-->

Thannirbavi damage - ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಕ್ಕೆ ಪ್ರಾಕೃತಿಕ ವಿಕೋಪ ಪರಿಹಾರ ಒದಗಿಸಲು ಒತ್ತಾಯ

Thannirbavi damage - ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಕ್ಕೆ ಪ್ರಾಕೃತಿಕ ವಿಕೋಪ ಪರಿಹಾರ ಒದಗಿಸಲು ಒತ್ತಾಯ





ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ, ಪಲ್ಗುಣಿ ನದಿ ತೀರದಲ್ಲಿ ಟೆಂಟ್ ಗಳನ್ನು ನಿರ್ಮಿಸಿ ಕಳೆದ ಹಲವಾರು ವರುಷಗಳಿಂದ ವಾಸಿಸುತ್ತಿರುವ ಅಲೆಮಾರಿ ಶಿಳ್ಳೆಕ್ಯಾತ ಜನಾಂಗವು ತೆಪ್ಪದ ಮೂಲಕ ಮೀನು ಹಿಡಿಯುವ ಕಾಯಕ ನಡೆಸಿ ಜೀವನ ಸಾಗಿಸುತ್ತಾ ಬಂದಿದೆ. 




ಈ ಸಮುದಾಯವು ಯಾವುದೇ ಕನಿಷ್ಟ ಮೂಲಭೂತ ಸೌಕರ್ಯಗಳಾದ, ವಸತಿ, ನೀರು, ರಸ್ತೆ, ವಿದ್ಯುತ್, ಶೌಚಾಲಯಗಳಿಲ್ಲದೆ ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಕಳೆದ ಸುಮಾರು 15 ವರುಷಗಳಿಂದ ನದಿ ತೀರವನ್ನೇ ನಂಬಿ ಅಲ್ಲೆ ಗುಡಿಸಲು ನಿರ್ಮಿಸಿ ದಿನನಿತ್ಯ ಆತಂಕದಿಂದ ಬದುಕುತ್ತಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯವು ವರ್ಷಂಪ್ರತಿ ಮಳೆಗಾಲದ ಸಂದರ್ಭ ಸುರಿವ ವಿಪರೀತ ಮಳೆಯಿಂದ ನದಿ ಪಾತ್ರ ತುಂಬಿ ಪ್ರವಾಹ ಬರುವ ಸನ್ನಿವೇಶ ಸೃಷ್ಟಿಯಾದಾಗ ನೆಮ್ಮದಿಯಿಂದ ಬದುಕು ನಿರ್ವಹಿಸಲು ಹೆಣಗಾಡುತ್ತಿದ್ದಾರೆ. 



ಮೊನ್ನೆಯಿಂದ ತೌಕ್ತೆ ಚಂಡಮಾರುತದ ಪ್ರಭಾವದಿಂದ ವಿಪರೀತವಾಗಿ ಬೀಸಿದ ಬಿರುಗಾಳಿ, ಮಳೆಗೆ ಇವರ ಗುಡಿಸಲುಗಳು ಹಾರಿಹೋಗಿ ಗಾಳಿ, ಮಳೆಯಿಂದ ತಮ್ಮನ್ನು ತಾವು ಕಾಪಾಡಲು ಪೇಚಾಡುವ ಸ್ಥಿತಿ ನಿರ್ಮಾಣವಾಗಿದೆ. 





ಮಂಗಳೂರಿನ ಹೊಯಿಗೆಬಜಾರ್ ನಲ್ಲಿ ಗುಡಿಸಲು ನಿರ್ಮಿಸಿ ಬದುಕುತ್ತಿರುವ ಎಂಟು ಶಿಳ್ಳೆಕ್ಯಾತ ಕುಟುಂಬಗಳ ಟೆಂಟುಗಳು ಮೊನ್ನೆಯ ಚಂಡಮಾರುತದಿಂದಾಗಿ ಬೀಸಿದ ಬಿರುಗಾಳಿ ಮತ್ತು ಮಳೆಗೆ ಹಾರಿ ಹೋಗಿ ಬಹಳ ನಷ್ಟವನ್ನು ಅನುಭವಿಸಿರುತ್ತಾರೆ. ಮಾತ್ರವಲ್ಲದೆ ಕೋರೋನಾ ರೋಗದ ಈ ಕಾಲಘಟ್ಟದಲ್ಲಿ ಉಂಟಾದ ಸಮಸ್ಯೆ ಮತ್ತು ಲಾಕ್ಡೌನ್ ತಮ್ಮ ಬದುಕಿಗೆ ಮೂಲ ಆಧಾರವಾಗಿದ್ದ ಕುಲ ಕಸುಬನ್ನೇ ಕಸಿದುಕೊಂಡಿದೆ. ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ‌ ನಿರ್ಮಾಣವಾಗಿದೆ. 



ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕೂಡಲೇ ಸಂಕಷ್ಟದ ಸುಳಿಯಲ್ಲಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯ ರಕ್ಷಣೆಗೆ ಬೇಕಾದ ಪರಿಹಾರಗಳನ್ನು ಒದಗಿಸಿಕೊಡಬೇಕು.





ಚಂಡಮಾರುತದಿಂದಾಗಿ ಹಾನಿಗೊಳಗಾದ ಕುಟುಂಬಗಳಿಗೆ ಆರ್ಥಿಕ ಪರಿಹಾರ ಸಹಿತ ಶಾಶ್ವತ ನಿವೇಶನ ಮತ್ತು ವಸತಿ ವ್ಯವಸ್ಥೆ ಕಲ್ಪಿಸಬೇಕು. ಹಾಗೂ ಜಿಲ್ಲೆಯ ಎಲ್ಲಾ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಕ್ಕೆ ಬೇಕಾದ ಆಹಾರ ಭದ್ರತೆ ಈ ಕೂಡಲೇ ಒದಗಿಸಬೇಕು ಎಂದು ಕರಾವಳಿ ವೃತ್ತಿನಿರತ ಅಲೆಮಾರಿ ಹಕ್ಕುಗಳ ಸಮಿತಿಯ ಗೌರವಾದ್ಯಕ್ಷ , ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಜಿಲ್ಲಾಡಳಿತವನ್ನು ಒತ್ತಾಯಿಸಿರುತ್ತಾರೆ.



Ads on article

Advertise in articles 1

advertising articles 2

Advertise under the article