-->
ನಿದ್ದೆ ಕೆಡಿಸಿ ಎದ್ದು ಕೂರಿಸಿದೆ… ಮಾಧ್ಯಮ ಕ್ಷೇತ್ರ: ರಾಜಾರಾಮ್ ತಲ್ಲೂರು ಅವರ ಡಿಯರ್ ಮೀಡಿಯಾ ಕಥೆ ಕೃತಿ ಕುರಿತು ದಿನೇಶ್ ಅಮೀನ್ ಮಟ್ಟು

ನಿದ್ದೆ ಕೆಡಿಸಿ ಎದ್ದು ಕೂರಿಸಿದೆ… ಮಾಧ್ಯಮ ಕ್ಷೇತ್ರ: ರಾಜಾರಾಮ್ ತಲ್ಲೂರು ಅವರ ಡಿಯರ್ ಮೀಡಿಯಾ ಕಥೆ ಕೃತಿ ಕುರಿತು ದಿನೇಶ್ ಅಮೀನ್ ಮಟ್ಟು

ನಮ್ದೇ ಮುಂಗಾರು ಕುಟುಂಬದ ಸದಸ್ಯ Rajaram Tallur ಅವರ ಬರವಣಿಗೆಗಳ ಸಂಕಲನ ‘ನಮ್ದೇ ಕತೆ’ ಗೆ ನಾನು ಮುನ್ನುಡಿ ರೂಪದಲ್ಲಿ ಬರೆದ ಸದಾಶಯದ ಮಾತುಗಳನ್ನು ಪುಕ್ಕಟೆಯಾಗಿ ಓದಿ, ಪುಸ್ತಕವನ್ನು ಖರೀದಿಸಿ ಓದಲು ಮರೆಯಬೇಡಿ.


ನಿದ್ದೆ ಕೆಡಿಸಿ ಎದ್ದು ಕೂರಿಸಿದೆ… ಮಾಧ್ಯಮ ಕ್ಷೇತ್ರ





ರಾಜಾರಾಂ ತಲ್ಲೂರು ಮತ್ತು ನಾನು ಪತ್ರಿಕೋದ್ಯೋಮದ ಒಂದೇ ಪಾಠಶಾಲೆಯಿಂದ ಬಂದವರಾದರೂ ದೀರ್ಘಕಾಲದ ಸಹಪಾಠಿಗಳಲ್ಲ. ನಾನು ಶಾಲೆ ಬಿಡುವ ಹೊತ್ತಿಗೆ ಅವರು ಬಂದು ಸೇರಿಕೊಂಡವರು. ಮುಂಗಾರು ಪಾಠಶಾಲೆಯಲ್ಲಿ ಜೊತೆಯಲ್ಲಿ ಕಲಿಯುವ ಅವಕಾಶ ಸಿಗಲಿಲ್ಲ, ಕಲಿಸಿದ ಗುರುಗಳು ಮಾತ್ರ ಒಬ್ಬರೇ, ವಡ್ಡರ್ಸೆ ರಘುರಾಮ ಶೆಟ್ಟಿಯವರು. ಮುಂಗಾರು ಪತ್ರಿಕೆಯ ಮೂಲಕ ರೂಪುಗೊಂಡ ಹಲವಾರು ಪ್ರತಿಭಾವಂತ ಪತ್ರಕರ್ತರಲ್ಲಿ ರಾಜಾರಾಂ ತಲ್ಲೂರು ಒಬ್ಬರು ಎಂಬ ನನ್ನ ಮಾತಿಗೆ ಅವರ ಬರವಣಿಗೆಗಳ ಓದುಗರು ಕೈ ಎತ್ತುತ್ತಾರೆ ಎನ್ನುವುದು ನನಗೆ ಗೊತ್ತು.


ಕುತ್ತಿಗೆ ಮಟ್ಟದ ಪೈಪೋಟಿಯ ಇಂದಿನ ಯುಗದಲ್ಲಿ ಪತ್ರಕರ್ತರೂ ಸೇರಿದಂತೆ ಯಾವುದೇ ಕಸುಬುದಾರ ಹೊಸ ಅವಕಾಶ-ಅವಿಷ್ಕಾರಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುತ್ತಾ ಬೆಳೆದರೆ ಮಾತ್ರ ಚಲಾವಣೆಯಲ್ಲಿ ಉಳಿಯಬಲ್ಲ ಇಲ್ಲದೆ ಇದ್ದರೆ ಇತಿಹಾಸದ ಕಸದ ಬುಟ್ಟಿಗೆ ಸೇರಿಬಿಡುತ್ತಾನೆ. ರಾಜಾರಾಂ ತಲ್ಲೂರು ಟೈಪ್ ಸೆಟ್ –ಟ್ರಾಡಲ್ ಮೆಷಿನ್ ಯುಗದಿಂದ ಅತ್ಯಾಧುನಿಕ ಆಪ್ ಸೆಟ್ ಡಿಜಿಟಲ್ ಮುದ್ರಣದ ಯುಗಕ್ಕೆ ಪ್ರವೇಶಿಸಿ ತಲೆಮಾರುಗಳ ನಡುವೆ ಕೊಂಡಿಯಾದವರು. 


