ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸ್ತುತ ನಡೆಯುತ್ತಿರುವ ಎಲ್ಲ ಪದವಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಅದೇ ರೀತಿ, ಮುಂದಿನ ಆದೇಶದವರೆರೆ ತರಗತಿ ಹಾಗೂ ಪರೀಕ್ಷೆಗಳನ್ನು ಮುಂದೂಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಮಂಗಳೂರು ವಿವಿ ಪದವಿ ಪರೀಕ್ಷೆಗಳಲ್ಲಿ ಭಾಗಿಯಾಗಲು ಅಂತರ್ ಜಿಲ್ಲೆಯಾದ ಕೇರಳದ ಕಾಸರಗೋಡು ಜಿಲ್ಲೆಯಿಂದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸೇರಿದಂತೆ ನೆರೆಯ ಜಿಲ್ಲೆಯ ನಾಗರಿಕರ ಈ ಓಡಾಟದಿಂದ ಕೋವಿಡ್ ಸೋಂಕು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನದ ಮೇರೆಗೆ ಹಾಗೂ ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸುವ ಅಗತ್ಯ ಇದೆ ಎಂಬುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ.
ಅದೇ ರೀತಿ, ಕೇರಳ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರನ್ನು ವಿಶೇಷ ತಪಾಸಣೆ ಮತ್ತು ಸರ್ವೇಕ್ಷಣೆ ಮಾಡಲಾಗುವುದು ಎಂದು ಈ ಆದೇಶದಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ಪರೀಕ್ಷೆಗಳ ತಾತ್ಕಾಲಿಕ ರದ್ದು ಮಾಡಿರುವುದನ್ನು ಸ್ಪಷ್ಟಪಡಿಸಿರುವ ಮಂಗಳೂರು ವಿವಿ ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಪ್ರೊ. ಪಿ.ಎಲ್. ಧರ್ಮ, ಸೋಮವಾರದಿಂದ ಆರಂಭವಾಗಿರುವ ಮೌಲ್ಯ ಮಾಪನವನ್ನೂ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

