-->
ಡಬ್ ಮ್ಯಾಶ್ ವೀಡಿಯೋದಿಂದ ಅಮಾನತುಗೊಂಡ ಲೇಡಿ ಪೊಲೀಸ್ ಕಾನ್ ಸ್ಟೇಬಲ್ ಗೆ ಬಂತು ಬಿಗ್ ಆಫರ್ಸ್: ಇದರ ಬೆನ್ನಲ್ಲೇ ಪೊಲೀಸ್ ಇಲಾಖೆ ಶಾಕ್

ಡಬ್ ಮ್ಯಾಶ್ ವೀಡಿಯೋದಿಂದ ಅಮಾನತುಗೊಂಡ ಲೇಡಿ ಪೊಲೀಸ್ ಕಾನ್ ಸ್ಟೇಬಲ್ ಗೆ ಬಂತು ಬಿಗ್ ಆಫರ್ಸ್: ಇದರ ಬೆನ್ನಲ್ಲೇ ಪೊಲೀಸ್ ಇಲಾಖೆ ಶಾಕ್

ಆಗ್ರಾ: ಉತ್ತರ ಪ್ರದೇಶ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಓರ್ವರು ಕರ್ತವ್ಯದಲ್ಲಿರುವಾಗಲೇ ಪೊಲೀಸ್ ಯೂನಿಫಾರ್ಮ್ ಧರಿಸಿ, ಡಬ್​ಸ್ಮ್ಯಾಶ್​ ವೀಡಿಯೋ ಚಿತ್ರೀಕರಿಸಿ, ಇನ್​​ಸ್ಟಾಗ್ರಾಂನಲ್ಲಿ ಹರಿಯಬಿಟ್ಟು, ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ ಅಮಾನತು ಆಗುತ್ತಿರುವಾಗಲೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿರುವುದು, ಬಳಿಕ ಆಕೆಗೆ ಮಾಡೆಲಿಂಗ್, ವೆಬ್ ಸೀರೀಸ್ ಗಳಲ್ಲಿ ನಟಿಸಲು ಅವಕಾಶ ದೊರಕುತ್ತಿದೆ ಎಂಬುದು ಇತ್ತೀಚೆಗೆ ಸುದ್ದಿಯಾಗಿತ್ತು. ಆದರೆ ಇದೀಗ ಆಕೆಯ ರಾಜೀನಾಮೆ ಅಂಗೀಕಾರಕ್ಕೂ ಮುನ್ನ ಪೊಲೀಸ್​ ಇಲಾಖೆ ಶಾಕ್​ ನೀಡಿದೆ ಎಂಬ ಹೊಸ ಸುದ್ದಿಯೊಂದು ಹರದಾಡುತ್ತಿದೆ.

ಲೇಡಿ ಕಾನ್ಸ್​ಟೇಬಲ್​ ಪ್ರಿಯಾಂಕಾ ಮಿಶ್ರಾ ಸಮವಸ್ತ್ರ ಧರಿಸಿ ಪೊಲೀಸ್ ಸ್ಟೇಷನ್ ನಲ್ಲಿಯೇ ರಂಗ್​ಬಾಜಿ ಸಿನಿಮಾ ಡೈಲಾಗ್​ಗೆ ಲಿಪ್​ ಸಿಂಕ್​ ಮಾಡಿರುವ ವೀಡಿಯೋವನ್ನು ಕೆಲ ತಿಂಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದರು. ಈ ವೀಡಿಯೋದಲ್ಲಿ ಉತ್ತರ ಪ್ರದೇಶದ ಕ್ರೈಂ ಅನ್ನು ವೈಭವೀಕರಿಸುವ ಡೈಲಾಗ್​ ಅನ್ನು ಪ್ರಿಯಾಂಕಾ ಮಿಶ್ರಾ ಹೇಳಿದ್ದರು.  