ಮುಂಗಾರು ಮುಚ್ಚಿದ ನಂತರ ಮಾಧ್ಯಮ ಕ್ಷೇತ್ರದಲ್ಲಿ ಸಣ್ಣಪುಟ್ಟ ದುಸ್ಸಾಹಸಗಳನ್ನು ಮಾಡಿದ್ದ ರಾಜಾರಾಂ ಬಹುಬೇಗ ಹೊಸ ತಂತ್ರಜ್ಞಾನಕ್ಕೆ ಅಪ್ ಡೇಟ್ ಆಗಿ ಇಪ್ಪತ್ತು ವರ್ಷಗಳ ಹಿಂದೆಯೇ ಉದಯವಾಣಿ ಪತ್ರಿಕೆಯ ಆನ್ ಲೈನ್ ಆವೃತ್ತಿಯ ಮುಖ್ಯಸ್ಥರಾಗಿ ಕೆಲಸ ಮಾಡಿದವರು.



ರಾಷ್ಟ್ರಮಟ್ಟದಲ್ಲಿ ‘ಲ್ಯೂಟಿನ್ ಪತ್ರಕರ್ತರು’ ( ಅರ್ನಬ್ ಗೋಸ್ವಾಮಿಯ ವ್ಯಾಖ್ಯಾನದಂತಲ್ಲ) ಇದ್ದ ಹಾಗೆ ರಾಜ್ಯಮಟ್ಟದಲ್ಲಿ ‘ವಿಧಾನಸೌಧ ಪತ್ರಕರ್ತರು’ ಇದ್ದಾರೆ. ಬಹುತೇಕ ಈ ‘ಪ್ರಭಾವಳಿ’ಯ ಪತ್ರಕರ್ತರು ರಾಜಕೀಯ ವರದಿಗಾರಿಕೆಯಿಂದಲೇ ಖ್ಯಾತಿ ಪಡೆದವರು. ಮೂವತ್ತು ವರ್ಷಗಳ ನನ್ನ ಸಕ್ರಿಯ ಪತ್ರಿಕಾವೃತ್ತಿಯಲ್ಲಿ ಕೊನೆಯ ಹದಿಮೂರು ವರ್ಷ ರಾಜಕೀಯ ವರದಿಗಾರಿಕೆ,ಬರವಣಿಗೆಗಳನ್ನೇ ಹೆಚ್ಚು ಮಾಡಿದ್ದರೂ ಮತ್ತು ಈಗಲೂ ರಾಜಕೀಯ ವಿದ್ಯಮಾನಗಳಿಗೆ ಥಟ್ಟನೆ ನನ್ನ ಮೆದುಳು ಜಾಗೃತಗೊಳ್ಳುವುದು ನಿಜವಾದರೂ, ಈ ರಾಜಕೀಯದ Obsessionನಿಂದಾಗಿ ರಾಜಕೀಯೇತರ ವಿದ್ಯಮಾನಗಳು ಮಾಧ್ಯಮದ ನಿರ್ಲಕ್ಷಗೊಳಗಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಈ ಸಮಸ್ಯೆಗೆ ರಾಜ(ಕೀಯ)ಧಾನಿ ಪತ್ರಿಕೋದ್ಯಮ’ದಿಂದ ದೂರ ಇರುವುದು ಕೂಡಾ ಒಂದು ಪರಿಹಾರ.



ಆಯ್ಕೆಯೋ, ಅನಿವಾರ್ಯತೆಯೋ ಗೊತ್ತಿಲ್ಲ, ರಾಜಾರಾಂ ತಲ್ಲೂರು ಉಡುಪಿಯಂತಹ ಪಟ್ಟಣವೆಂಬ ಹಳ್ಳಿಯಲ್ಲಿ ನೆಲೆನಿಂತದ್ದು ಅವರ ಬದುಕಿನ ಬಹುಮುಖ್ಯ ನಿರ್ಧಾರ. ಈ ದೂರದ ಕಾರಣದಿಂದಲೂ ರಾಜಾರಾಂ ರಾಜಕೀಯೇತರ ವಿಷಯ-ವಿದ್ಯಮಾನಗಳಿಗೆ ಹೆಚ್ಚು ಆಸಕ್ತಿಯಿಂದ ಪ್ರತಿಕ್ರಿಯಿಸಲು ಸಾಧ್ಯವಾಗಿರಬಹುದು.



ರಾಜಾರಾಂ ಕಳೆದ 3-4 ವರ್ಷಗಳಲ್ಲಿ ಪ್ರಿಂಟ್ ಗಿಂತ ಆನ್ ಲೈನ್ ನಲ್ಲಿ ಬರೆದದ್ದೇ ಹೆಚ್ಚು. ಪತ್ರಕರ್ತರನ್ನು Jack of all trades,master of none’ ಎಂದು ಬಣ್ಣಿಸಿದರೂ, ನಿಜವಾದ ಒಬ್ಬ ಕಸುಬುದಾರ ಹರಡಿಕೊಳ್ಳಲೇ ಬೇಕು, ಅದೇ ವೇಳೆ ಹರಳುಗಟ್ಟಲೂ ಬೇಕು. ಒಬ್ಬ ಪತ್ರಕರ್ತ ಕೆಲಸ ಮಾಡುತ್ತಾ ಹೋದಂತೆ ತನ್ನ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಿಕೊಂಡುಹೋಗುತ್ತಾನೆ, ಆ ರೀತಿ ಹೋಗುವುದೇ ನೈಜ ಬೆಳವಣಿಗೆ.



