ಸಹಕಾರ ಕ್ಷೇತ್ರದ ಪಿತಾಮಹ ಮೊಳಹಳ್ಳಿ ಶಿವರಾವ್ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಮಹಾನ್ ಸಾಧಕ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಕೊಂಡಾಡಿದ್ದಾರೆ.
ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ನಡೆದ ಮೊಳಹಳ್ಳಿ ಶಿವರಾವ್ ಅವರ 141ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಮೊಳಹಳ್ಳಿ ಶಿವರಾವ್ ಅವರ ಭಾವಚಿತ್ರಕ್ಕೆ ಗೌರವಾರ್ಪಣೆ ಮಾಡಿದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಮೊಳಹಳ್ಳಿ ಶಿವರಾಯರು 1914ರಲ್ಲಿ ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕನ್ನು ಸ್ಥಾಪಿಸಿ ಬ್ಯಾಂಕಿಗೆ ಮಹತ್ವದ ಅಡಿಗಲ್ಲು ಹಾಕಿದರು. ಈ ಭದ್ರ ಬುನಾದಿಯಡಿ ಬೆಳೆದ ಬ್ಯಾಂಕ್ ಇಂದು 107 ಶಾಖೆಗಳನ್ನು ಸ್ಥಾಪಿಸಿ ಹೆಮ್ಮರವಾಗಿ ಬೆಳೆದಿದೆ. ಮಾತ್ರವಲ್ಲದೆ, ರಾಷ್ಟ್ರ ಮಟ್ಟದಲ್ಲೇ ಮಾದರಿ ಸಹಕಾರಿ ಬ್ಯಾಂಕ್ ಆಗಿ ಮೂಡಿಬಂದಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್ ವಿವರಿಸಿದರು.
ಸಹಕಾರ ಕ್ಷೇತ್ರಕ್ಕೆ ನೀಡಿರುವ ಅನನ್ಯ ಕೊಡುಗೆ ನೀಡಿ ಸಹಕಾರ ಪಿತಾಮಹ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು ಶಿಕ್ಷಣ ಕ್ಷೇತ್ರದಲ್ಲೂ ಮಹತ್ವದ ಸಾಧನೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ ಸಹಕಾರಿ ಪ್ರತಿಜ್ಞಾವಿಧಿ ಬೋಧಿಸಿದರು. ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ. ನಿರಂಜನ್, ಟಿ.ಜಿ. ರಾಜಾರಾಮ್, ಭಾಸ್ಕರ್ ಎಸ್. ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ರಾಜು ಪೂಜಾರಿ ಎಸ್. ಬಿ. ಜಯರಾಮ ರೈ, ರಾಜೇಶ್ ರಾವ್, ಅಶೋಕ್ ಕುಮಾರ್ ಶೆಟ್ಟಿ, ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಹರೀಶ್ಚಂದ್ರ, ಮಹೇಶ್ ಹೆಗ್ಡೆ, ಲೀಡ್ ಬ್ಯಾಂಕ್ ಪ್ರಬಂಧಕ ಪ್ರವೀಣ್, ನಬಾರ್ಡ್‌ನ ಡಿಡಿಎಂ ಸಂಗೀತಾ ಕರ್ತಾ, ಬ್ಯಾಂಕಿನ ಎಂ.ಡಿ. ರವೀಂದ್ರ ಬೋಳೂರು, ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್ ಪುಷ್ಪನಮನ ಸಲ್ಲಿಸಿದರು. ಮಹಾ ಪ್ರಬಂಧಕ ಗೋಪಿನಾಥ್ ಭಟ್ ಕಾರ್ಯಕ್ರಮ ನಿರೂಪಿಸಿದರು.

