-->

Medical Lobby in Mangaluru- 10 ದಿನದಲ್ಲಿ 5 ಲಕ್ಷ ಬಿಲ್: ಇದು ಕೊರೋನ ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ಕತೆ!

Medical Lobby in Mangaluru- 10 ದಿನದಲ್ಲಿ 5 ಲಕ್ಷ ಬಿಲ್: ಇದು ಕೊರೋನ ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ಕತೆ!




ಕೊರೋನ ಮೊದಲ ಅಲೆಯ ಸಂದರ್ಭ 'ಖಾಸಗಿ ಆಸ್ಪತ್ರೆಗಳು ಬ್ಲೇಡ್ ಕಂಪೆನಿಗಳಾಗಿ ದುಬಾರಿ ಬಿಲ್ ಹಾಕಿ ಕೊರೋನಾ ಸೋಂಕಿತರನ್ನು ಸುಲಿಗೆ ಮಾಡುತ್ತಿವೆ' ಎಂಬ ದೂರುಗಳು ಪ್ರತಿ ದಿನ ಸಾಮಾನ್ಯವಾಗಿ ಬರುತ್ತಿದ್ದವು. ಕೊನೆಗೆ ಸರಕಾರ ಚಿಕಿತ್ಸೆಯ ದರಪಟ್ಟಿ ಪ್ರಕಟಿಸಿದರೂ ದುರು ನಿಲ್ಲಲಿಲ್ಲ, ಆಸ್ಪತ್ರೆಗಳ ಧನದಾಹ ತಪ್ಪಲಿಲ್ಲ. ಆದರೆ ಈ ಬಾರಿ ಅಂತಹ ದೂರು ಸಾರ್ವಜನಿಕವಾಗಿ ದೊಡ್ಡ ರೀತಿಯಲ್ಲಿ ಕೇಳಿ ಬರುತ್ತಿಲ್ಲ!

ಇದಕ್ಕೆ ಕಾರಣ , 'ಈ ಬಾರಿ ಎರಡನೇ ಅಲೆ ಸಮುದಾಯಕ್ಕೆ ಹರಡಿ, ಸಮಾಜದಲ್ಲಿ ಕ್ಷೋಭೆ ಮೂಡಿಸಿದ್ದು, ಮಾತ್ರವಲ್ಲ, ಆಸ್ಪತ್ರೆಗಳಲ್ಲಿ ಬೆಡ್ ದೊರಕಿಸಿಕೊಳ್ಳುವುದೇ ದೊಡ್ಡ ಸಾಧನೆ' ಎಂಬ ವಾತಾವರಣ ನಿರ್ಮಾಣವಾಗಿ ಬಿಟ್ಟದ್ದು.

ಇದರಿಂದ ಜನರೂ ಆಸ್ಪತ್ರೆಗಳ ವೆಚ್ಚದ ಬಗ್ಗೆ ಮರುಮಾತನಾಡದೆ ಧನದಾಹಿ ಖಾಸಗಿ ಆಸ್ಪತ್ರೆಗಳ ಖಜಾನೆ ಭರಿಸುತ್ತಿದ್ದಾರೆ. ಇದು ಯಾವ ಮಟ್ಟಿಗಿನ ದಂಧೆಗೆ ಅವಕಾಶ ಮಾಡಿಕೊಟ್ಟಿದೆ ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ...


ಕೊಡಗು ಜಿಲ್ಲೆಯ ಸೋಮವಾರ ಪೇಟೆ ನಿವಾಸಿ ಅಹಮದ್ ಎಂಬ 65 ವರ್ಷ ಪ್ರಾಯದ ಹಿರಿಯ ವ್ಯಕ್ತಿಯೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿತು. ಆರಂಭದಲ್ಲಿ ಒಂದಷ್ಟು ದಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಮಂಗಳೂರಿನ "ಅಥೆನಾ ಆಸ್ಪತ್ರೆ"ಗೆ ಅವರನ್ನು ದಾಖಲಿಸಲಾಯಿತು.