ಕಸಬುದಾರ ಪತ್ರಕರ್ತ ಹವಾಮಾನದ ವರದಿಗಾರನಿದ್ದ ಹಾಗೆ. ಗಾಳಿ ಬೀಸುವ ದಿಕ್ಕುಗಳನ್ನು ಬಹುಬೇಗ ಗ್ರಹಿಸಿಬಿಡುತ್ತಾನೆ. ಎರಡು ವರ್ಷಗಳ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ. ನಂತರ ಕೃಷಿ ಕಾಯ್ದೆ ತಿದ್ದುಪಡಿಗಳ ವಿವಾದ ಭುಗಿಲೆದ್ದಾಗ ಈ ಅವಸರದ ತಿದ್ದುಪಡಿಗಳ ಒಳಪದರುಗಳನ್ನು ಬಿಡಿಸುತ್ತಾ ಅದರ ಆಳದಲ್ಲಿದ್ದ ರಾಜಕೀಯ ಹುನ್ನಾರಗಳನ್ನು ಅನಾವರಣಗೊಳಿಸುವ ಪ್ರಯತ್ನವನ್ನು ತಲ್ಲೂರು ಮಾಡಿದ್ದರು. ಕೊರೊನಾ ಜಗನ್ಮಾರಿ ಬಂದೆರಗಿದಾಗ ಪ್ರಭುತ್ವದ ಮೂರ್ಖಪ್ರಭುಗಳು ತಟ್ಟೆ-ಜಾಗಟೆ ಬಡಿಯಲು ಕರೆ ನೀಡುವಂತಹ ಹಾಸ್ಯಪ್ರಸಂಗದಲ್ಲಿ ತೊಡಗಿದ್ದಾಗ ತಲ್ಲೂರು ಅವರು ಸರ್ಕಾರದ ವೈಫಲ್ಯಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದ್ದರು.. ಕೊರೊನಾ ಮಾರಿ ವೈದ್ಯಕೀಯ ಕ್ಷೇತ್ರಕ್ಕಷ್ಟೇ ಅಲ್ಲ, ಮಾಧ್ಯಮರಂಗಕ್ಕೂ ಸತ್ವಪರೀಕ್ಷೆಯ ಕಾಲವಾಗಿತ್ತು. ಈ ಪರೀಕ್ಷೆಯಲ್ಲಿ ಮಾಧ್ಯಮರಂಗ ಕೂಡಾ ಹೇಗೆ ಸೋತು ಹೋಯಿತು ಎಂದು ಹೇಳುವುದರ ಜೊತೆಯಲ್ಲಿ ಗೆಲ್ಲಲು ಏನು ಮಾಡಬೇಕಿತ್ತು ಎನ್ನುವುದನ್ನೂ ರಾಜಾರಾಂ ತಮ್ಮ ಲೇಖನಗಳಲ್ಲಿ ಹೇಳಿದ್ದಾರೆ.



ಆರೋಗ್ಯ ಕ್ಷೇತ್ರ ಅವರು ಸುಮಾರು ಹದಿನೇಳು ವರ್ಷ ಆಟವಾಡಿದ್ದ ಮೈದಾನ. ಸಾಮಾನ್ಯವಾಗಿ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳಕಲ್ಯಾಣ ಖಾತೆಗಳನ್ನು ಮಹಿಳೆಯರಿಗೆ ಮೀಸಲಿಡುವಂತೆ ಮಾಧ್ಯಮಗಳಲ್ಲಿಯೂ ಮಹಿಳೆ ಮತ್ತು ಆರೋಗ್ಯದ ಬೀಟ್ ಗಳನ್ನು ಮಹಿಳಾ ಪತ್ರಕರ್ತರಿಗೆ ಒಪ್ಪಿಸಿಬಿಡುತ್ತಾರೆ. ರಾಜಾರಾಂ ತಲ್ಲೂರು ಈ ವಿಷಯದಲ್ಲಿ ಅದೃಷ್ಟವಂತರು. ಅವರು ತಮ್ಮ ವೃತ್ತಿಬದುಕಿನ ಬಹುಭಾಗವನ್ನು ಆರೋಗ್ಯ ಪತ್ರಿಕೋದ್ಯಮದಲ್ಲಿ ಕಳೆದವರು. ಅದೂ ಅಲ್ಲದೆ ರಾಜ್ಯದಲ್ಲಿಯೇ ಹೆಚ್ಚು ಖಾಸಗಿ ವೈದ್ಯಕೀಯ ಕಾಲೇಜು-ಆಸ್ಪತ್ರೆಗಳು ಕರಾವಳಿಯ ಜಿಲ್ಲೆಗಳಲ್ಲಿಯೇ ನೆಲೆ ಕಂಡುಕೊಂಡ ಕಾರಣದಿಂದಾಗಿ ನೆರೆಮನೆಗಳಲ್ಲಿನ ಬಾನಗಡಿಗಳನ್ನು ಅವರು ಸಮೀಪದಿಂದ ನೋಡಲು ಸಾಧ್ಯವಾಗಿದೆ.



