-->
ಬೆಳಗಾವಿ: ವಾಮಾಚಾರಕ್ಕೆ ಯತ್ನಿಸಲಾಗಿದ್ದ ಹೆಣ್ಣು ಮಗು ಕಬ್ಬಿನ ಗದ್ದೆಯಲ್ಲಿ ಪತ್ತೆ!

ಬೆಳಗಾವಿ: ವಾಮಾಚಾರಕ್ಕೆ ಯತ್ನಿಸಲಾಗಿದ್ದ ಹೆಣ್ಣು ಮಗು ಕಬ್ಬಿನ ಗದ್ದೆಯಲ್ಲಿ ಪತ್ತೆ!


ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದ ಹೊರ ವಲಯದ ರಸ್ತೆ ಬಳಿಯ ಕಬ್ಬಿನ ಗದ್ದೆಯೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಹೆಣ್ಣು ಮಗುವೊಂದು ಪತ್ತೆಯಾಗಿದೆ‌‌. ಈ ಮಗುವಿನ ಮೇಲೆ ವಾಮಾಚಾರ ಯತ್ನ ನಡೆದಿದೆ ಎಂಬ ಗುಮಾನಿ ವ್ಯಕ್ತವಾಗಿದೆ.

ಯಾರೋ ದುಷ್ಕರ್ಮಿಗಳು ಈ ಹೆಣ್ಣು ಮಗುವನ್ನು ಗದ್ದೆಯಲ್ಲಿ ಬಿಸಾಡಿ ಹೋಗಿದ್ದರು. ಸ್ಥಳೀಯರು ನೋಡಿ ತಕ್ಷಣ ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ಅಥಣಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಜೀವ ಕಾಪಾಡಲಾಗಿದೆ. 

ಆದರೆ ಮಗುವಿನ ದೇಹದಲ್ಲಿ ಸುಟ್ಟ ಗಾಯ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದ್ದು ಜಿಲ್ಲಾಸ್ಪತ್ರೆ ಸಿಬ್ಬಂದಿ ಮಗುವಿನ ಆರೈಕೆ ಮಾಡ್ತಿದ್ದಾರೆ.

ಗದ್ದೆಯಲ್ಲಿ ಅನಾಥವಾಗಿ ದೊರಕಿರುವ ಈ ಮಗುವಿನ ದೇಹದ ಮೇಲಿನ ಸುಟ್ಟ ಗಾಯಗಳು ಅನುಮಾನ ಹುಟ್ಟಿಸಿದ್ದು, ವಾಮಾಚಾರದ ಶಂಕೆ ಮೂಡಿದೆ. ಮಗುವಿನ ಮರ್ಮಾಂಗದಿಂದ ಕುತ್ತಿಗೆವರೆಗೂ ಕೇರು ಬೀಜದಿಂದ ಸುಟ್ಟಿರುವ ಗಾಯಗಳಾಗಿವೆ. ಬೆನ್ನಿನ ಭಾಗದಲ್ಲೂ ಸುಟ್ಟ ಗಾಯಗಳು ಗೋಚರವಾಗಿದೆ. ದುಷ್ಕರ್ಮಿಗಳು ಹುಣ್ಣಿಮೆ ಹಿಂದಿನ ದಿನವೇ ದುಷ್ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಮಗುವಿನ‌ ಮೇಲೆ ವಾಮಾಚಾರ ಕೃತ್ಯ ಎಸಗಲಾಗಿದೆಯೇ ಎಂಬ 
ಶಂಕೆ ವ್ಯಕ್ತವಾಗಿದೆ. 

ದುಷ್ಕರ್ಮಿಗಳು ಮಗುವನ್ನು ಬಲಿ ಕೊಡಲು ಯತ್ನಿಸುತ್ತಿದ್ದ ಸಂದರ್ಭ ಯಾರೋ ಬಂದರೆಂದು ಮಗುವನ್ನು ಕಬ್ಬಿನ ಗದ್ದೆಯಲ್ಲಿ ಎಸೆದು ಎಸ್ಕೇಪ್ ಆಗಿದ್ದಾರೆಂದು ಸ್ಥಳೀಯರು ಶಂಕಿಸಿದ್ದಾರೆ. ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ. ಇನ್ನೂ ಮಗುವಿನ ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದ ಪೊಲೀಸರಿಗೂ ಬಾಲಕಿಯ ಕುರಿತು ಮಾಹಿತಿ ರವಾನೆ ಮಾಡಲಾಗಿದೆ.

Ads on article

Advertise in articles 1

advertising articles 2

Advertise under the article