ಅಥೆನಾ ಆಸ್ಪತ್ರೆ, ಜಿಲ್ಲಾಡಳಿತ ಘೋಷಿಸಿದ ಕೊರೋನ ಆಸ್ಪತ್ರೆಗಳಲ್ಲಿ ಒಂದಾಗಿದೆ. ಆದರೂ, 'ಆಯುಷ್ಮಾನ್ ಭಾರತ್' ಸಹಿತ ಯಾವುದೇ ಸರಕಾರಿ ಯೋಜನೆಗಳ ಲಾಭ ದೊರಕುವುದಿಲ್ಲ, ಚಿಕಿತ್ಸೆ ಮುಗಿಯುವ ವರೆಗೆ ಸಂಪೂರ್ಣ ಬಿಲ್ ರೋಗಿ ಕಡೆಯವರೇ ಭರಿಸಬೇಕು ಎಂಬ ಶರತ್ತು ವಿಧಿಸಿ ರೋಗಿಯನ್ನು ತೀವ್ರ ನಿಗಾ ಘಟಕದ ಆಕ್ಸಿಜನ್ ಬೆಡ್ ಗೆ ದಾಖಲು ಮಾಡಿಕೊಳ್ಳಲಾಯಿತು. ಆರೋಗ್ಯ ಇಲಾಖೆ ನೇಮಿಸಿದ್ದ "ಆರೋಗ್ಯ ಮಿತ್ರ" ಸಿಬ್ಬಂದಿ ರೋಗಿಯ ಕಡೆಯವರಿಗೆ ಮಾಹಿತಿ ಒದಗಿಸದಂತೆ ಅವರನ್ನು ಪಳಗಿಸಿಟ್ಟುಕೊಳ್ಳಲಾಗಿತ್ತು.


ಹೀಗೆ ವಿಶೇಷ ತುರ್ತು ಘಟಕದ ಆಕ್ಸಿಜನ್ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಕೇವಲ 10 ದಿನಗಳಲ್ಲಿ ಸರಿ ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ಔಷಧಿಯನ್ನು ರೋಗಿ ಕಡೆಯವರಿಂದ ಈ ಆಸ್ಪತ್ರೆ ಸಿಬ್ಬಂದಿ ತಮ್ಮದೇ ಮೆಡಿಕಲ್ ನಿಂದ ಬಲವಂತವಾಗಿ ತರಿಸಿಕೊಂಡಿದ್ದಾರೆ. ಇಷ್ಟೊಂದು ಲಕ್ಷಗಟ್ಟಲೆ ರೂಪಾಯಿಗಳ ಔಷಧಿ, ಐಸಿಯು ಚಿಕಿತ್ಸೆಯಿಂದಲೂ ಅಹಮ್ಮದ್ ಅವರ ಆರೋಗ್ಯ ಸುಧಾರಣೆಯಾಗಲಿಲ್ಲ. ಅದರ ಬದಲು ಮತ್ತಷ್ಟು ಹದಗೆಟ್ಟಿತು.

ಇದರಿಂದ ಬದುಕುವ ಆಸೆ ಕೈ ಬಿಟ್ಟ ಹಿರಿಯ ಜೀವವಾದ ಅಹಮದ್ ಅವರು ತನ್ನನ್ನು ಮನೆಗೆ ಕರೆದೊಯ್ಯುವಂತೆ ಹಠ ತೊಟ್ಟಿದ್ದಾರೆ. ಕೊನೆಗೆ ವೈದ್ಯರ ಸಲಹೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ನಿರ್ಧಾರಕ್ಕೆ ಅವರ ಕುಟುಂಬಸ್ಥರು ಬಂದಿದ್ದಾರೆ.


ಈ ನಿರ್ಧಾರಕ್ಕೆ ಬಂದ ತಕ್ಷಣ ಅಥೆನಾ ಆಸ್ಪತ್ರೆ ಆಡಳಿತ, ಔಷಧಿಯ ಒಂದೂವರೆ ಲಕ್ಷ ರೂಪಾಯಿ ಬಿಟ್ಟು, ಮತ್ತೆ ಚಿಕಿತ್ಸಸೆ ವೆಚ್ಚವಾಗಿ ಬರೋಬ್ವರಿ ನಾಲ್ಕು ಲಕ್ಷ ರೂಪಾಯಿ ಬಿಲ್ ಕೈಗೆ ಕೊಟ್ಟಿದ್ದಾರೆ. ಇದರಿಂದ ಆಘಾತಕ್ಕೆ ಒಳಗಾದ ರೋಗಿ ಕುಟುಂಬಸ್ಥರು ಮಂಗಳೂರಿನ ತಮ್ಮ ಪರಿಚಿತರ ಬಳಿ ನೋವು ತೋಡಿಕೊಂಡಿದ್ದಾರೆ.


