-->
D Boss Darshan- 10 ವರ್ಷದ ಹಿಂದಿನ ಘಟನೆ!- ದಚ್ಚುಗೆ ದಚ್ಚುನೇ ಸಾಟಿ... ಅದ್ಕೆ Darshan D BOSS

D Boss Darshan- 10 ವರ್ಷದ ಹಿಂದಿನ ಘಟನೆ!- ದಚ್ಚುಗೆ ದಚ್ಚುನೇ ಸಾಟಿ... ಅದ್ಕೆ Darshan D BOSS

ದರ್ಶನ್ ಅವರು ಖಾಸಗಿ ಬದುಕಿನ ಘಟನೆಗಳಿಂದ ಕಾರಾಗೃಹ ಸೇರಿದ್ದರು. ಅವರು ಬಿಡುಗಡೆಯಾಗುವ ಮುನ್ನಾ ದಿನಗಳಲ್ಲಿ ಅರಕಲಗೂಡು ತಾಲೂಕಿನ ಅರಸೀಕಟ್ಟೆ ದೇಗುಲಕ್ಕೆ ಕುಟುಂಬದ ಹರಕೆ ತೀರಿಸಲು ಬರುತ್ತಾರೆಂಬ ಮಾಹಿತಿ ಇತ್ತು. ಆದರೆ ಸುದ್ದಿಯ ಖಚಿತತೆಗೆ ಆಸ್ಪದವಿಲ್ಲದಂತೆ, ಒಬ್ಬ ಸೆಲೆಬ್ರಿಟಿ ಬರುತ್ತಾರೆಂಬ ಸುದ್ದಿ ಸುಳ್ಳಾಗಿರಲಾರದು ಎಂಬ ಭಾವನೆಯಿಂದ ಅದು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಯಿತು.ಬಾಯಿ ಮಾತಿನ ಮೂಲಕ ಸಂತೆಗಳಲ್ಲಿ, ಅಂಗಡಿ, ಸಲೂನ್, ಹೋಟೆಲ್ ಎಲ್ಲ ಕಡೆ ದರ್ಶನ್ ಅವರದ್ದೇ ಮಾತು.


ದರ್ಶನ್ ಬರ್ತಾರೆ , ದರ್ಶನ್ ಬರ್ತಾರೆ, ನೋಡ್ಬೇಕು.


ವಾರಾಂತ್ಯದ ಕೆಲಸ ಮುಗಿಸಿ ದರ್ಶನ್ ರ ದರ್ಶನ ಪಡೆಯೋಕೆ ಜನ ರೆಡಿಯಾದರು. ದರ್ಶನ್ ಅವರ ಕಾರಾಗೃಹ ವಾಸ ಮುಗಿಯಿತು. ಮುಗಿದ ಮರು ದಿನ ಅವರು ಅರಸೀಕಟ್ಟೆ ದೇಗುಲಕ್ಕೆ ಬರುತ್ತಾರೆ ಎಂಬ ಕೌತುಕ ಹೆಚ್ಚಾಯ್ತು. ಅವತ್ತು ಬಹುಶ: ಭಾನುವಾರ ಇರಬಹುದು, ಶನಿವಾರ ಸಂಜೆಯಿಂದಲೇ ಅಭಿಮಾನಿಗಳ ಜಾತ್ರೆ ಅರಸೀಕಟ್ಟೆಯತ್ತ ಸಾಗಿ ಬಂತು.ಮುಂಜಾನೆಯ ಪೂಜೆಗೆ ದರ್ಶನ್ ಬರಬಹುದು, ಲೇಟಾದ್ರೇ ಮಿಸ್ ಆಗಿ ಬಿಡುತ್ತೆ ಎಂಬ ಭಾವ. ದರ್ಶನ್ ನೋಡುವ ಉತ್ಸಾಹ, ಕುತೂಹಲ, ಇಷ್ಟದ ನಟನನ್ನು ಕಣ್ತುಂಬಿಕೊಳ್ಳುವ ತವಕ. ಇತ್ತ ಕಡೆಯಿಂದ ಕಡೂರು-ಅರಸೀಕೆರೆ, ಸುಬ್ರಹ್ಮಣ್ಯ, ಅತ್ತ ಕಡೆಯಿಂದ ವಿರಾಜಪೇಟೆ, ಮಡಿಕೇರಿ, ಸುಳ್ಯ, ಚನ್ನರಾಯಪಟ್ಟಣ, ಹೊಳೆನರಸಿಪುರ, ಸಕಲೇಶಪುರ, ಬೇಲೂರು, ಹಾಸನ ಹೀಗೆ ನಾಲ್ಕು ದಿಕ್ಕಿನಿಂದ ಸಾಗಿ ಬಂದ ಅಭಿಮಾನದ ಸಾಗರಕ್ಕೆ ಅರಸೀಕಟ್ಟೆಯ ಆವರಣ ಅವತ್ತಿಗೆ ಸಾಕ್ಷಿಯಾಗಿ ಬಿಟ್ಟಿತು.