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಪ್ರಿಯಾಂಕಾ ಮಿಶ್ರಾ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದರು. ಪೊಲೀಸರೇ ರೌಡಿಸಂ ಅನ್ನು ವೈಭವೀಕರಿಸಿ ಡೈಲಾಗ್​ ಹೊಡೆಯುವುದು ಎಷ್ಟು ಸರಿ? ಎಂಬ ಟೀಕೆಗಳು ನೆಟ್ಟಿಗರಿಂದ ಕೇಳಿ ಬಂದಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಹಿರಿಯ ಅಧಿಕಾರಿಗಳು  ಪ್ರಿಯಾಂಕಾ ವಿರುದ್ಧ ತನಿಖೆಗೆ ಆದೇಶಿಸಿದ್ದರು. ಈ ಸಂದರ್ಭ ಮಿಶ್ರಾರನ್ನು ಅಮಾನತಿನಲ್ಲಿಡಲಾಗಿತ್ತು. ಅಮಾನತಿನಲ್ಲಿದ್ದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇದೀಗ ರಾಜೀನಾಮೆ ಅಂಗೀಕಾರವಾಗಿದ್ದರೂ ಪೊಲೀಸ್​ ಇಲಾಖೆ ಪ್ರಿಯಾಂಕರಿಗೆ ಶಾಕ್​ ನೀಡಿದೆ. ಆಕೆ ಪೊಲೀಸ್​ ಇಲಾಖೆಗೆ 1.52 ಲಕ್ಷ ರೂ.ನ್ನು ಡೆಪಾಸಿಟ್​ ಮಾಡಬೇಕೆಂದು ಹೇಳಿದೆ. ಈ ಸಂಬಂಧ ಆಗ್ರಾ ಎಸ್​ಎಸ್​ಪಿ ಮುನಿರಾಜ್​, ಪ್ರಿಯಾಂಕಾ ಮಿಶ್ರಾಗೆ ನೋಟಿಸ್​ ಜಾರಿಗೊಳಿಸಿದ್ದಾರೆ. ತರಬೇತಿ ಸಂದರ್ಭ ವ್ಯಯ ಮಾಡಲಾಗಿರುವ ಹಣ ಮತ್ತು ಇಲಾಖೆ ವತಿಯಿಂದ ನೀಡಲಾದ ಕಿಟ್​ ಮತ್ತು ಗುರುತಿನ ಚೀಟಿಯನ್ನು ಮರಳಿಸುವಂತೆ ನೋಟಿಸ್​ನಲ್ಲಿ ಸೂಚನೆ ನೀಡಲಾಗಿದೆ.  

ಪ್ರಿಯಾಂಕಾ ಮಿಶ್ರಾ ಆಗ್ರಾ ಪೊಲೀಸ್​ ಠಾಣೆಯಲ್ಲಿ ಕಾನ್ಸ್​ಟೇಬಲ್​​ ಆಗಿದ್ದರು. ಆಕೆಯನ್ನು ಅಮಾನತು ಮಾಡುತ್ತಿದ್ದಂತೆ ಸ್ವಯಂ ನಿವೃತ್ತಿ ಬಯಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಿಯಮದ ಪ್ರಕಾರ ಸರ್ಕಾರಿ ನೌಕರ ಸ್ವಯಂ ನಿವೃತ್ತಿ ಪಡೆಯಲು 45 ವರ್ಷ ವಯಸ್ಸಾಗಿರಬೇಕು ಅಥವಾ 20 ವರ್ಷ ಸೇವೆಯನ್ನು ಪೂರೈಸಿರಬೇಕು. ಜೊತೆಗೆ ಸ್ವಯಂ ನಿವೃತ್ತಿಗೆ ಮೂರು ತಿಂಗಳ ಮೊದಲೇ ಅರ್ಜಿಯನ್ನು ಸಲ್ಲಿಸಬೇಕು. ಈ ಅರ್ಜಿಯನ್ನು ಇಲಾಖೆಗೆ ಗೆಜೆಟೆಡ್​ ಅಧಿಕಾರಿಗಳಿಗೆ ಸಲ್ಲಿಸಬೇಕು. ಬಳಿಕ ಕುಟುಂಬದ ಸಮ್ಮತಿಯಿದ್ದಲ್ಲಿ ರಾಜಿನಾಮೆ ಅಂಗೀಕರಿಸಿ, ಸ್ವಯಂ ನಿವೃತ್ತಿಗೆ ಬಗ್ಗೆ ಉನ್ನತ ಅಧಿಕಾರಿಗಳು ನಿರ್ಧಾರ ಮಾಡುತ್ತಾರೆ. 