ಸರಕಾರ ನಿಗದಿ ಪಡಿಸಿದ ಪ್ರಕಾರ ಐಸಿಯು ಅಕ್ಸಿಜನ್ ಬೆಡ್ ದರ ಒಂದು ದಿನಕ್ಕೆ 15 ಸಾವಿರ ರೂಪಾಯಿ. ಇದರಲ್ಲಿ ಆಕ್ಸಿಜನ್, ವೈದ್ಯರ ವೆಚ್ಚವೂ ಒಳಗೊಂಡಿದೆ, ಅ ಪ್ರಕಾರ ಹೆಚ್ಚೆಂದರೆ ಒಂದೂವರೆ ಲಕ್ಷ ಬಿಲ್ ಮಾಡಬಹುದು.

ವಕೀಲರಾದ ಪರಿಚಿತರು ಈ ಕುರಿತು ನೋಡಲ್ ಅಧಿಕಾರಿಗೆ ದೂರು ನೀಡಿದ್ದಾರೆ. ತಕ್ಷಣ ಆಸ್ಪತ್ರೆಯ ಆಡಳಿತ ತೋರಿಕೆಗೆ ಓಲೈಸಲು ಒಂದಿಷ್ಟು ರೂಪಾಯಿಯ ಕಡಿತ ಮಾಡುವ ನಾಟಕವಾಡಿತು. ಅದನ್ನು ಒಪ್ಪದ ವಕೀಲರು ಕೊನೆಗೆ ಈ "ಸುಲಿಗೆಯ ಕತೆ" ಯನ್ನು ಡಿವೈಎಫ್ಐ ಸಂಘಟನೆಯ ಗಮನಕ್ಕೆ ತಂದಿದ್ದಾರೆ.

ಅದರಂತೆ ಸಂಘಟನೆಯ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ನಡೆಯುತ್ತಿರುವ ಸುಲಿಗೆಯ ಕುರಿತು ವಿವರವಾದ ಮಾಹಿತಿ ನೀಡಲಾಯಿತು.‌ *ಕೋವಿಡ್, ಆಯುಷ್ಮಾನ್ ಕುರಿತು ತನಿಖೆಯ ಜವಾಬ್ದಾರಿ ಹೊಂದಿರುವ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ರತ್ಮಾಕರ್ ಅವರಲ್ಲಿಯೂ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಲಾಯಿತು.‌ "ಆಯುಷ್ಮಾನ್ ಗೆ ರೋಗಿಯ ಕಡೆಯವರು ಅಡ್ಮಿಷನ್ ಸಂದರ್ಭ ಮನವಿ ಮಾಡದೇ ಇದ್ದ ಕಾರಣ ಈ ಕುರಿತು ಸಹಾಯ ಕಷ್ಟ, ದುಬಾರಿ ಬಿಲ್ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ" ರತ್ನಾಕರ್ ತಿಳಿಸಿದರು. ಜಿಲ್ಲಾಧಿಕಾರಿಗಳೂ ಆರೋಗ್ಯ ಇಲಾಖೆ ಅಧಿಕಾರಿ ರತ್ನಾಕರ್ ಅವರಲ್ಲಿ ಸರಿಯಾದ ಕ್ರಮಕ್ಕೆ ಸೂಚಿಸಿದರು


ಕೊನೆಗೆ ರತ್ನಾಕರ್ ನೇತೃತ್ವದ ಅಧಿಕಾರಿಗಳ ತಂಡ ಅಥೆನಾ ಆಸ್ಪತ್ರೆಗೆ ತೆರಳಿ ವಿವರವಾದ ಮಾತುಕತೆ ನಡೆಸಿ ನಾಲ್ಕು ಲಕ್ಷ ಮೊತ್ತದ ಬಿಲ್ ಅನ್ನು ಒಂದು ಲಕ್ಷ ಇಪ್ಪತ್ತು ಸಾವಿರಕ್ಕೆ ಇಳಿಸಿದರು.

ನಿಟ್ಟುಸಿರು ಬಿಟ್ಟ ರೋಗಿಯ ಕುಟುಂಬಸ್ಥರು ಒಂದು ಲಕ್ಷ ಇಪ್ಪತ್ತು ಸಾವಿರ ಬಿಲ್ ಪಾವತಿಸಿ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡರು.