ಅಂಧರು, ಅನಾಥರು, ಮಕ್ಕಳು, ಎಲ್ಲ ವಯೋಮಾನದ ಯುವಕ-ಯುವತಿಯರು, ಕಾರ್ಮಿಕ ವರ್ಗದ ಮಂದಿ, ತರಕಾರಿ-ಹೂವು ಮಾರುವವರು ಹೀಗೆ ವಿಭಿನ್ನ ಆಯಾಮದ ಎಲ್ಲ ಜನರು ಅಲ್ಲಿ ನೆರೆದಿದ್ದರು. ಎಲ್ಲರ ನಿರೀಕ್ಷೆ ಒಂದೇ ದಚ್ಚು ದರ್ಶನ! ದರ್ಶನ್ ಅಭಿಮಾನಿ ಸಂಘಗಳು, ಟ್ರಸ್ಟ್ ಗಳವರು ಅನಾಥರಿಗೆ, ಅಂಧರಿಗೆ, ಅಂಗವಿಕಲರಿಗೆ ದರ್ಶನ್ ರಿಂದ ವಿತರಿಸಲು, ಬಟ್ಟೆ, ಬರೆ ತಂದಿಟ್ಟು ಕೊಂಡಿದ್ದರೆ ಕೆಲವರು ನೆರೆದವರಿಗೆ ಆಹಾರ ವಿತರಣೆ ಮಾಡುತ್ತಿದ್ದರು.


