ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತೊಂದು ಹಿನ್ನೆಡೆ ಅನುಭವಿಸಿದೆ. ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಹಲವ ನಾಯಕರು ಬಿಜೆಪಿ ತೊರೆದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸೇರಿದ್ದರು. ಇದೀಗ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಮತ್ತೆ ಟಿಎಂಸಿ ಪಕ್ಷಕ್ಕೆ 'ಘರ್ ವಾಪಸಿ' ಮಾಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಮಮತಾ ಬ್ಯಾನರ್ಜಿ ಮುಕುಲ್ ರಾಯ್ ಅವರನ್ನು ಸ್ವಾಗತಿಸಿದ್ದು, ನಿಮ್ಮ ನಿರ್ಧಾರವು ಟಿಎಂಸಿ ಪಕ್ಷವನ್ನು ಬಲಪಡಿಸುವುದಕ್ಕಿಂತ ಬಿಜೆಪಿ ಬಲವನ್ನು ತಗ್ಗಿಸುತ್ತದೆ ಎಂದು ಹೇಳಿದ್ದಾರೆ.
ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ನಿರಾಸಾದಾಯಕ ಪ್ರದರ್ಶನದ ನಂತರ ಮುಕುಲ್ ರಾಯ್ ಟಿಎಂಸಿಗೆ ಸೇರ್ಪಡೆಗೊಂಡಿರುವುದು ಬಿಜೆಪಿಗೆ ಮೊದಲ ಹೊಡೆತವಾಗಿದೆ ಎಂದು ರಾಜಕೀಯ ಪಂಡಿತರು ಹೇಳಿದ್ದರು.
ಈ ಬೆಳವಣಿಗೆ ಕಮಲ ಪಾಳಯಕ್ಕೆ ಒಂದು ಸಂದೇಶವೊಂದನ್ನು ರವಾನಿಸಿದ್ದು, ಪಕ್ಷಾಂತರಗೊಂಡ ಇತರರಿಗೂ ಒಂದು ಸಂದೇಶವಾಗಿದೆ ಎಂದು ಆಡಳಿತ ಪಕ್ಷದ ಮೂಲಗಳು ತಿಳಿಸಿವೆ.
ಚುನಾವಣೆ ಸಂದರ್ಭದಲ್ಲಿ ಅನೇಕ ಟಿಎಂಸಿ ನಾಯಕರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅಲ್ಲದೆ ಬಿಜೆಪಿಯಲ್ಲಿ ಪ್ರಮುಖ ಸ್ಥಾನಗಳಿಗೆ ಆಯ್ಕೆಯಾಗಿದ್ದರು.
ಚಾಣಕ್ಯ ಎಂದು ಬಿಂಬಿತರಾಗಿದ್ದ ರಾಜಕೀಯ ಭೀಷ್ಮ ಮುಕುಲ್ ರಾಯ್ ಟಿಎಂಸಿಗೆ ಹಿಂದಿರುಗಿದ್ದಾರೆ. ಇನ್ನೂ ಹಲವು ಪಕ್ಷ ತೊರೆದ ಬಿಜೆಪಿ ನಾಯಕರು ಮತ್ತು ಶಾಸಕರು ಮತ್ತೆ ಘರ್ ವಾಪಸಿ ಮಾಡಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕರು ಹೇಳಿದರು.
ಕೇಸರಿ ಶಿಬಿರದ 'ಚಾಣಕ್ಯ'ನನ್ನು ಮತ್ತೆ ತನ್ನ ಪಕ್ಷಕ್ಕೆ ತಂದು, ಆಡಳಿತ ಪಕ್ಷವು ಈಗ ಬಂಗಾಳದಲ್ಲಿ ಬಿಜೆಪಿಯ ಅಡಿಪಾಯವನ್ನು ಅಲುಗಾಡಿಸುವ ಗುರಿಯನ್ನು ಹೊಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ದೊಡ್ಡ ಪಕ್ಷವಾಗಿ ಮತ್ತು ಬಿಜೆಪಿ ಏಕೈಕ ವಿರೋಧವಾಗಿ ಹೊರಹೊಮ್ಮಿತ್ತು. ಬಿಜೆಪಿ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಟಿಎಂಸಿ 200ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಹಿಡಿದಿತ್ತು.
ರಾಯ್ ತಮ್ಮ ರಾಜಕೀಯ ನಿರ್ಧಾರವನ್ನು ತೆಗೆದುಕೊಂಡು 2017ರಲ್ಲಿ ಬಿಜೆಪಿ ಸೇರಿದ್ದರು. ಅವರೊಂದಿಗೆ ಒಟ್ಟು 33 ಟಿಎಂಸಿ ಶಾಸಕರು ಬಿಜೆಪಿಗೆ ಸೇರಿದರು. ಇದೀಗ ರಾಯ್ ಟಿಎಂಸಿಗೆ ಹಿಂದಿರುಗುವುದು ಚುನಾವಣೆಯ ನಂತರ ಬಿಜೆಪಿಯಿಂದ ಹೊರಬಂದ ಮೊದಲ ಬಹುದೊಡ್ಡ ಪಕ್ಷಾಂತರವಾಗಿದೆ.
