Dhoni, Mentor for Team India- ಟೀಂ ಇಂಡಿಯಾಗೆ ಮತ್ತೆ ಬಂದ ಬಾಹುಬಲಿ ಮಹೇಂದ್ರ ’ಧೋನಿ’

ಗೊತ್ತಿರಲಿ, ಧೋನಿ ಐಸಿಸಿ ಟ್ರೋಫಿ ಗೆದ್ದಿದ್ದೇ ಕೊನೆ!




ಆ ಹೆಸರಿನಲ್ಲೇ ಅಂತಹ ಪುಳಕವಿದೆ. ಆ ಹೆಸರು ಕೇಳಿ, ತಮ್ಮ ಕ್ರಿಕೆಟ್ ಸಾಮ್ರಾಜ್ಯವನ್ನೇ ಬರೆದುಕೊಟ್ಟು ಜೀ ಹುಜೂರ್​ ಎಂದವರಿದ್ದಾರೆ. ದಂಡೆತ್ತಿ ಬಂದವರು ಹಿಂಡು ಹಿಂಡಾಗಿ ದಿಂಡುರುಳಿದ್ದಾರೆ. ವೇಗದ ದಾಳಿಕೋರರನ್ನ ತನ್ನ ಭುಜಬಲ ಪರಾಕ್ರಮದಿಂದಲೇ ಕುಟ್ಟಿಕೆಡವಿದ್ದಿದೆ. ಯುದ್ಧ ಭೂಮಿಯ ಮಂತ್ರ, ತಂತ್ರ, ಕುತಂತ್ರಗಳು, ಅತಂತ್ರವಾಗುವಂತೆ ಮಾಡಿದ್ದಿದೆ. 


ಎಟುಕದ ಸಾಮ್ರಾಜ್ಯದ ಹೆಸರುಗಳನ್ನ ತನ್ನ ಸಿಂಹಾಸನದ ಮೇಲೆ ಕೆತ್ತಿಸಿದ ಕ್ರಿಕೆಟ್ ಲೋಕದ ಅನಭಿಷಿಕ್ತ ಸಾಮ್ರಾಟನ ಹೆಸರು ಮಹೇಂದ್ರ ಸಿಂಗ್​ ಧೋನಿ! ಪ್ರೀತಿಯಿಂದ ಮಾಹೀ!

ಮಾಹೀ ಹೆಜ್ಜೆ ಇಡುತ್ತಿರುವುದು ಟೀಂ ಇಂಡಿಯಾಗೆ! As a mentor! ಇದು ಬೇಕಿತ್ತು. ಭಾರತ, ಐಸಿಸಿ ನಡೆಸುವ ಟ್ರೋಫಿಯೊಂದನ್ನ ಗೆದ್ದು ಭರ್ತಿ 8 ವರ್ಷಗಳಾಗಿವೆ ಎಂದರೆ ನೀವು ನಂಬಬೇಕು ಮತ್ತು ನಾನು ನಂಬಿದ್ದೇನೆ. ಆ ಟ್ರೋಫಿ ಗೆದ್ದ ನಾಯಕ ಬೇರಾರು ಅಲ್ಲ ರಾಂಚಿಯ ಹೆಬ್ಬುಲಿ ಮಹೇಂದ್ರ ಸಿಂಗ್​ ಧೋನಿ, ಖುಷಿಯಿಂದ ಕೂಲ್​ ಕ್ಯಾಪ್ಟನ್​ ಧೋನಿ!



2007ರ ಐಸಿಸಿ ವಿಶ್ವ ಟಿ-20 ಕಪ್​ ಟೂರ್ನಿ, ಧೋನಿಗೆ ಮೊಟ್ಟ ಮೊದಲ ಹೆಬ್ಬಾಗಿಲು. ಅಲ್ಲಿ ಧೋನಿ ಗೆದ್ದು ಬೀಗಿದ್ದ . ಸಿಕ್ಕ ಅವಕಾಶವನ್ನ ಬಾಚಿಕೊಳ್ಳುವುದು ಹೇಗೆಂದು ಹಿರಿಯರಿಗೂ ತೋರಿಸಿದ್ದ. 2011 ರ ವಿಶ್ವಕಪ್​ ಗೆದ್ದ ಸೊಗಸನ್ನ ಅವನು ಸಿಡಿಸಿದ ಸಿಕ್ಸರ್,​ ಆಗಾಗ ಸಾರಿ ಸಾರಿ ಹೇಳುತ್ತಿರುತ್ತದೆ, ಅದು ಎಂದೂ ಮರೆಯದ ದೃಶ್ಯಕಾವ್ಯ! ಆ ಸಿಕ್ಸರ್​ ನ ಹಿನ್ನೆಲೆಯಲ್ಲಿ ಬಂದ ರವಿಶಾಸ್ತ್ರಿ ಕಮೆಂಟರಿ ಕೂಡಾ!



