ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಇಳಿಕೆಯಾಗಿದ್ದರೂ ದಕ್ಷಿಣ ಕನ್ನಡದಲ್ಲಿ ಸತತವಾಗಿ ಪಾಸಿಟಿವಿಟಿ ದರ ಅಪಾಯದ ಮಟ್ಟದಲ್ಲೇ ಮುಂದುವರಿದಿದೆ. ಬುಧವಾರ 2.63%ದಷ್ಟಿದ್ದ ಪಾಸಿಟಿವಿಟಿ ದರ ಗುರುವಾರ 3.05%ಕ್ಕೆ ಏರಿಕೆಯಾಗಿದೆ. ರಾಜ್ಯದ ಸರಾಸರಿ ಪಾಸಿಟಿವಿಟಿ ದರ 0.80%ಕ್ಕೆ ಇಳಿಕೆಯಾಗಿದೆ.
ಇದರ ಜೊತೆಗೆ, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಗುರುವಾರ 1432 ಪ್ರಕರಣಗಳು ದಾಖಲಾಗಿದೆ. ಆದರೆ, ದಕ್ಷಿಣ ಕನ್ನಡದಲ್ಲಿ ಸೋಂಕಿ ಪ್ರಮಾಣದಲ್ಲೂ ಏರಿಕೆ ಕಂಡುಬಂದಿದೆ. ಬುಧವಾರ 268 ಹೊಸ ಸೋಂಕು ಪತ್ತೆಯಾಗಿದ್ದರೆ, ಗುರುವಾರ ಈ ಸಂಖ್ಯೆ 326ಕ್ಕೆ ಏರಿದೆ.
ಅದೇ ರೀತಿ ಸಾವಿನ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಬುಧವಾರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೂವರು ಮೃತಪಟ್ಟಿದ್ದರೆ, ಗುರುವಾರ ಏಳು ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಗುರುವಾರ ಒಟ್ಟು 27 ಮಂದಿ ಸಾವನ್ನಪ್ಪಿದ್ದಾರೆ.
ಸೋಂಕು ಮುಕ್ತರಾಗಿ ಬುಧವಾರ 343 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಗುರುವಾರ 385 ಮಂದಿ ಸೋಂಕು ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3301 ತಲುಪಿದೆ.
ಬೆಂಗಳೂರು ನಗರ ಕೋವಿಡ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇದ್ದು, ಗುರುವಾರ ಒಟ್ಟು 318 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 162 ಕೊರೋನಾ ಸೋಂಕು ಪತ್ತೆಯಾಗಿದ್ದು, ನಾಲ್ಕನೇ ಸ್ಥಾನದಲ್ಲಿರುವ ಮೈಸೂರು 103 ಸೋಂಕಿನ ಪ್ರಕರಣಗಳೊಂದಿಗೆ ಶತಕದ ದಾಖಲೆಯ ಕುಖ್ಯಾತಿ ಪಡೆದಿದೆ.
