ಮಂಗಳೂರು: ಕರಾವಳಿಯ ಅಗ್ರಮಾನ್ಯ ಹಾಗೂ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್ ಇದೇ ಮೊದಲ ಬಾರಿಗೆ ನಗರದಿಂದ ಹೊರಗೆ ಎಟಿಎಂ ಸ್ಥಾಪಿಸುವ ಮೂಲಕ ಗ್ರಾಮೀಣ ಜನರಿಗೂ ಅತ್ಯಾಧುನಿಕ ಬ್ಯಾಂಕಿಂಗ್ ಸೇವೆ ನೀಡುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.
ಮಂಗಳೂರು, ಉಡುಪಿ ಹಾಗೂ ಕಂಕನಾಡಿಯಲ್ಲಿ ಎಟಿಎಂ ಸ್ಥಾಪಿಸಿದ ಬಳಿಕ ಈಗ ಬಂಟ್ವಾಳದಲ್ಲಿ ತನ್ನ ನಾಲ್ಕನೇ ಎಟಿಎಂ ಸ್ಥಾಪನೆ ಮಾಡಿದೆ.
ಬ್ಯಾಂಕಿನ ಬಿ.ಸಿ.ರೋಡ್ ಶಾಖಾ ಕಟ್ಟಡದ ನೆಲ ಅಂತಸ್ತಿನಲ್ಲಿ ನೂತನ ಎಟಿಎಂ ನ್ನು ಲೋಕಾರ್ಪಣೆ ಮಾಡಲಾಯಿತು. ಬ್ಯಾಂಕ್‌ನ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ ಅವರು ಎಟಿಎಂ ಅನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರ ವಿಶೇಷ ಮುತುವರ್ಜಿಯಿಂದ ಅನುಷ್ಠಾನಗೊಂಡ ಈ ATM ಸರ್ವರ ಆರ್ಥಿಕ ವ್ಯವಹಾರಗಳಿಗೆ ನೆರವಾಗಲಿದೆ ಎಂದು ಹೇಳಿದರು.
ಬ್ಯಾಂಕಿನ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಶುಭ ಕೋರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಬ್ಯಾಂಕಿನ ನಿರ್ದೇಶಕರಾದ ಟಿ. ಜಿ. ರಾಜಾರಾಮ್ ಭಟ್, ಶಶಿಕುಮಾರ್ ರೈ ಬಿ, ಮೋನಪ್ಪ ಶೆಟ್ಟಿ ಎಕ್ಕಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ, ಭೂ ಅಭಿವೃದ್ಧಿ ಬ್ಯಾಂಕ್ ರಾಜ್ಯ ನಿರ್ದೇಶಕ ರಾಜಶೇಖರ್ ಜೈನ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಸಹಕಾರಿ ಇಲಾಖೆಯ ಗೋಪಾಲ ಗೌಡ, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಸಿಇಒ ಪಾಲ್ಗೊಂಡಿದ್ದರು.
ಅಮ್ಟಾಡಿ ಸಿಎ ಬ್ಯಾಂಕ್ ಸಿಬಂದಿ ದಿನೇಶ್ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು.