ತನಿಖಾ ಪತ್ರಿಕೋದ್ಯಮವನ್ನು ಹೊರಗಿನಿಂದ ವ್ಯಾಖ್ಯಾನಿಸುವ ಕೆಲವರ ಕಣ್ಣಲ್ಲಿ ಪತ್ತೆದಾರಿ ಪುರುಷೋತ್ತಮನಿರುತ್ತಾನೆ. ಇನ್ನೂ ಕೆಲವರಿಗೆ ಬೋಪೋರ್ಸ್ ಹಗರಣದ ನೆನಪುಗಳಿರುತ್ತವೆ. ತನಿಖಾ ಪತ್ರಿಕೋದ್ಯಮ ಈ ಹಳೆಯ ಮಾಡೆಲ್ ಗಳನ್ನು ದಾಟಿ ಬಂದಿದೆ. ಇದರ ಒಂದು ಮಾದರಿಯನ್ನು ರಾಜಾರಾಂ ತಲ್ಲೂರು ಅವರ ಲೇಖನಗಳಲ್ಲಿ ಕಾಣಬಹುದು.

‘ಸುದ್ದಿ ಪವಿತ್ರ, ಟೀಕು ಮುಕ್ತ’ ಎನ್ನುವುದು ಪತ್ರಿಕೋದ್ಯಮದ ಜನಪ್ರಿಯ ಘೋಷವಾಕ್ಯ. ಮೂಲಸುದ್ದಿಯನ್ನು ತಿರುಚಬಾರದು, ವಿಶ್ಲೇಷಣೆಯನ್ನು ಮುಕ್ತವಾಗಿ ಮಾಡಬಹುದು ಎನ್ನುವುದು ಈ ನೀತಿಸಂಹಿತೆಯ ಸಾರ. ತಂತ್ರಜ್ಞಾನವನ್ನು ತನ್ನ ವೃತ್ತಿಯ ಕೌಶಲವಾಗಿ ಬಳಸಿಕೊಂಡಿರುವ ರಾಜಾರಾಂ, ಕೃಷಿ,ಆರೋಗ್ಯ, ಪರಿಸರ, ಮಾಧ್ಯಮ..ಹೀಗೆ ಕ್ಷೇತ್ರಗಳು ಯಾವುದೇ ಇರಲಿ ಅದರ ಬಗೆಗಿನ ಮಾಹಿತಿಯನ್ನು ಅಗೆದು ತೆಗೆದು (ಡಾಟಾ ಮೈನಿಂಗ್ ?) ಅಂಕಿ-ಅಂಶಗಳು ಮತ್ತು ದಾಖಲೆಗಳ ಕೊಂಡಿಗಳನ್ನು ಲೇಖನಗಳಿಗೆ ಜೋಡಿಸಿ ಮುಂದಿಡುತ್ತಾರೆ (ಡಾಟಾ ಜರ್ನಲಿಸಂ). ಈ ಪುಸ್ತಕದಲ್ಲಿರುವ ಲೇಖನಗಳಲ್ಲಿ ಇದನ್ನು ಕಾಣಬಹುದು. ಹೌದು, ಒಮ್ಮೊಮ್ಮೆ ಇಂತಹ ಲೇಖನಗಳಲ್ಲಿನ ಅಂಕೆಸಂಖ್ಯೆ, ತಾಂತ್ರಿಕ ಪಾರಿಭಾಷಿಕ ಶಬ್ದಗಳು ಸುಲಲಿತ ಓದಿನ ಓಟಕ್ಕೆ ಅಡ್ಡಬರುವುದು ನಿಜವಾದರೂ ಫೇಕ್ ನ್ಯೂಸ್ ಗಳಿಂದಾಗಿ ಮಾಧ್ಯಮಗಳು ತ್ವರಿತಗತಿಯಲ್ಲಿ ಕಳೆದುಕೊಳ್ಳುತ್ತಿರುವ ವಿಶ್ವಾಸಾರ್ಹತೆಯನ್ನು ಮರಳಿ ತಂದುಕೊಡಲು ಇಂತಹ ಡಾಟಾ ಪತ್ರಿಕೋದ್ಯಮ ನೆರವಾಗುತ್ತದೆ ಎನ್ನವುದು ಸತ್ಯ.