ಮುಂದಿನ ಬಿಗ್​ ಟಾಸ್ಕ್ ಆಗಿ ಬಂದಿದ್ದು, 2013 ರ ICC ಚಾಂಪಿಯನ್ಸ್​ ಟ್ರೋಫಿ. ಅಲ್ಲೂ ಗೆಲುವಿನ ಮೊಹರು ಒತ್ತಿದ್ದು ಮಹೇಂದ್ರ ಸಿಂಗ್​ ಧೋನಿಯೆಂಬ ವೀರಾಗ್ರಣಿ! ಮಾಹೀ ಒಂಥರಾ ಗೆಲುವಿನ ಟ್ರೇಡ್​ ಮಾರ್ಕ್​! ಗೊತ್ತಿರಲಿ ಅದಾದ ಮೇಲೆ, ಐಸಿಸಿ ನಡೆಸುವ ಇನ್ನೊಂದು ಟ್ರೋಫಿಯನ್ನ ಭಾರತ ಗೆದ್ದಿಲ್ಲ! O MY GOD ಎಂದಿರಾ? ಇದು ನಿಜ. ವಿರಾಟ್​ ಕೊಹ್ಲಿಯ ಅದ್ಭುತ ಫಿಟ್​ನೆಸ್​, ಅತ್ಯದ್ಭುತ ಬ್ಯಾಟಿಂಗ್​ ಸ್ಕಿಲ್​, ಯಾವ ಮಣ್ಣಿನಲ್ಲಾದರೂ ಶತಕ ಸಿಡಿಸುವ ಸಾಮರ್ಥ್ಯ, ಅಗ್ರೆಷನ್, ಇದ್ಯಾವುದಕ್ಕೂ ಒಂದು ICC ಟ್ರೋಫಿ ಬಗ್ಗಲಿಲ್ಲ.



ರವಿಶಾಸ್ರ್ತಿ ಎಂಬ ಮಾಜಿ ಕ್ರಿಕೆಟಿಗ ಮತ್ತು ಕಮೆಂಟೇಟರ್, ಹಾಲಿ ಕೋಚ್​ ಗೂ ಒಂದು ಟ್ರೋಫಿ ಕಚ್ಚಲಾಗಲಿಲ್ಲ. ಅದೇಕೋ ಈ ತಾಳಮೇಳಕ್ಕೆ ಕಪ್​ನ ಕಳೆ ಆಗಿ ಬರಲಿಲ್ಲ.

ಧೋನಿ ಶಾಸ್ತ್ರೋಕ್ತ ಕ್ರಿಕೆಟಿಗನೇ ಅಲ್ಲ. ವಿಪರೀತವೆನಿಸುವ ಅಗ್ರೆಷನ್​ ನಾವು ನೋಡಿಲ್ಲ. ಕಲಾತ್ಮಕ ಆಟ ಊಹಿಸಿಕೊಂಡರೇ ಅಪರಾಧ! ಆದರೆ ಕೇವಲ HAND AND EYE ಕೋ ಆರ್ಡಿನೇಷನ್ ಒಂದರಿಂದಲೇ ಎದುರಾಳಿ ಬೌಲರ್​ನ ಎದೆಯಲ್ಲಿ ಸಾವಿರ್ ವೋಲ್ಟ್ಸ್​ ಸಂಚಲನ ಸೃಷ್ಟಿಸಬಲ್ಲ. ಟ್ರಂಪ್​ ಕಾರ್ಡ್​ ಎನಿಸುವಂತ ಬೌಲರ್​ಗೆ ಹಿಗ್ಗಾಮುಗ್ಗ ಚಚ್ಚಿ, ಉಳಿದ ಬೌಲರ್​ಗಳಿಗೆ ತಣ್ಣನೆಯ ನಡುಕ ಹುಟ್ಟಿಸಬಲ್ಲ. ಅವನಷ್ಟು ಚಂದ ಪಿಚ್​ ರೀಡ್​ ಮಾಡಿ , ಟಾಸ್​ ಗೆದ್ದು , ಸಿಂಹ, ಹುಲಿ ಬಿರುದಾಂಕಿರತನ್ನ ಅವರದ್ದೇ ಗುಹೆಗಳಲ್ಲಿ ಅಟ್ಟಾಡಿಸಿದ ಇನ್ನೊಬ್ಬ ನಾಯಕ ಸದ್ಯ ಆಡುತ್ತಿಲ್ಲ. ಅದಕ್ಕೇ ಧೋನಿಗೆ ಈಗಲೂ ಡಿಮ್ಯಾಂಡ್​ ಜಾಸ್ತಿ!