ಗಂಟೆ ಮುಂಜಾನೆ 6 ಆಯ್ತು, 10,11,12, ಮದ್ಯಾಹ್ನ 1 ಗಂಟೆ ಊಹುಂ

ದರ್ಶನ್ ಸುಳಿವೇ ಇಲ್ಲ, ಈ ನಡುವೆ ದರ್ಶನ್ ಎಲ್ಲಿದ್ದಾರೆ, ಎಷ್ಟೊತ್ತಿಗೆ ಬರ್ತಾರೆ ಎಂಬ ವಿಚಾರಣೆ ಶುರುವಾಯ್ತು.. ದೇಗುಲದ ಕಡೆಗೆ ಯಾವುದೇ ಕಾರುಗಳು ಬಂದರೂ ಅದರಲ್ಲಿ ದರ್ಶನ್ ಇದ್ದಾರೆನೋ ಎಂದು ಮುತ್ತಿಗೆ ಹಾಕಿ ಬಿಡುತ್ತಿದ್ದರು. ಅದೇ ಸಂದರ್ಭದಲ್ಲಿ ಬಂದ ಅರಣ್ಯಾಧಿಕಾರಿಯೊಬ್ಬರ ಕಾರಿಗೆ ಮುತ್ತಿಗೆ ಹಾಕಿ ಹುಡುಕಾಟ ನಡೆಸಿ ಬಿಟ್ಟರು. ಅವರಿಗೋ ಮುತ್ತಿಗೆಯಿಂದ ತಪ್ಪಿಸಿ ಪಾರಾಗಿ ಹೋಗುವಷ್ಟರಲ್ಲಿ ಹೈರಾಣಾಗಿ ಬಿಟ್ಟಿದ್ದರು.ಹೀಗೆ ಸಮಯ ಕಳೆದೇ ಹೋಯ್ತು.. ಸಂಜೆ 6ಗಂಟೆಯಾದರೂ ದರ್ಶನ್ ಸುಳಿವೇ ಇರಲಿಲ್ಲ.. ಆದರೂ ದರ್ಶನ್ ರನ್ನು ಕಾಣುವ ಉತ್ಸಾಹ ಜನರಲ್ಲಿ ಕಡಿಮೆಯಾಗಲೇ ಇಲ್ಲ.. 7-8 ಗಂಟೆಯ ವೇಳೆಗೆ ಜನ ಸ್ಥಳದಿಂದ ನಿರಾಶರಾಗಿ, ನಿಧಾನವಾಗಿ ಸ್ಥಳದಿಂದ ಕಾಲ್ತೆಗೆಯಲಾರಂಭಿಸಿದರು. ಅವತ್ತು ದರ್ಶನ್ ಬರಲೇ ಇಲ್ಲ.... ಬಹುಶಃ ಅವರಿಗೆ ಅಲ್ಲಿಗೆ ಬರುವ ಕಾರ್ಯಕ್ರಮ ಇತ್ತೋ ಇಲ್ಲವೋ ಅದು ತಿಳಿಯಲೇ ಇಲ್ಲ..