ರಾಜಾರಾಂ ತಲ್ಲೂರು ಮತ್ತು ನನ್ನಂತಹವರನ್ನು ನಡುರಾತ್ರಿಯಲ್ಲಿಯೂ ನಿದ್ದೆಕೆಡಿಸಿ ಎದ್ದು ಕೂರುವಷ್ಟು ಮಾಧ್ಯಮ ಕ್ಷೇತ್ರ ನಮ್ಮನ್ನು ಕಾಡುತ್ತಿರುವುದು ನಿಜ, ಇದಕ್ಕೆ ಕಾರಣ ಮಾಧ್ಯಮ ಕ್ಷೇತ್ರ ನಮ್ಮ ಅನ್ನದ ಬಟ್ಟಲು. ಬಟ್ಟಲಿನಲ್ಲಿನ ಅನ್ನವನ್ನು ಯಾರೋ ಕೆಡಿಸಿದರೆ, ಅದಕ್ಕೆ ಯಾರೋ ವಿಷಹಾಕಿದರೆ, ಹಳಸಿ ಹೋದರೆ, ಯಾರೋ ಕಸಿದುಕೊಂಡರೆ ವೇದನೆಯಾಗುತ್ತದೆಯಲ್ಲಾ ಅಂತಹ ಕಾಡುವಿಕೆ ಇದು. ರಾಜಾರಾಂ, ‘’ಡಿಯರ್ ಮೀಡಿಯಾ’’ ಎಂಬ ಹ್ಯಾಷ್ ಟ್ಯಾಗ್ ನಲ್ಲಿ ನಿರಂತರವಾಗಿ ಮಾಧ್ಯಮ ಸಂಬಂಧಿ ಬರಹಗಳನ್ನು ಫೇಸ್ ಬುಕ್ ಪುಟಗಳಲ್ಲಿ ಬರೆದಿದ್ದಾರೆ. ಆ ಬರಹಗಳುದ್ದಕ್ಕೂ ವ್ಯಕ್ತವಾಗಿದ್ದ ಮಾಧ್ಯಮಗಳ ವ್ಯಾಪಾರೀಕರಣ ಆತ್ಮಘಾತುಕತನ, ಬುದ್ದಿ ಬಡತನ, ನೈಚ್ಛಾನುಸಂಧಾನದ ವಿರುದ್ಧದ ಆಕ್ರೋಶವನ್ನು ಈ ಪುಸ್ತಕದ ಲೇಖನಗಳಲ್ಲಿಯೂ ಕಾಣಬಹುದಾಗಿದೆ.



ನಾನು ಮತ್ತು ನನಗಿಂತ ಕಿರಿಯರಾದ ರಾಜಾರಾಂ ಪತ್ರಿಕಾ ಕಚೇರಿ ಪ್ರವೇಶಿಸಿದ ನಂತರದ 3-4 ದಶಕಗಳಲ್ಲಿ ನಮ್ಮ ಕಣ್ಣುಗಳನ್ನು ನಾವೇ ನಂಬಲಾರದಷ್ಟು ಮಾಧ್ಯಮ ಕ್ಷೇತ್ರ ಬದಲಾಗಿದೆ. ಈ ಸಣ್ಣ ಅವಧಿಯಲ್ಲಿ ಪತ್ರಿಕೆಗಳ ಸಂಖ್ಯೆ, ಪ್ರಸಾರ ಹೆಚ್ಚಿರುವುದು, ಆಯ್ದ ಪತ್ರಕರ್ತರು ಸೆಲೆಬ್ರಿಟಿಗಳಾಗಿರುವುದು ಮಾತ್ರವಲ್ಲ, ನೂರಾರು ಸಂಖ್ಯೆಯಲ್ಲಿ ಟಿವಿಚಾನೆಲ್ ಗಳು, ರೇಡಿಯೋ, ಬೆರಳತುದಿಗೆ ಮಾಹಿತಿ ಲೋಕವನ್ನು ತಂದೊಡ್ಡುವ ಇಂಟರ್ನೆಟ್, ಸಾಮಾಜಿಕ ಮಾಧ್ಯಮಗಳು, ಹೊಸ ಬಗೆಯ ಸಂಪರ್ಕ ಸಾಧನಗಳು, ಅತ್ಯಾಧುನಿಕ ತಂತ್ರಜ್ಞಾನದ ಮುದ್ರಣ ವ್ಯವಸ್ಥೆ ..ಹೀಗೆ ಮಾಧ್ಯಮ ತನ್ನ ಸಾಂಪ್ರದಾಯಿಕ ರೂಪ-ವಿನ್ಯಾಸಗಳನ್ನು ಕಳಚಿ ಬಿಸಾಕಿ ಮುಂದೆ ಸಾಗುತ್ತಲೇ ಇದೆ. ಆದರೆ ಈ ಅವಧಿಯಲ್ಲಿ ಮಾಧ್ಯಮ ಮತ್ತು ಪತ್ರಕರ್ತರ ಬಗೆಗಿನ ‘ಓದುಗ ದೇವರ’ ಅಭಿಪ್ರಾಯ ಏನಾಗಿದೆ ಎಂದು ಕುತೂಹಲಕ್ಕೆ ಯಾರಾದರೂ ಬೀದಿಯಲ್ಲಿ ನಿಂತು ಅವರನ್ನು ಕೇಳಿದರೆ ಆಘಾತವಾದೀತು, ಚಾನೆಲ್ ಗಳಿಗೆ ಜನ ಹೆಚ್ಚು ಶಾಪಹಾಕಬಹುದು, ಪತ್ರಿಕೆಗಳಿಗೆ ಸ್ವಲ್ಪ ಕಡಿಮೆ. ವ್ಯತ್ಯಾಸ ಇಷ್ಟೆ.



