ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜ್ಞೆ ಕಳೆದುಕೊಂಡಿರುವ ಆಸ್ಕರ್ ಅವರಿಗೆ ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಮಂಗಳೂರಿನ ಮಗಳ ಮನೆಯಲ್ಲಿ ಯೋಗ ಮಾಡುತ್ತಿದ್ದಾಗ ಆಯ ತಪ್ಪಿ ಬಿದ್ದು, ತಲೆಗೆ ಅಲ್ಪಸ್ವಲ್ಪ ಗಾಯಗಳಾಗಿತ್ತು. ಕೂಡಲೇ ಅವರನ್ನು ವೈದ್ಯರ ತಪಾಸಣೆಗೊಳಪಡಿಸಲಾಯಿತು.
ಅವರ ತಲೆಯಲ್ಲಿ ಮೂಳೆ ಮುರಿತ ಉಂಟಾಗಿದ್ದು, ರಕ್ತಸ್ರಾವ ಆಗಿರಬಹುದು ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಯೆನಪೋಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಕರ್ ಅವರ ಆರೋಗ್ಯ ಸ್ಥಿತಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಧಾರ್ಮಿಕ ನಾಯಕರು ವಿಚಾರಿಸಿದ್ಧಾರೆ.
ಮಾಜಿ ಸಚಿವ ರಮಾನಾಥ ರೈ, ಶಾಸಕ ಯು.ಟಿ. ಖಾದರ್, ಮಾಜಿ ಶಾಸಕರಾದ ಜೆ.ಆರ್. ಲೋಬೋ, ಐವನ್ ಡಿಸೋಜ, ಮಂಗಳೂರು ಬಿಷಪ್ ಸೇರಿದಂತೆ ಪ್ರಮುಖ ಆಸ್ಪತ್ರೆಗೆ ತೆರಳಿ ಆಸ್ಕರ್ ದೇಹ ಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದಾರೆ.
ಕಿಡ್ನಿ ವೈಫಲ್ಯಕ್ಕೊಳಗಾಗಿರುವ ಆಸ್ಕರ್, ಕಳೆದ ಕೆಲವು ಸಮಯಗಳಿಂದ ನಿರಂತರ ಡಯಾಲಿಸಿಸ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ತಕ್ಕಮಟ್ಟಿಗೆ ಆರೋಗ್ಯವಾಗಿ ಇದ್ದ ಅವರು ಯೋಗ ಹಾಗೂ ನಿಯಮಿತ ಕಾಲ್ನಡಿಗೆ ಮಾಡುತ್ತಿದ್ದರು.

 
 
 
 
 
 
 
 
 
 
 
 
 
 
 
 
 
 
 