ಧೋನಿ ಈಗಲೂ ಐಪಿಎಲ್​ ಆಡುತ್ತಿದ್ದಾನೆ. ಗೇಮ್​ನೊಂದಿಗಿನ ಟಚ್​ ಅವನನ್ನ ಅಥವಾ ಅವನಂಥ ಕ್ರಿಕೆಟ್​ ಲವರ್​ ಅನ್ನ ಅಷ್ಟು ಸಲೀಸಾಗಿ ಬಿಟ್ಟುಹೋಗುವುದಿಲ್ಲ. ಸೋತೇ ಹೋದ ಎನ್ನುವಂತ ಮ್ಯಾಚ್​ ಅನ್ನ, ಅವನು ಸಲೀಸಾಗಿ ಎತ್ತಿಕೊಂಡು ಬರುತ್ತಿದ್ದ ರೀತಿಗೆ ಅಭಿಮಾನಿಗಳು ಮಂತ್ರಮುಗ್ಧ!



ಭಾರತ ಕ್ರಿಕೆಟ್​ ತಂಡಕ್ಕೆ ಇಂತಹ ಮಾಂತ್ರಿಕ ಬೇಕಾಗಿದ್ದಾನೆ. ಅವನು ನಿಜವಾಗಲೂ ಬಿಳಿಯ ಚೆಂಡಿನ ಮಾಂತ್ರಿಕ!

United Arab Emirates! ಇಲ್ಲೇ ಮುಂದಿನ ಟಿ-20 ವಿಶ್ವಕಪ್​ ನಡೆಯುತ್ತಿರುವುದು. ಇಲ್ಲಿನ ಪಿಚ್​ ಕಂಡಿಷನ್, ಬಳಸಬೇಕಿರುವ ಬೌಲರ್​, ಯಾವ ಮ್ಯಾಚ್​ಗೆ ಯಾವ ಆಟಗಾರರ ಕಾಂಬಿನೇಷನ್​, ಇಂತಹ ನಿರ್ಧಾರಗಳಿಗೆ, ಧೋನಿ ಸ್ಟಂಪ್​ನ ಹಿಂದೆ ನಿಂತಿರದೆ ಡಗ್​ ಔಟ್​ನಲ್ಲಿದ್ದರೂ ಸಾಕು. ಟಿ-20 ಮ್ಯಾಚ್​ಗಳಲ್ಲಿ ಸೆಕೆಂಡಿನ 10 ನೇ 1 ಭಾಗದಲ್ಲಿ ನಿರ್ಧಾರ ಬಿದ್ದಿರಬೇಕು. ಅಂತಹ ನಿರ್ಧಾರಕ್ಕೆ ಧೋನಿಯೇ ಬರಬೇಕಾಯ್ತು ನೋಡಿ!

ಇನ್ನೊಂದು ಇಂಟರೆಸ್ಟಿಂಗ್​ ವಿಷಯ ಅಂದ್ರೆ ಇಲ್ಲಿ ಆಡುತ್ತಿರುವ ತುಂಬಾ ಹುಡುಗರಿಗೆ ಗರಡಿಯ ಮಾಸ್ಟರ್​ ಆಗಿದ್ದವರು ಉಸ್ತಾದ್​ ಧೋನಿ!

