ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ ಪ್ರಭಾವಿ ರಾಜಕೀಯ ನಾಯಕರ ಮಗಳ ಮದುವೆ ಸಹಿತ ನಾಲ್ಕು ಮದುವೆಗಳಿಗೆ ಮಂಗಳಾದೇವಿ ದೇವಸ್ಥಾನದಲ್ಲಿ ಅನುಮತಿ ನೀಡಿದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಮದುವೆಗೆ ಅನುಮತಿ ನೀಡಿದ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಕೇಸು ಜಡಿಯಲಾಗಿದೆ. ನಿಯಮ ಮೀರಿ ಈ ಅನುಮತಿ ನೀಡಿರುವುದು ಪಾಲಿಕೆಯ ಆರೋಗ್ಯ ಅಧಿಕಾರಿಗಳ ಕೆಲಸಕ್ಕೆ ಕುತ್ತು ತರುವ ಸಾಧ್ಯತೆ ಇದೆ.
ನಾಲ್ಕು ಮದುವೆಗಳನ್ನು ನಡೆಸಿರುವುದಕ್ಕೆ ಸಂಬಂಧಿಸಿ ಪೊಲೀಸರು ಅವಕಾಶ ನೀಡಿದ್ದ ಅಧಿಕಾರಿಗಳ ಸಹಿತ ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದಾರೆ.
ಬಿಜೆಪಿ ಮುಖಂಡ, ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಭಾಸ್ಕರಚಂದ್ರ ಶೆಟ್ಟಿಯ ಪುತ್ರಿಯ ಮದುವೆ ಜೊತೆಗೆ ಬೇರೆ ನಾಲ್ಕು ಜೋಡಿಯ ಮದುವೆಯನ್ನು ಮಂಗಳಾದೇವಿ ದೇವಸ್ಥಾನದ ಅಂಗಣದಲ್ಲಿರುವ ಹಾಲ್ ನಲ್ಲಿ ಇಂದು ಏರ್ಪಡಿಸಲಾಗಿತ್ತು. ಈ ಬಗ್ಗೆ ವಿಷಯ ತಿಳಿದು ಮುಜರಾಯಿ ಇಲಾಖೆ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದ್ದರು.
ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲಾಗಿತ್ತು. ಆನಂತರ ಸಂಪ್ರದಾಯಕ್ಕೆ ತಕ್ಕಂತೆ ಮದುವೆ ನಡೆಸಲಾಗಿತ್ತು. ಇದಕ್ಕೆ ಸಂಬಂಧಿಸಿ ಪಾಂಡೇಶ್ವರ ಪೊಲೀಸರು ನಾಲ್ಕು ಮದುವೆ ಜೋಡಿಗಳು, ಒಂದೇ ಜಾಗದಲ್ಲಿ ನಾಲ್ಕು ಮದುವೆಗೆ ಅವಕಾಶ ನೀಡಿದ್ದ ಮಹಾನಗರ ಪಾಲಿಕೆ ಆರೋಗ್ಯಧಿಕಾರಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ. ಅದೇ ರೀತಿ, ಮದುವೆಗೆ ಅವಕಾಶ ಕೊಟ್ಟಿದ್ದ ದೇವಸ್ಥಾನದ ಆಡಳಿತ ಮಂಡಳಿಗೂ ಕೇಸು ಹಾಕಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಸೇರಿದಂತೆ ಕೆಲ ದೇವಸ್ಥಾನಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ನೋಟೀಸ್ ನೀಡಿದ್ದಾರೆ. ಲಾಕ್ ಡೌನ್ ಇದ್ದರೂ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಹಿನ್ನೆಲೆಯಲ್ಲಿ ಈ ನೋಟೀಸ್ ನೀಡಲಾಗಿದೆ.

 
 
 
 
 
 
 
 
 
 
 
 
 
 
 
 
 
