ಬೆಳ್ತಂಗಡಿ: ಇಬ್ಬರು ಆರೋಪಿಗಳಿಂದ ಅತ್ಯಾಚಾರಕ್ಕೊಳಗಾದ ಬಾಲಕಿ 7ತಿಂಗಳ ಗರ್ಭಿಣಿ; ಪೊಕ್ಸೊ ಪ್ರಕರಣ ದಾಖಲು

ಮಂಗಳೂರು: ಇಬ್ಬರು ಆರೋಪಿಗಳಿಂದ ಅತ್ಯಾಚಾರಕ್ಕೊಳಗಾಗಿರುವ ಅಪ್ರಾಪ್ತ ಬಾಲಕಿ 7 ತಿಂಗಳ ಗರ್ಭಿಣಿಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪೊಕ್ಸೊ ಕಾಯ್ದೆಯನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ಅಪ್ರಾಪ್ತ ಬಾಲಕಿಯು ಬೆಳ್ತಂಗಡಿ ಜೂನಿಯರ್ ಕಾಲೇಜಿನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ‌. 2020ರ ಡಿಸೆಂಬರ್‌ ನಲ್ಲಿ ಲಾಕ್ ಡೌನ್ ಸಂದರ್ಭ ಈಕೆಯ ಮನೆಯ ಬಳಿ ಕೆಲಸ ಮಾಡುತ್ತಿದ್ದ ಜೆಸಿಬಿ ಚಾಲಕ ರವೀಂದ್ರ ಎಂಬಾತನ ಪರಿಚಯವಾಗಿದೆ‌‌. ಆ ಬಳಿಕ ಆತ ಬಾಲಕಿಯೊಂದಿಗೆ ಸಲಿಗೆಯಿಂದ ಇದ್ದು, ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಈ ವಿಚಾರವನ್ನು ಯಾರಿಗೂ ತಿಳಿಸಬಾರದೆಂದು ಹೇಳಿದ್ದ ಆತ ಬಳಿಕ‌ ನಾಪತ್ತೆಯಾಗಿದ್ದಾನೆ‌. 

ಅಲ್ಲದೆ ರವೀಂದ್ರ ಸಂತ್ರಸ್ತೆಯೊಂದಿಗೆ ಸಂಪರ್ಕ ಬೆಳೆಸುವ ಮೊದಲೇ 2020ರ ಎಪ್ರಿಲ್ ತಿಂಗಳಿನಲ್ಲಿ ಸಂಬಂಧಿಯಾದ ಕೊಕ್ಕಾಡಿ ಯೋಗೀಶ್ ಸಂತ್ರಸ್ತ ಬಾಲಕಿಯನ್ನು ಸವಣಾಲು ಗ್ರಾಮದ ಕಾಡುಪ್ರದೇಶಕ್ಕೆ ಕರೆದೊಯ್ದು 2 ಬಾರಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ

ಲಾಕ್‌ಡೌನ್ ಬಳಿಕ ಬಾಲಕಿ ಶಾಲೆಗೆ ಹೋಗಿದ್ದು, ಸೆ.23ರಂದು ಇಂಜೆಕ್ಷನ್ ಕೊಡಲೆಂದು ಬಂದ ವೈದ್ಯರು ಆಕೆಯ ದೇಹಸ್ಥಿತಿಯನ್ನು ನೋಡಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸುವಂತೆ ತಿಳಿಸಿದ್ದಾರೆ. ಅದರಂತೆ ತಪಾಸಣೆ ನಡೆಸಿದಾಗ ಬಾಲಕಿ 7 ತಿಂಗಳ ಗರ್ಭಿಣಿಯಾಗಿರುದು ತಿಳಿದು ಬಂದಿದೆ. 

ಅದರಂತೆ ಬಾಲಕಿಯ ಪೋಷಕರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು  ಪೊಕ್ಸೊ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.