ಸ್ಪಿನ್ನರ್​ಗಳಿಗೆ ಪಿಚ್​ ಹೆಲ್ಪ್ ಆಗುತ್ತದೆ ಎನ್ನುವ ಕಾರಣಕ್ಕೆ 5 ಜನ ಸ್ಪಿನ್ನರ್​ಗಳು ಟೀಂ ಇಂಡಿಯಾ ಜೆರ್ಸಿ ಹಾಕಿಕೊಳ್ಳುತ್ತಿದ್ದಾರೆ. ಯಾವ ಬೌಲರ್​ಗೆ ಯಾರು ಬ್ಯಾಟ್ಸ್​ಮನ್​? ಯಾವ ಕ್ರಮಾಂಕ? ಎಡಗೈ, ಬಲಗೈ ಕಾಂಬಿನೇಷನ್​ ಯಾವಾಗ? ಇಂತಹ ವಿಷಯಗಳಲ್ಲಿ ಧೋನಿಯಿಂದ ತುಂಬ ಜನ ಕಲಿಯಬೇಕಿದೆ. ಸಮರಾಂಗಣದಲ್ಲಿ ವಿರಾಟ್​ ಕೊಹ್ಲಿ ಅರ್ಜುನನಾಗಿ ಕದನಕಲಿಯಾದರೆ ಡಗ್​ ಔಟ್​ನಿಂದ ಸಾರಥಿಯಾಗಿ ಧೋನಿ ಶ್ರೀಕೃಷ್ಣ! ಸಂಭವಾಮಿ ಯುಗೇ ಯುಗೇ! ಧೋನಿಗಿರಲಿ ಒಂದು ಉಘೇ!



ಇಲ್ಲಿ ಕೋಹ್ಲಿ ಮತ್ತು ಶಾಸ್ತ್ರಿ ಸೀಮಿತ ಓವರ್ ಗಳ ಕ್ರಿಕೆಟ್​ ಟೂರ್ನಿಯಲ್ಲಿ ಅನೇಕ ಬಾರಿ ಮುಗ್ಗರಿಸಿ ಬಿದ್ದಿದ್ದಾರೆ. 2017ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ ಪಾಕ್​ ವಿರುದ್ಧ ಮುಗ್ಗರಿಸಿದ್ದರು. 2019ರ ವಿಶ್ವಕಪ್​ ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಸೆಮೀಸ್​ನಲ್ಲಿ ಜಾರಿದ್ದರು. ಐಪಿಎಲ್​ ನಲ್ಲೂ ಕೋಹ್ಲಿಯ ರಾಯಲ್​ ಚಾಲೆಂಜರ್ಸ್​ಗೆ ಅದೇಕೋ ಅದೃಷ್ಠವೇ ಅದೃಶ್ಯವಾಗಿದೆ. ಒಂದು Street smartness ಇಲ್ಲಿ ಮಿಸಿಂಗ್​ ಎನಿಸಲಿಕ್ಕೆ ಶುರುವಾಗಿದೆ. ಮತ್ತು ಆ ಸ್ಟ್ರೀಟ್​ ಸ್ಮಾರ್ಟ್​ನೆಸ್​ ಸ್ಥಾನವನ್ನ ಧೋನಿ ತುಂಬುತ್ತಿದ್ದಾರಾ? ಗೊತ್ತಿಲ್ಲ!



ಧೋನಿ ಹೇಳಿ ಕೇಳಿ ಚೆನ್ನೈ ಮೇಲೆ ಮೂರು ಬಾರಿ ಚಾಂಪಿಯನ್​ ಎಂದು ಬರೆಸಿದವನು. ಚುಟುಕು ಕ್ರಿಕೆಟ್​ಗೆ ಒಂಥರಾ ಕಿರೀಟವಿದ್ದಂತೆ. ಕೋಹ್ಲಿ ವಿದೇಶಿ ನೆಲದ ಟೆಸ್ಟ್​ಗಳಲ್ಲಿ ಅಪರೂಪವೆನಿಸುವಂತ ಸಾಧನೆ ಬರೆದಿರೋದು ನಿಜವೇ. ಆದರೆ ಅದೇಕೋ ಟಿ-20 ಮುನಿಸಿಕೊಂಡಿದೆ. ಕೊಹ್ಲಿ ಸದ್ಯ ರೆಡ್​ ಬಾಲ್​ ಕಿಂಗ್​ ಆದರೆ ವೈಟ್​ ಬಾಲ್​ ಆಟದಲ್ಲಿ ಧೋನಿ ಚತುರ. 8 ವರ್ಷಗಳಿಂದ ಮುನಿಸಿಕೊಂಡಿರುವ ಒಂದು ಐಸಿಸಿ ಟ್ರೋಫಿ ಧೋನಿ ರೂಪದಲ್ಲಾದರೂ ಮತ್ತೆ ಸಿಗಲಿ! ನಡೆದೇ ಬಿಡಲಿ ಒಂದು ಶ್ರೀಕೃಷ್ಣ ಗಾರುಡಿ!


ಲೇಖನ: ರಮಾಕಾಂತ್​ ಆರ್ಯನ್ (ಫೇಸ್‌ಬುಕ್ ಗೋಡೆಯಿಂದ)