-->
ಒಂದು ವರ್ಷದಿಂದ ತಾಯಿಯ ಮೃತದೇಹ ಸಂರಕ್ಷಿಸಿಟ್ಟು 43 ಲಕ್ಷ ರೂ. ಗಳಿಸಿದ ಪುತ್ರ!

ಒಂದು ವರ್ಷದಿಂದ ತಾಯಿಯ ಮೃತದೇಹ ಸಂರಕ್ಷಿಸಿಟ್ಟು 43 ಲಕ್ಷ ರೂ. ಗಳಿಸಿದ ಪುತ್ರ!

ವಿಯೆನ್ನಾ: ತಾಯಿ ಮೃತಪಟ್ಟರೂ ಪುತ್ರನೋರ್ವ ಆಕೆಗೆ ದೊರಕುವ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಆಕೆಯ ಮೃತದೇಹವನ್ನು ಸುಮಾರು ಒಂದು ವರ್ಷಗಳ ಕಾಲ ಸಂರಕ್ಷಿಸಿಟ್ಟಿದ್ದ ವಿಚಿತ್ರ ಘಟನೆಯೊಂದು ಆಸ್ಟ್ರಿಯಾದಲ್ಲಿ ಬೆಳಕಿಗೆ ಬಂದಿದೆ. 

89 ವರ್ಷದ ವಯೋವೃದ್ಧೆ ತಾಯಿಯ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪುತ್ರ ಈ ರೀತಿ ಮಾಡಿದ್ದಾನೆಂದು ತಿಳಿದು ಬಂದಿದೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಈ ವೃದ್ಧ ಮಹಿಳೆ ಕಳೆದ ವರ್ಷ ಜೂನ್​ ನಲ್ಲಿ ಮೃತಪಟ್ಟಿದ್ದರು. ಆದರೆ ಆಸ್ಟ್ರೀಯಾದ ಟೈರೂಲ್ ವಲಯದಲ್ಲಿ ವಾಸಿಸುತ್ತಿದ್ದ ಆಕೆಯ 66 ವರ್ಷದ ಪುತ್ರ ವೃದ್ಧೆಯ ಮೃತದೇಹವನ್ನು ಕಳೆದ ಒಂದು ವರ್ಷದಿಂದ ಸಂರಕ್ಷಿಸಿಟ್ಟಿದ್ದ. ಈ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಮೃತದೇಹವನ್ನು ಆಸ್ಟ್ರಿಯಾ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ತಾನೇಕೆ ಈ ರೀತಿಯಲ್ಲಿ ಮೃತದೇಹವನ್ನು ಸಂರಕ್ಷಿಸಿ ಇಟ್ಟಿದ್ದೆ ಎಂಬುದರ ಬಗ್ಗೆ ಬಾಯಿ ಬಿಟ್ಟಿದ್ದಾನೆ. 

ತಾನು ತಾಯಿಯ ಮೃತದೇಹ ಕೆಡಬಾರದೆಂದು ಐಸ್​ ಪ್ಯಾಕ್​ ಇಟ್ಟಿದ್ದು, ವಾಸನೆ ಬಾರದಿರಲೆಂದು ಮೃತದೇಹವನ್ನು ಮನೆ ಬೇಸ್​ಮೆಂಟ್​ನಲ್ಲಿ ಇಟ್ಟಿದ್ದೇನೆ‌. ಅಲ್ಲದೆ ಮೃತದೇಹದಿಂದ ದ್ರವಗಳು ಹೊರಹೊಮ್ಮ ಬಾರದೆಂದು ಬ್ಯಾಂಡೇಜ್​ ಸುತ್ತಿ ಒಂದು ಬಾಕ್ಸ್​ನಲ್ಲಿಟ್ಟು ಒಂದು ವರ್ಷ ಕಾಲ ಇಟ್ಟಿರುವುದಾಗಿ ಸ್ವತಃ ಆತನೇ ಒಪ್ಪಿಕೊಂಡಿದ್ದಾನೆ.

ಅಲ್ಲದೆ ತನ್ನ ಸೋದರಿಗೆ ತಾಯಿ ಆಸ್ಪತ್ರೆಯಲ್ಲಿರುವುದಾಗಿ ಸುಳ್ಳು ಹೇಳಿದ್ದಾನೆ. ಈ ಮೂಲಕ ಆತ ಒಂದು ವರ್ಷದಿಂದ ತಾಯಿಯ ಹೆಸರಿನಲ್ಲಿ ದೊರಕುವ 50,000 ಯೂರೋ ವಂಚನೆ ಮಾಡಿ ಪಡೆದುಕೊಂಡಿದ್ದಾನೆ. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 43.4 ಲಕ್ಷ ರೂ. ಹಣವನ್ನು ಮಗ ಸ್ವೀಕರಿಸಿದ್ದಾನೆ. ಮಹಿಳೆಯ ಹೆಸರಿನಲ್ಲಿದ್ದ ಪ್ರಯೋಜನಗಳು ಮತ್ತು ಪಿಂಚಣಿ ಹಣವನ್ನು ಪಡೆದುಕೊಳ್ಳುತ್ತಿದ್ದ. 

ಆದರೆ, ಇತ್ತೀಚೆಗೆ ಹೊಸದಾಗಿ ಬಂದಿದ್ದ ಪೋಸ್ಟ್‌ಮ್ಯಾನ್ ಫಲಾನುಭವಿಯ ಮುಖವನ್ನು ನೋಡಲು ಬಯಸಿದ್ದ. ಆದರೆ, ವಂಚಕ ಪುತ್ರ ತಾಯಿಯ ಮುಖ ತೋರಿಸಲು ನಿರಾಕರಿಸಿದ್ದಾನೆ. ಇದರಿಂದ ಅನುಮಾನಗೊಂಡ ಪೋಸ್ಟ್​ಮ್ಯಾನ್​ ತನ್ನ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾನೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗಲೇ ಆತನ ತಾಯಿ ಮೃತಪಟ್ಟು ಒಂದು ವರ್ಷವಾಗಿದ್ದು ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article