--

ಈ ಘಟನೆ ದರ್ಶನ್ ರ ಜನಪ್ರಿಯತೆ ಮತ್ತು ಜನ ಸಾಮಾನ್ಯರು ತಮ್ಮ ನಡುವೆ ದರ್ಶನ್ ರನ್ನು ಕಂಡು ಕೊಳ್ಳುವ ಬಗೆಯಾಗಿತ್ತು. ಇದು ಒಂದು ಸ್ಯಾಂಪಲ್ ಘಟನೆಯಷ್ಟೆ, ಇಂತಹ ಸಾವಿರಾರು ಸಂದರ್ಭಗಳು ದರ್ಶನ್ ರನ್ನು ಅಭಿಮಾನಿಸುವ ಘಟನೆಗಳು ಇವೆ. ಎರಡು ದಶಕಗಳ ಹಿಂದೆ ರಾಜಕುಮಾರ್ ಅವರು ತಮ್ಮ ನಡವಳಿಕೆಯಿಂದ, ವ್ಯಕ್ತಿತ್ವದಿಂದ , ನಟನೆಗಳಿಂದ, ಸಿನಿಮಾದ ಪಾತ್ರಗಳಿಂದ, ಜನರಿಗೆ ದೇವರಾಗಿ ಪರಿವರ್ತನೆಯಾಗಿದ್ದರು. ವಿಷ್ಣುವರ್ಧನ್ , ಅಂಬರೀಷ್, ರವಿಚಂದ್ರನ್ , ಶಂಕರ್ ನಾಗ್, ಅನಂತನಾಗ್, ಮಂಜುಳ, ಕಲ್ಪನಾ ಹೀಗೆ ಅನೇಕ ಮೇರು ನಟ-ನಟಿಯರಿಗೆ ಅಭಿಮಾನಿ ಬಳಗ ಸೃಷ್ಟಿಯಾಗಿತ್ತು. ವರ್ತಮಾನದಲ್ಲಿ ಶಿವರಾಜಕುಮಾರ್, ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಸುದೀಪ್ , ಯಶ್, ಉಪೇಂದ್ರ ತಮ್ಮ ಕಲಾಸೇವೆ ಹಾಗು ಸಾಮಾಜಿಕ ಸೇವೆಗಳ ಮೂಲಕ ಜನ ಸಾಮಾನ್ಯರ ಹೃದಯದಲ್ಲಿ ನೆಲೆಸಿದ್ದಾರೆ.ಆದರೆ ಸತತ ಪರಿಶ್ರಮದಿಂದ, ಕಷ್ಟಗಳನ್ನೆದುರಿಸಿ ಗಾಡ್ ಫಾದರ್ ಗಳ ನೆರವಿಲ್ಲದೇ ಎದ್ದು ನಿಂತವರು ದರ್ಶನ್. ಅವರೇ ಹೇಳುವಂತೆ ತೆರೆಯ ಮೇಲೆ ನಾನು ನಟ, ಸಿನಿಮಾ ರಂಗದಲ್ಲಿ ಕಾರ್ಮಿಕನಾಗಿ ಇಂದು ಸೆಲೆಬ್ರಿಟಿ ನಟನಾಗಿದ್ದೇನೆ. ಆದರೆ ಆ ಕಿರಿಟ ತಲೆಯ ಮೇಲಿಲ್ಲ. ನಾನು ಎಲ್ಲರಂತೆ ಸಾಮಾನ್ಯ ಮನುಷ್ಯ, ನನ್ನ ಬದುಕಿನಲ್ಲಿ ಸಾಮಾನ್ಯ ಘಟನೆಗಳು ನಡೆದಿವೆ. ಅದಕ್ಕೆ ವಿಶೇಷ ಮಹತ್ವ ಕೊಡ ಬೇಕಿಲ್ಲ. ಖಾಸಗಿ ಬದುಕಿನ ಘಟನೆಗಳನ್ನು , ಸಿನಿಮಾ ಸೆಲೆಬ್ರಿಟಿ ಎಂಬ ಕಾರಣಕ್ಕೆ ಟಿ ಆರ್ ಪಿಗೆ ಬಳಸ ಬೇಡಿ. ನನ್ನ ಬದುಕಿನ ಕಷ್ಟ ನನಗೆ ತಿಳಿದಿದೆ ಎಂದು ಅನೇಕ ಸಲ ಸ್ಪಷ್ಟ ಪಡಿಸಿದ್ದಾರೆ. ಅನೇಕ ಸಲ ಕಿರಿಯ ಕಲಾವಿದರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಸಂಕಟದಲ್ಲಿದ್ದವರಿಗೆ ನೆರವಾಗಿದ್ದಾರೆ. ಕೆಲವು ಸ್ಟಾರ್ ನಟರ ಪುತ್ರರುಗಳಿಗೆ ಬೆನ್ನಿಗೆ ನಿಂತು, ಕಲಾ ಜೀವನ ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಸ್ವತಃ ಪರಿಶ್ರಮಿಯಾಗಿ ಕೃಷಿ ಕಾರ್ಮಿಕನಾಗಿ, ಗೋವು ಪಾಲಕರು ಆಗಿ ದರ್ಶನ್ ಮಾದರಿಯಾಗಿದ್ದಾರೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಅವರನ್ನು ಕೃಷಿ ಇಲಾಖೆಯ ಬ್ರಾಂಡ್ ಅಂಬಾಸಡರ್ ಆಗಿ ನೇಮಿಸಿದೆ.


ಕೊರೋನಾ ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲಿ ಜನರೇ ಪರಿತಪಿಸುತ್ತಿದ್ದಾಗ ಮೃಗಾಲಯಗಳಲ್ಲಿದ್ದ ವನ್ಯಜೀವಿಗಳ ಸ್ಥಿತಿಯೂ ಚಿಂತಾಜನಕವಾಗಿತ್ತು. ಈ ಸಂದರ್ಭದಲ್ಲಿ ನೆರವಿಗೆ ನಿಂತದ್ದು ಇದೇ ದರ್ಶನ್. ಸ್ವತಃ ಪ್ರಾಣಿ-ಪಕ್ಷಿಗಳನ್ನು ಪೋಷಿಸುವ, ದತ್ತು ತೆಗೆದುಕೊಳ್ಳುವ 'ದತ್ತ' ದರ್ಶನ್, ಮೃಗಾಲಯದ ಪ್ರಾಣಿಗಳ ಪೋಷಣೆ ಮತ್ತು ದತ್ತು ತೆಗೆದುಕೊಳ್ಳುವಂತೆ ಮಾಡಿದ ಮನವಿಗೆ ಕೋಟ್ಯಂತರ ರೂಪಾಯಿ ಕೆಲವೆ ದಿನಗಳಲ್ಲಿ ಸಂಗ್ರಹವಾಯಿತು. ಸಾವಿರಾರು ಮಂದಿ ಮೃಗಾಲದ ಪ್ರಾಣಿಗಳ ಪೋಷಣೆಗೆ ದತ್ತು ತೆಗೆದುಕೊಂಡರು. ಇದರಿಂದ ರಾಜ್ಯದ 7-8 ಮೃಗಾಲಯಗಳ ಪ್ರಾಣಿ-ಪಕ್ಷಿಗಳು ಉಸಿರಾಡುವಂತಾಯ್ತು.


