ರಾಜ್ಯದಲ್ಲಿ ಮತ್ತೊಂದು ಬೋರ್‌ವೆಲ್ ಮಹಾ ದುರಂತವೊಂದು ಸಂಭವಿಸಿದ್ದು, ಎರಡೂವರೆ ವರ್ಷದ ಮಗು ಇದಕ್ಕೆ ಬಲಿಯಾಗಿದೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಆಲಖನೂರ ಗ್ರಾಮದ ಬಳಿ ಕೊಳವೆಬಾವಿಯೊಳಗೆ ಬಿದ್ದಿದ್ದ ಮಗು ಮೃತಪಟ್ಟಿದೆ. ಬೆಳಗಾವಿ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಗುವಿನ ಸಾವಿನ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ
ಶನಿವಾರ ಸಂಜೆಯಿಂದಲೇ ನಾಪತ್ತೆಯಾಗಿದ್ದ ಶರತ್ ಎಂಬ ಎರಡೂವರೆ ವರ್ಷದ ಮಗು ಕೊಳವೆಬಾವಿಯಲ್ಲೇ ಮೃತಪಟ್ಟಿತ್ತು.
ಬಾಲಕ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೋಷಕರು ಬಾಲಕನನ್ನು ಅಪಹರಿಸಲಾಗಿದೆ ಎಂದು ದೂರು ದಾಖಲಿಸಿದ್ದರು. ಆದರೆ ಮಗುವಿನ ಪೋಷಕರು ವಾಸವಿದ್ದ ತೋಟದ ಮನೆಯಲ್ಲಿಯೇ 200 ಮೀಟರ್ ದೂರದಲ್ಲಿದ್ದ ನೀರಿಲ್ಲದ ಕೊಳವೆಬಾವಿಯೊಳಗೆ ಮಗು ಬಿದ್ದಿತ್ತು.
ಕೊಳವೆಬಾವಿಯೊಳಗೆ ಬಿದ್ದಿದ್ದ ಮಗು ಕೂಗಾಡುವ ಸದ್ದು ಕೂಡ ಕೇಳುತ್ತಿರಲಿಲ್ಲ. ಪರಿಶೀಲನೆ ನಡೆಸಿದಾಗ ಮಗು ಮೃತಪಟ್ಟಿರುವುದು ತಿಳಿದು ಬಂದಿದೆ. ಆರು ತಿಂಗಳ ಹಿಂದೆಯಷ್ಟೇ ಈ ಜಮೀನಿನಲ್ಲಿ ಬೋರ್ ವೇಲ್ ಕೊರೆಸಲಾಗಿತ್ತು.
ಆದರೆ, ನೀರು ಸಿಗದ ಕಾರಣ ಬೋರ್ ವೇಲ್ ನ್ನು ಮುಚ್ಚದೇ ಹಾಗೆ ಬಿಡಲಾಗಿತ್ತು. ಇದರಿಂದಾಗಿ ಈ ದುರಂತ ಸಂಭವಿಸಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
