸಿದ್ದಾರೆಂದು ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಫರ್ವಿನಾಳನ್ನು ಶ್ರೀನಿವಾಸಚಾರ್ಲಹಳ್ಳಿ ಸಮೀಪದ ಮಾವಿನ ತೋಪಿಗೆ ಕರೆಸಿಕೊಂಡ ಆರೋಪಿಗಳು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ಬಾವಿಯಲ್ಲಿ ಬಿಸಾಡಿ ಹೋಗಿದ್ದರು. ಬಳಿಕ ಫರ್ವಿನಾ ಆತ್ಮಹತ್ಯೆ ಮಾಡಿದ್ದಾಳೆಂದು ನಾಟಕವಾಡಿದ್ದರು.