ಆದರೆ, ಪ್ರಿಯಾಂಕಾ 2020ರ ಅಕ್ಟೋಬರ್​ 10ರಂದು ಪೊಲೀಸ್​ ಕಾನ್ಸ್​ಟೇಬಲ್​ ಆಗಿ ನೇಮಕವಾಗಿದ್ದು, ಸ್ವಯಂ ನಿವೃತ್ತಿಗೆ ಅರ್ಹಳಾಗಿಲ್ಲ. ಪ್ರಿಯಾಂಕಾಗೆ 225 ದಿನಗಳ ಕಾಲ ಪೊಲೀಸ್ ಇಲಾಖೆಯಲ್ಲಿ ತರಬೇತಿ ನೀಡಿಲಾಗಿದೆ. ಈ ಸಂದರ್ಭ ಆಕೆಗೆ ದಿನವೊಂದಕ್ಕೆ 676 ರೂ. ತರಬೇತಿಗಾಗಿ ಖರ್ಚು ಮಾಡಲಾಗಿದೆ. ಅಂದರೆ, ತಿಂಗಳಿಗೆ 20,280 ರೂ. ಹೀಗಾಗಿ ಅವರ ತರಬೇತಿಯ ಅವಧಿಯಲ್ಲಿ ಖರ್ಚು ಮಾಡಲಾದ 1.52 ಲಕ್ಷ ರೂ.ವನ್ನು ಇಲಾಖೆ ವಾಪಸ್ ಮಾಡಬೇಕೆಂದು ಸೂಚನೆ ನೀಡಿದೆ. ಈಗಾಗಲೇ ಬಹುತೇಕ ಹಣವನ್ನು ಪಾವತಿಸಿರುವ ಪ್ರಿಯಾಂಕಾ ಇನ್ನು 28 ಸಾವಿರ ರೂ. ಮತ್ತು ಕಿಟ್​ ಅನ್ನು ಮರಳಿಸಬೇಕಿದೆ. ಇದಾದ ಬಳಿಕವೇ ಅವರಿಗೆ ಸೇವೆಯಿಂದ ಸಂಪೂರ್ಣ ಹೊರಬರಲಿದ್ದಾರೆ ಎನ್ನಲಾಗುತ್ತಿದೆ.  

ಇನ್ನು ಪ್ರಿಯಾಂಕಾ ಮಿಶ್ರಾ ಡಬ್ ಮ್ಯಾಶ್ ವೀಡಿಯೋ ವೈರಲ್​ ಆಗುತ್ತಿದ್ದಂತೆ ಇನ್​ಸ್ಟಾಗ್ರಾಂನಲ್ಲಿ ಆಕೆಯ ಫಾಲೋವರ್ಸ್​ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ಆಕೆಗೆ ವೆಬ್ ಸೀರೀಸ್, ಮಾಡೆಲಿಂಗ್ ನಲ್ಲಿ ಆಫರ್​ಗಳು ಹುಡುಕಿಕೊಂಡು ಬರುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ, ಮಾಡೆಲಿಂಗ್​ ಅಥವಾ ನಟನೆಯಲ್ಲಿ ಉತ್ತಮ ಅವಕಾಶ ಸಿಕ್ಕಲ್ಲಿ ಖಂಡಿತ ನಟಿಸುತ್ತೇನೆ. ಸದ್ಯ ತನಗೆ ವೆಬ್​ ಸೀರಿಸ್​ ಮತ್ತು ಮಾಡೆಲಿಂಗ್​ನಲ್ಲಿ ಅವಕಾಶ​ಗಳಿವೆ. ಆದರೆ, ನಾನಿನ್ನೂ ಅದನ್ನು ಸ್ವೀಕರಿಸಿಲ್ಲ. ಏನೇ ನಿರ್ಧಾರ ತೆಗೆದುಕೊಳ್ಳುವಾಗಲೂ ಸ್ವಲ್ಪ ಯೋಚಿಸಿ ಬಳಿಕ ನಿರ್ಧಾರಕ್ಕೆ ಬರುತ್ತೇನೆ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article