Cremation of couple | ದಂಪತಿ ಆತ್ಮಹತ್ಯೆ: ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ- ದುಡುಕದಿರಿ, ನಾವಿದ್ದೇವೆ ಎಂದ ವಿಶ್ವ ಹಿಂದೂ ಪರಿಷತ್





ಕೋವಿಡ್ ಇದೆ ಎಂಬ ಭೀತಿಯಲ್ಲಿ ದಂಪತಿ ಆತ್ಮಹತ್ಯೆ ಮಾಡಿರುವ ಘಟನೆ ಕರಾವಳಿ ನಗರಿ ಮಂಗಳೂರು ಮಾತ್ರವಲ್ಲ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.


ಅನಾರೋಗ್ಯ ಹಾಗೂ ಮಕ್ಕಳಾಗಿಲ್ಲ ಎಂಬ ಸಂಕಟ ಒಂದು ಕಡೆಯಾದರೆ, ಕೋವಿಡ್ ಬಗ್ಗೆ ಮಾಧ್ಯಮ ಹಾಗೂ ಆಡಳಿತ ಉಂಟು ಮಾಡಿದ ಭೀತಿಯಿಂದ ಕಂಗೆಟ್ಟು ದಂಪತಿ ಆತ್ಮಹತ್ಯೆ ಮಾಡಿದ್ದಾರೆ.


ಮಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ಅವರು ಅಂತಿಮ ಕರೆ ಮಾಡಿದ್ದು, ಡೆತ್‌ ನೋಟ್‌ನಲ್ಲೂ ತಮ್ಮ ಕೊನೆಯಾಸೆಯನ್ನು ತಿಳಿಸಿದ್ದಾರೆ.


ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದ ಡೆತ್ ನೋಟ್ ನಲ್ಲಿ ಹಿಂದು ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಬೇಕೆಂಬ ಅವರ ಇಚ್ಛೆಯಂತೆ ಅಂತ್ಯಕ್ರಿಯೆ ನಡೆಸಲಾಯಿತು.


ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ನಂದಿಗುಡ್ಡೆಯ ಹಿಂದೂ ರುಧ್ರ ಭೂಮಿಯಲ್ಲಿ ಮೃತರ ಸಂಬಂಧಿಕರ ಜೊತೆ ವಿಧಿಯುಕ್ತವಾಗಿ ಅಂತ್ಯಕ್ರಿಯೆಯನ್ನು ನೆರವೇರಿಸಿದರು.






ನಾಗರಿಕರಲ್ಲಿ ವಿನಂತಿ:


ಕೋವಿಡ್ ಎಲ್ಲರ ಬದುಕಿನಲ್ಲೂ ಸಂಕಷ್ಟದ ಸರಮಾಲೆಯನ್ನೇ ತಂದಿದೆ. ಕಷ್ಟ ಕ್ಷಣಿಕ. ಯಾವುದೇ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂದು ವಿಶ್ವ ಹಿಂದೂ ಪರಿಷತ್‌ ನಾಗರಿಕರಲ್ಲಿ ವಿನಂತಿ ಮಾಡಿದೆ.


ಈಗ ಕೋವಿಡ್ ಗೆ ಔಷಧಿ ಲಭ್ಯ ಇದೆ. ಲಸಿಕಾ ಕೇಂದ್ರಗಳಲ್ಲಿ ಸಾಕಷ್ಟು ಲಸಿಕೆ ನೀಡುತ್ತಿದ್ದಾರೆ, ಯಾರೂ ಧೃತಿ ಗೆಡದೆ, ಧೈರ್ಯ ತಂದುಕೊಂಡು ಸೂಕ್ತ ಎನಿಸಿದ ಅಥವಾ ಸಮೀಪದ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ವಿಶ್ವ ಹಿಂದು ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ವಿನಂತಿಸಿದ್ದಾರೆ.