ಸಿನಿಮಾದವರಿಗೆ ಮಾತ್ರವಲ್ಲ, ಜನ ಸಾಮಾನ್ಯರ ಕಷ್ಟ ಸುಖಗಳಿಗೂ ಡಿ ಬಾಸ್ ಸದ್ದಿಲ್ಲದೇ ಸ್ಪಂದಿಸುತ್ತಿದ್ದಾರೆ. ಆದರೆ ಯಾವುದನ್ನು ಪ್ರಚಾರದ ಸಂಗತಿಯಾಗಿ ತೆಗೆದುಕೊಂಡಿಲ್ಲ, ಪ್ರಚಾರ ಮಾಡಬೇಡಿ ಎಂಬ ಕಂಡೀಷನ್ ಇಟ್ಟು ಬೆನ್ನಿಗೆ ನಿಲ್ಲುವುದೇ ‘ದಾಸ’ ನ ಗುಣ. ಇದೆಲ್ಲವೂ ದರ್ಶನ್ ರನ್ನು ಎತ್ತರದ ಸ್ಥಾನಕ್ಕೆ ನಿಲ್ಲಿಸಿದೆ, ಇದೇ ಕಾರಣಕ್ಕೆ ದರ್ಶನ್ ವೈಯುಕ್ತಿಕ ಜೀವನದ ತಲ್ಲಣಗಳನ್ನು ಬದಿಗಿರಿಸಿ ದರ್ಶನ್ ರನ್ನು ಆರಾಧಿಸುವ, ಅಭಿಮಾನಿಸುವ ಸಮೂಹ ದೊಡ್ಡದಿದೆ. 


ಹೀಗಿರುವಾಗ ಅವರನ್ನು ವಿವಾದ ಸುಳಿಯಲ್ಲಿ ಸಿಲುಕಿಸುವ, ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಂಗತಿಗಳನ್ನು ಪ್ರಸ್ತಾಪಿಸುತ್ತಾ ಹಣಿಯುವ ಪ್ರಯತ್ನ, ಅವರನ್ನು ಜಾತಿಯ ಫ್ರೇಂ ನಲ್ಲಿಟ್ಟು ಕಳಂಕ ತರುವ ಕಿಡಿಗೇಡಿ ಕೃತ್ಯಗಳು ನಡೆಯುತ್ತಲೇ ಇವೆ. ಅವು ಸಫಲವಾಗದು, ಕೆಸರೆರಚಲು ಬಂದವರೆ, ಕೊಚ್ಚೆಯಲ್ಲಿ ಮುಳುಗುತ್ತಾರೆ. ಎರಡೂವರೆ ದಶಕಗಳ ಸಿನಿ ಜರ್ನಿಯಲ್ಲಿ ದರ್ಶನ್ ಇಂತಹ ಹಲವಾರು ಅಡೆತಡೆಗಳನ್ನು ದಾಟಿದ್ದಾರೆ. ಮುಂದೆಯೂ ‘ದಾಸ’ನ ಜರ್ನಿ ಸಾಗುತ್ತಲೇ ಇರುತ್ತದೆ..


ಅರಕಲಗೂಡು ಜಯಕುಮಾರ್

Ads on article

Advertise in articles 1

advertising articles 2

Advertise under the article