ಮಂಗಳೂರು: ಮೀನುಗಾರಿಕೆಗೆ ತೆರಳಿ ದೋಣಿ ದುರಂತದಲ್ಲಿ ಸಮುದ್ರಪಾಲಾಗಿ ನಾಪತ್ತೆಯಾಗಿದ್ದ ಮೀನುಗಾರ ಮುಹಮ್ಮದ್ ಶರೀಫ್ (35) ಮೃತದೇಹವು ರವಿವಾರ ರಾತ್ರಿ ತಣ್ಣೀರುಬಾವಿ ಕಡಲತೀರದಲ್ಲಿ ಪತ್ತೆಯಾಗಿದೆ.
ಸೆ.11ರಂದು ಬೆಳಗ್ಗಿನ ಜಾವ ಮೀನುಗಾರಿಕೆಗೆ ತೆರಳಿದ್ದ ದೋಣಿ ದುರಂತಕ್ಕೀಡಾಗಿತ್ತು. ಈ ದೋಣಿಯಲ್ಲಿದ್ದ ಐವರು ಮೀನುಗಾರರ ಪೈಕಿ ನಾಲ್ವರು ರಕ್ಷಣೆಗೊಳಗಾಗಿದ್ದರು. ಆದರೆ ಕಸಬಾ ಬೆಂಗರೆ ನಿವಾಸಿ ಮುಹಮ್ಮದ್ ಶರೀಫ್ ಮಾತ್ರ ನಾಪತ್ತೆಯಾಗಿದ್ದರು. ಅವರಿಗಾಗಿ ಎರಡು ದಿನಗಳಿಂದ ತೀವ್ರ ಶೋಧ ಕಾರ್ಯ ನಡೆದಿತ್ತು. 
ಶನಿವಾರ ಕಡಲು ಪ್ರಕ್ಷುಬ್ಧತೆಯಿಂದ ಕೂಡಿತ್ತು. ಪರಿಣಾಮ ಇಡೀ ದಿನ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಂದು ಮತ್ತೆ ಪತ್ತೆ ಕಾರ್ಯ ಮುಂದುವರಿದಿತ್ತು. ಸಂಜೆ ವೇಳೆ ಸ್ಥಳೀಯ ಮುಳುಗುತಜ್ಞರ ಶ್ರಮದಿಂದಾಗಿ ಕೊನೆಗೂ ಶರೀಫ್ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.
ನಾಪತ್ತೆಯಾಗಿದ್ದ ಶರೀಫ್ ಪತ್ತೆಗಾಗಿ ಸತತ ಎರಡು ದಿನಗಳಿಂದ ನಿರಂತರ ಹುಡುಕಾಟ ಮಾಡಲಾಗುತ್ತಿತ್ತು. ಇಂದು ಹುಡುಕಾಟ ನಡೆಸಲು ಸಮುದ್ರಕ್ಕೆ ಧುಮುಕಿದ ಡಿವೈಎಫ್‌ಐ ಕಾರ್ಯಕರ್ತ ಮಯ್ಯದ್ದಿ ಎಂಬವರ ಕಾಲಿಗೆ ಗಂಭೀರ ಗಾಯವಾಗಿದೆ. ಸಮುದ್ರದಲ್ಲಿದ್ದ ಕಬ್ಬಿಣದ ಪೈಪ್ ಗಳಿಂದ ಈ ಗಾಯವಾಗಿದೆ ಎಂದು ಆರೋಪಿಸಲಾಗಿದೆ. ಗಾಯಾಳು ಮಯ್ಯದ್ದಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 
   
   
   
 
 
 
 
 
 
 
 
 
 
 
 
 
 
 
 