ಮಾಧ್ಯಮಗಳ ಬಗೆಗಿನ ಬದಲಾಗಿರುವ ಈ ಜನಾಭಿಪ್ರಾಯ ರಾತ್ರಿ ಬೆಳಗಾಗುವುದರೊಳಗೆ ರೂಪುಗೊಂಡದ್ದಲ್ಲ. ಇದು ಎಲ್ ಪಿಜಿ (ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ) ಯುಗದ ನಂತರದ ಬೆಳವಣಿಗೆ. ಒಂದುಕಾಲದಲ್ಲಿ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ, ನಂತರದ ದಿನಗಳಲ್ಲಿ ಸಾಮಾಜಿಕ ಪರಿವರ್ತನೆಯ ಸಾಧನವಾಗಿದ್ದ ಪತ್ರಿಕೆ ಇಂದು ವೃತ್ತಿಯಾಗಿ ಉಳಿದಿಲ್ಲ, ಉದ್ಯಮವಾಗಿದೆ. ವೃತ್ತಿಯೊಂದು ಉದ್ಯಮವಾದಾಗ ಉದ್ಯಮದಎಲ್ಲ ಸೂತ್ರಗಳು ಅದಕ್ಕೆ ಅನ್ವಯವಾಗುತ್ತದೆ. ಉದ್ಯಮದ ಸೂತ್ರ ಸರಳವಾದುದು ಬಂಡವಾಳ ಹಾಕುವುದು ಲಾಭ ತೆಗೆಯುವುದು. ಈ ಸೂತ್ರಕ್ಕೆ ಮೊದಲು ಬಲಿಯಾಗುವುದು ಮಾಧ್ಯಮದ ಮೂಲ ಉದ್ದೇಶವಾದ ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿ.



ಸಾಮಾಜಿಕ ಬದಲಾವಣೆಯ ಪ್ರಕ್ರಿಯೆಯಲ್ಲಿ ಪತ್ರಕರ್ತರು ಥರ್ಡ್ ಪಾರ್ಟಿ. ಅವರ ಬಳಿ ಕಾರ್ಯಾಂಗ,ಶಾಸಕಾಂಗ ಮತ್ತು ನ್ಯಾಯಾಂಗದ ಯಾವ ಅಧಿಕಾರದ ದಂಡವೂ ಇರುವುದಿಲ್ಲ. ಅವರು ಒಳಿತಿನ ಪರ ಇಲ್ಲವೇ ಕೆಡುಕಿನ ವಿರುದ್ಧ ಜನಾಭಿಪ್ರಾಯವನ್ನು ರೂಪಿಸಬಹುದು ಅಷ್ಟೆ. ಭಾರತದಂತಹ ಬಹುಪಾಲು ಜನ ಅಶಿಕ್ಷಿತರು, ಅರೆಶಿಕ್ಷಿತರು, ಬಡವರು ಇರುವದೇಶದಲ್ಲಿ ಪತ್ರಿಕೆಗಳು ರೂಪಿಸಿದ್ದೇವೆ ಎಂದು ಹೇಳಿಕೊಂಡ ಜನಾಭಿಪ್ರಾಯವೂ ನಿಜವಾದ ಜನದನಿಯಾಗುವುದಿಲ್ಲ. ಅದು ಶಿಕ್ಷಿತ, ಮೇಲು ಮಧ್ಯಮವರ್ಗದ, ನಗರ ಕೇಂದ್ರಿತ ಜನರ ಅಭಿಪ್ರಾಯವೇ ಆಗಿರುತ್ತದೆ. ಆದರೆ ಇದಕ್ಕಿಂತಲೂ ಅಪಾಯಕಾರಿಯಾದುದು ತಮಗೆ ಬೇಕಾದ ಅಭಿಪ್ರಾಯಗಳನ್ನು ಸಮ್ಮತಿ ರೂಪದಲ್ಲಿ ಉತ್ಪಾದನೆ ಮಾಡುವಂತಹದ್ದು.  ಅಮೆರಿಕದ ಚಿಂತಕ ನೋಮ್ಚೋಮ್ಸ್ಕಿ ಮಾತಿನಲ್ಲಿ ಹೇಳುವುದಾಗಿದ್ದರೆ ಇದು ‘ಮ್ಯಾನುಫ್ಯಾಕ್ಚರಿಂಗ್ ಕನ್ಸೆಂಟ್’.



ಭ್ರಷ್ಟತೆಯನ್ನೇ ಮನೆ ದೇವರನ್ನಾಗಿ ಮಾಡಿಕೊಂಡ ಉದ್ಯಮಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರ ದುಷ್ಟಕೂಟ ಒಟ್ಟು ಸೇರಿದರೆ ಏನಾಗಬಹುದೆಂಬುದಕ್ಕೆ ದೇಶದ ಪತ್ರಿಕೋದ್ಯಮದಲ್ಲಿ ಕಾಣಿಸಿಕೊಂಡ ಎರಡು ಕಾಯಿಲೆಗಳಿಂದ ನಮಗೆ ಗೊತ್ತಾಗಿದೆ.  ಮೊದಲನೆಯದ್ದು ಕಾಸಿಗಾಗಿ ಸುದ್ದಿ. ಇನ್ನೊಂದು ರಾಡಿಯಾಟೇಪ್ ಹಗರಣ. ಎಲ್ಲದಕ್ಕೂ ಒಂದು ಬೆಲೆ ಇದೆ. ಕೊಂಡುಕೊಳ್ಳುವ ತಾಕತ್ತು ಇರಬೇಕು ಎನ್ನುತ್ತದೆ ವ್ಯಾಪಾರಿ ಲೋಕ. ವಾಣಿಜ್ಯಮಯ ಜಗತ್ತಿನಲ್ಲಿ ಈಗ ಪ್ರತಿಯೊಂದು ಮಾರಾಟವಾಗತೊಡಗಿದೆ.... ಸತ್ಯ, ನ್ಯಾಯ, ನಿಷ್ಠೆ, ಪ್ರೀತಿ, ಸ್ನೇಹ, ಪ್ರಾಮಾಣಿಕತೆ ಎಲ್ಲವೂ ಜೊತೆಗೆ ಸುದ್ದಿ ಕೂಡಾ. ಜನತೆ ಬಯಸಿದ್ದನ್ನು ಕೊಡುತ್ತಿದ್ದೇವೆ ಎಂದು ತಮ್ಮ ವಿದ್ರೋಹವನ್ನು ಸಮರ್ಥಿಸಿಕೊಳ್ಳುವ ಮಾಧ್ಯಮಗಳು, ‘ ಬಯಸಿದ್ದನ್ನಲ್ಲ, ಜನರಿಗೆ ಅಗತ್ಯ ಇರುವುದನ್ನು ಕೊಡುವುದು ತಮ್ಮ ಕರ್ತವ್ಯ’ ಎನ್ನುವುದನ್ನು ಮರೆತುಬಿಟ್ಟಿವೆ.



