ವಿದ್ಯುತ್ ಮಾರ್ಗ ಯೋಜನೆ ಜಾರಿಯಾಗುವ ಹಂತಕ್ಕೆ ತಲುಪಿದ್ದರೂ ಯೋಜನೆಯ ಸಮಗ್ರ ಮಾಹಿತಿ ಸಾರ್ವಜನಿಕರಿಗೆ ಬಿಡುಗಡೆ ಮಾಡದಿರುವುದು ಸರಿಯಲ್ಲ. ಜಿಲ್ಲಾಧಿಕಾರಿಗಳು ತಕ್ಷಣ ವಿದ್ಯುತ್ ಮಾರ್ಗ ಸಂಚರಿಸುವ ಹಾದಿಯ ಸ್ಪಷ್ಟ ಮಾಹಿತಿಯನ್ನು ತಕ್ಷಣ ಬಹಿರಂಗ ಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಆಗ್ರಹಿಸಿದ್ದಾರೆ.
ಉಡುಪಿ- ಕಾಸರಗೋಡು 400 ಕೆ.ವಿ. ವಿದ್ಯುತ್ ಮಾರ್ಗ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಸಂತ್ರಸ್ತ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿ ನಿರ್ಲಕ್ಷ್ಯ ಧೋರಣೆ ತಾಳಿದರೆ ರೈತರು ಉಗ್ರ ಹೋರಾಟವನ್ನು ರೂಪಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಫಲವತ್ತಾದ ಕೃಷಿ ಭೂಮಿಯನ್ನು ಸರ್ವನಾಶ ಮಾಡಿಕೊಂಡು ಹೋಗುವ ಈ ವಿದ್ಯುತ್ ಮಾರ್ಗದ ಬದಲಾಗಿ ಕಾಸರಗೋಡು ಭಾಗದಲ್ಲಿ ನೂತನ ವಿದ್ಯುತ್ ಸ್ಥಾವರವನ್ನೇ ನಿರ್ಮಾಣ ಮಾಡಲಿ ಎಂದು ಆಗ್ರಹಿಸಿದ ಅವರು, ರೈತರ ಹೋರಾಟದ ಫಲವಾಗಿ ಹಲವಾರು ರೈತರಿಗೆ ಅವರ ಫಲವತ್ತಾದ ಕೃಷಿ ಭೂಮಿ ಉಳಿದುಕೊಂಡಿದೆ. ಹೋರಾಟಗಳನ್ನು ನಡೆಸುವಾಗ ಅಪವಾದಗಳು ಸಹಜವಾಗಿರುತ್ತದೆ. ಜಿಲ್ಲೆಯ ಪ್ರತಿಯೊಬ್ಬ ರೈತರು ಈ ಹೋರಾಟದಲ್ಲಿ ಕೈಜೋಡಿಸುವ ಅಗತ್ಯವಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ರೈತರ ಹೆಸರಿನಲ್ಲಿ ಪ್ರಮಾಣವಚನ ಮಾಡಿ ರೈತರಿಗೇ ಅನ್ಯಾಯ ಮಾಡುವ ಕಾರ್ಯ ಮಾಡಲಾಗುತ್ತಿದೆ. ಜಿಲ್ಲೆಯ ರೈತರಿಗೆ ಯಾವುದೇ ವಿಚಾರದಲ್ಲಿ ಕುಂದುಕೊರತೆ ಬರುವ ರೀತಿ ಆಗಬಾರದು ಎಂದು ಹೇಳಿದರು.
ರೈತರ ಕೃಷಿ ಜಮೀನಿನಲ್ಲಿ ೪೦೦ಕೆವಿ ವಿದ್ಯುತ್ ಮಾರ್ಗ ಮಾಡುವ ಬದಲು ಸಮುದ್ರ ಮಾರ್ಗ, ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಮಾರ್ಗದಲ್ಲಿ ಆದುನಿಕ ತಂತ್ರಜ್ಞಾನ ಬಳಸಿ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

