ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿ ಬಿ.ಪಿ. ದಿನೇಶ್ ಕುಮಾರ್ ನೇಮಕಗೊಂಡಿದ್ದು, ಅವರು ಇಂದು ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಮಂಗಳೂರಿನ ಕಾನೂನು ಸುವ್ಯವಸ್ಥೆ ಡಿಸಿಪಿ ಹರಿರಾಂ ಶಂಕರ್ ಅವರಿಂದ ಅಧಿಕಾರ ಸ್ವೀಕರಿಸಿದ ದಿನೇಶ್ ಕುಮಾರ್, ಇತ್ತೀಚೆಗೆ ಸೇವಾ ನಿವೃತ್ತಿ ಪಡೆದ ನಿಕಟಪೂರ್ವ ಡಿಸಿಪಿ ವಿನಯ್ ಗಾಂವ್ಕರ್ ಅವರ ಸ್ಥಾನವನ್ನು ತುಂಬಿದ್ದಾರೆ.
ವಿನಯ್ ಗಾಂವ್ಕರ್ ಎಪ್ರಿಲ್ 31ಕ್ಕೆ ನಿವೃತ್ತಿಯಾಗಿದ್ದು, ಆ ದಿನದಿಂದ ಇಲ್ಲಿಯವರೆಗೆ ಈ ಹುದ್ದೆಯ ಜವಾಬ್ದಾರಿಯನ್ನು ಹರಿರಾಮ್ ಶಂಕರ್ ಅವರೇ ನಿಭಾಯಿಸಿದ್ದರು.
ಬಿ.ಪಿ. ದಿನೇಶ್ ಕುಮಾರ್ ಅವರ ಹಿನ್ನೆಲೆ:
ಮಡಿಕೇರಿಯಲ್ಲಿ ಡಿವೈಎಸ್‌ಪಿಯಾಗಿದ್ದ ದಿನೇಶ್ ಕುಮಾರ್ ಹೆಚ್ಚುವರಿ ಎಸ್‌ಪಿ ದರ್ಜೆಗೆ ಬಡ್ತಿ ಪಡೆದು ಮಂಗಳೂರಿನ ಡಿಸಿಪಿ ಆಗಿ ನೇಮಕಗೊಂಡಿದ್ದಾರೆ.
1994ರ ಬ್ಯಾಚ್ ಎಸ್‌ಐ ಆಗಿ ಪೊಲೀಸ್ ಇಲಾಖೆ ಸೇರಿಕೊಂಡಿದ್ದ ದಿನೇಶ್ ಸುದೀರ್ಘ ಸೇವೆ ಬಳಿಕ ನಿನ್ನೆಯಷ್ಟೇ ಪ್ರೊಮೋಷನ್ ಪಡೆದಿದ್ದಾರೆ.
ಮಡಿಕೇರಿಯಲ್ಲಿ ಸೇವೆ ಸಲ್ಲಿಸುವುದಕ್ಕೂ ಮುನ್ನ ಅವರು ಕುಂದಾಪುರದಲ್ಲಿ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

 
 
 
 
 
 
 
 
 
 
 
 
 
 
 
 
 
 