ಮಾಧ್ಯಮಗಳ ಪಾಲಿಗೆ ವಿಶ್ವಾಸಾರ್ಹತೆ ಎನ್ನುವುದು ಮನುಷ್ಯನಿಗೆ ಇರಬೇಕಾದ ಶೀಲ ಇದ್ದ ಹಾಗೆ. ಪತ್ರಿಕೆಗಳಲ್ಲಿ ತನಿಖಾ ವರದಿ ಪ್ರಕಟವಾದಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಪಾದಕ ಪ್ರಕಟಿಸದೆ ಇದ್ದರೂ ಓದುಗರು ಅದನ್ನು ನಂಬುತ್ತಿದ್ದರು. ಅದು ಪತ್ರಿಕೆಯ ಮೇಲೆ, ಪತ್ರಕರ್ತರ ಮೇಲಿನ ಓದುಗರ ನಂಬಿಕೆ. ಈಗಿನ ಪರಿಸ್ಥಿತಿ ಹಾಗಿಲ್ಲ. ಮೊದಲು ಟಿವಿ ಚಾನೆಲ್ ಗಳು, ನಂತರ ದಾಂಗುಡಿಯಿಟ್ಟ ಸಾಮಾಜಿಕ ಮಾಧ್ಯಮಗಳು ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.



ಓದುಗರನ್ನೂ ಪತ್ರಕರ್ತರನ್ನಾಗಿ ಮಾಡಿದ ಸಾಮಾಜಿಕ ಮಾಧ್ಯಮಗಳು ದಾರಿ ತಪ್ಪುತ್ತಿರುವ ಮುಖ್ಯವಾಹಿನಿ ಮಾಧ್ಯಮಗಳಿಗೆ ಪರ್ಯಾಯ ಆಗಬಹುದು ಎಂಬ ನಿರೀಕ್ಷೆ ಕೂಡಾ ಹುಸಿಯಾಗಿದೆ. ಬಹಳ ಮುಖ್ಯವಾಗಿ ಮಾಧ್ಯಮಗಳಿಗೆ ಇರಬೇಕಾದ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಮೂಲ ಲಕ್ಷಣಗಳೇ ಈ ಪರ್ಯಾಯ ಮಾಧ್ಯಮಗಳಲ್ಲಿಯೂ ಇಲ್ಲದಂತಾಗಿದೆ. ಎತ್ತಿಕೊಂಡವರ ಕೈಕೂಸಾಗುವ ಸಾಮಾಜಿಕ ಮಾಧ್ಯಮಗಳನ್ನು ರಾಜಕೀಯ ಪಕ್ಷಗಳು ಹೇಗೆ ಬಳಸಿಕೊಳ್ಳುತ್ತಿವೆ ಎನ್ನುವುದನ್ನು ನಮ್ಮ ದೇಶದ ಜನತೆ ಅನುಭವಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಮಾಹಿತಿ ಕೊರತೆ ನಮ್ಮ ದೊಡ್ಡ ಶತ್ರುವಾಗಿತ್ತು, ಇಂದು ಮಾಹಿತಿ ಸ್ಪೋಟ ಶತ್ರುವಾಗಿದೆ. ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಕವಾಗಿ ಹರಡುತ್ತಿರುವ ಮಾಹಿತಿ ಸುನಾಮಿಗೆ ಸಿಕ್ಕಿ ಕೊಚ್ಚಿಹೋಗುತ್ತಿರುವ ಜನ ಸತ್ಯ-ಮಿಥ್ಯೆಗಳನ್ನು ಗುರುತಿಸಲಾಗದೆ ಗೊಂದಲದ ಗೂಡಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಸಾಮಾಜಿಕ ಮಾಧ್ಯಮಗಳ ಬಹಿಷ್ಕಾರ ಅಲ್ಲ, ಆ ರೋಗಕ್ಕೆ ಅದೇ ಮಾಧ್ಯಮವನ್ನು ಆ್ಯಂಟಿಡೋಟ್ ರೀತಿ ಬಳಸಬೇಕಾಗಿದೆ. ಕೇಳಿದ,ಓದಿದ ವಿಚಾರಗಳ ಗೊಂದಲದಲ್ಲಿ ಮುಳುಗಿ ದಿಕ್ಕೆಟ್ಟವರಿಗೆ ಸರಿಯಾದ ಮಾಹಿತಿಯ ಪ್ರಾಣವಾಯುವನ್ನು ಅದೇ ಮಾಧ್ಯಮದ ಮೂಲಕ ನೀಡಿ ಮೇಲಕ್ಕೆತ್ತಬೇಕಾಗಿದೆ. ಈ ಪುಸ್ತಕದಲ್ಲಿನ ಲೇಖನಗಳಲ್ಲಿ ಇಂತಹದ್ದೊಂದು ಪ್ರಯತ್ನವನ್ನು ಕಾಣಬಹುದು.



