ತಮ್ಮ ಮೇಲಿನ ಐಟಿ ಇಡಿ ದಾಳಿ ನಡೆದಿರುವ ಹಿಂದೆ ಜೆಡಿಎಸ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಕೈವಾಡ ಇದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಪರೋಕ್ಷವಾಗಿ ಆರೋಪಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್, ತಾನು ಹಿಂದೆ ಇದ್ದ ಪಕ್ಷದವರೇ ತಮ್ಮ ಮನೆಯ ಮೇಲೆ ಇಡಿ ದಾಳಿ ನಡೆಸಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ವಿರುದ್ಧ ಬೊಟ್ಟು ಮಾಡಿದ್ದಾರೆ.
ತಮ್ಮ ಬೆಳವಣಿಗೆಯನ್ನು ಸಹಿಸದೇ ಈ ದಾಳಿ ನಡೆಸಿದ್ದಾರೆ. ಆದರೆ ಅವರು ಯಾರು ಎಂದು ನಾನು ಹೇಳುವುದಿಲ್ಲ. ನಾನು ಈ ಮಟ್ಟಕ್ಕೆ ಬೆಳೆಯುತ್ತೇನೆ ಎಂದು ಅವರು ನಿರೀಕ್ಷೆ ಮಾಡಿರಲಿಲ್ಲ. ದುರುದ್ದೇಶದಿಂದ ನನ್ನ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಜಮೀರ್ ಅಹ್ಮದ್ ಆರೋಪಿಸಿದ್ದಾರೆ.
ಇಡಿ ಅಧಿಕಾರಿಗಳು ತನ್ನ ಮನೆಯ ಮೇಲೆ ದಾಳಿ ನಡೆಸುತ್ತಿದ್ದಂತೆಯೇ ನನಗೂ ಅಚ್ಚರಿ ಉಂಟಾಯಿತು. ಅವರು ಮಾತ್ರ ಬೆಳೆಯಬೇಕು, ಅವರು ಮಾತ್ರ ಮನೆ ಕಟ್ಟಬೇಕು, ನನ್ನನ್ನು ದುರ್ಬಲ ಮಾಡಬೇಕು ಎನ್ನುವ ಕಾರಣಕ್ಕೆ ಈ ದಾಳಿ ನಡೆಸಲಾಗಿದೆ. ಆದರೆ ನನಗೆ ಎಲ್ಲವನ್ನು ಎದುರಿಸುವ ಶಕ್ತಿ ಇದೆ ಎಂದು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಅವರು ನೊಂದು ಹೇಳಿದ್ದಾರೆ.