ಪತ್ರಕರ್ತರಿಗೆ ನಿವೃತ್ತಿ ಇಲ್ಲ ಎನ್ನುವುದು ನಿಜ, ಅದೇ ರೀತಿ ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗಿರುವುದಿಲ್ಲ ಎನ್ನುವುದು ಕೂಡಾ ವಾಸ್ತವ. ಆದರೆ 60 ದಾಟಿದ ಮೇಲೆ ಯಾವ ಸಂಸ್ಥೆಯೂ ಅವರನ್ನು ತಮ್ಮ ಬಳಿ ಇಟ್ಟುಕೊಳ್ಳುವುದಿಲ್ಲ. ಇದರಿಂದಾಗಿ ಪತ್ರಕರ್ತರ ವೃತ್ತಿಯ ಅನುಭವ ಸದುಪಯೋಗವಾಗುವುದು ಕಡಿಮೆ. ಪತ್ರಿಕೆಗಳಲ್ಲಿ ಬೈಲೈನ್ ಗಳು ಕಾಣಿಸುವ ವರೆಗೆ ಮಾತ್ರ ಓದುಗರ ಕಣ್ಣಲ್ಲಿ ಜೀವಂತವಾಗಿರುವ ಪತ್ರಕರ್ತರು, ಬೈಲೈನ್ ಗಳು ಮಾಯವಾದಾಗ ಅವರ ಕಣ್ಣುಗಳಿಂದ ಮಾತ್ರವಲ್ಲ ಮನಸ್ಸಿನಿಂದಲೂ ಮಾಯವಾಗುತ್ತಾರೆ. ಆದರೆ ಸಾಮಾಜಿಕ ಮಾಧ್ಯಮ, ಹವ್ಯಾಸಿ ಪತ್ರಿಕೋದ್ಯಮಕ್ಕೆ ವಿಶಾಲವಾದ ವೇದಿಕೆಯನ್ನು ಕಲ್ಪಿಸಿದೆ.



ವೃತ್ತಿಪತ್ರಕರ್ತರಾಗಿ ಮಾಡಲು ಸಾಧ್ಯ ಇಲ್ಲದೆ ಇದ್ದುದನ್ನು ಈಗ ಹವ್ಯಾಸಿ ಪತ್ರಕರ್ತ ಹೆಚ್ಚಿನ ಆಯ್ಕೆ ಮತ್ತು ಸ್ವಾತಂತ್ರ್ಯಗಳೊಂದಿಗೆ ಮಾಡಬಹುದು. ವಯಸ್ಸಿನ ಕಾರಣಕ್ಕೆ ಇಲ್ಲವೇ ಸ್ವಯೀಚ್ಚೆಯಿಂದ ನಿವೃತ್ತಿ ಪಡೆದಿರುವ ಅನೇಕ ಪತ್ರಕರ್ತರಿಗೆ ಸಾಮಾಜಿಕ ಮಾಧ್ಯಮ ತಮ್ಮ ಬದುಕಿನ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಲು ಪ್ರೇರಣೆ ಮತ್ತು ಅವಕಾಶವನ್ನು ನೀಡಿದೆ. ಪಿ.ಸಾಯಿನಾಥ್ ಅವರಂತಹ ಅನೇಕ ಹಿರಿಯ ಪತ್ರಕರ್ತರು ಈ ಅವಕಾಶವನ್ನು ಬಳಸಿಕೊಂಡು ಮುಖ್ಯವಾಹಿನಿಯ ಮಾಧ್ಯಮಗಳಿಗಿಂತ ಹೆಚ್ಚು ವೃತ್ತಿಪರವಾಗಿ ಮತ್ತು ಜನಪರವಾಗಿ ತಮ್ಮನ್ನು ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.



ಕವಲುದಾರಿಯಲ್ಲಿರುವ ಪತ್ರಕರ್ತರು ತಮ್ಮ ದಾರಿ ಕಂಡುಕೊಳ್ಳಲು ಈ ಮಾಡೆಲ್ ನೆರವಾಗಬಹುದೇನೋ? ರಾಜಾರಾಂ ತಲ್ಲೂರು ಅಂತಹವರಿಗೆ ಪ್ರೇರಣೆಯಾಗಲಿ.

-ದಿನೇಶ್ ಅಮಿನ್ ಮಟ್ಟು

Ads on article

Advertise in articles 1

advertising articles 2

Advertise under the article