ಎಲ್ಲಾ ಪ್ರಕ್ರಿಯೆ ಮುಗಿಸಿ ರೋಗಿಯನ್ನು ಆಂಬುಲೆನ್ಸ್ ಗೆ ಸಾಗಿಸುವಾಗ ಆಗಲೇ ಆರೋಗ್ಯ ಕ್ಷೀಣಗೊಂಡಿದ್ದ ವೃದ್ದ ಆಸ್ಪತ್ರೆಯ ವರಾಂಡದಲ್ಲೆ ಮೃತಪಟ್ಟರು.


ಈಗ ಇರುವ ಪ್ರಧಾನ ಪ್ರಶ್ನೆ. ಕೋವಿಡ್ ಆಸ್ಪತ್ರ್ರೆಯಾಗಿ ಆಯ್ಕೆಗೊಂಡಿದ್ದ ಅಥೆನಾ ಸರಕಾರದಿಂದ ಸಿಗುವ ಸೌಲಭ್ಯ ರಿಯಾಯತಿಗಳನ್ನು ಮರೆಮಾಚಿದ್ದು ಏಕೆ ?

ಆಸ್ಪತ್ರೆಯಲ್ಲೇ ಇದ್ದು ಎಲ್ಲವನ್ಜೂ ನಿಭಾಯಿಸಬೇಕಾದ ಆರೋಗ್ಯ ಮಿತ್ರ, ನೋಡಲ್ ಅಧಿಕಾರಿ ಆಸ್ಪತ್ರೆ ಪರವಾಗಿ ಬಾಯಿ ಮುಚ್ಚಿ ಕೂರಲು ಕಾರಣವೇನು ?


ತೀವ್ರ ನಿಗಾ ಘಟಕದಲ್ಲಿ ಆಕ್ಸಿಜನ್ ಬೆಡ್ ನಲ್ಲಿ ಇರುವ ಒಬ್ಬ ಕೋವಿಡ್ ರೋಗಿಗೆ 9 ದಿನಕ್ಕೆ 1.5 ರೂಪಾಯಿ ಔಷಧಿ ಯಾವ ಉದ್ದೇಶಕ್ಕೆ ಬಳಕೆಯಾಗುತ್ತದೆ ? ಇದರಲ್ಲಿ ಏನಾದರು ಹಗರಣ ನಡೆಯುತ್ತಿದೆಯೇ...?




ದಿನಕ್ಕೆ 15 ಸಾವಿರ ರೂಪಾಯಿಯಂತೆ (ಸರಕಾರವೇ ನಿಗದಿ ಪಡಿಸಿದ) ,ಹೆಚ್ಚೆಂದರೆ 1.5 ಲಕ್ಷ ರೂಪಾಯಿ ಆಗಬೇಕಾಗಿದ್ದ ಚಿಕಿತ್ಸಾ ವೆಚ್ಚ ಮೂರು ಪಟ್ಟು ಹೆಚ್ಚಾಗುವುದು ಹೇಗೆ ? ಇದು ದಂಧೆಯಲ್ಲವೇ?


ಅಂತಿಮವಾಗಿ, ಸುಮಾರು ಎರಡು ಮಕ್ಕಾಲು ಲಕ್ಷ ರೂಪಾಯಿಗಳ ಡಿಸ್ಕೌಂಟ್ ರೋಗಿಗೆ ನೀಡಲಾಯಿತಾದರೂ, ಅದನ್ನು ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಸರ್ಕಾರಿ ದುಡ್ಡು ಅಥೆನಾ ಆಸ್ಪತ್ರೆಯ ಖಜಾನೆ ಸೇರಲಿದೆ... ಇದು ಸಾರ್ವಜನಿಕರ ತೆರಿಗೆ ಹಣದ ದರೋಡೆಯಾಗಲಿಲ್ಲವೇ..? ಈ ರೀತಿ ದಂಧೆಯನ್ನು ನಿಲ್ಲಿಸಲು ಜಿಲ್ಲಾಡಳಿತಕ್ಕೆ ಆಗುವುದಿಲ್ಲವೇ...?


ಇದು ಒಂದು ಪ್ರಕರಣ ಅಲ್ಲ. ದಿನನಿತ್ಯ ಇಂತಹ ಹಲವು ಪ್ರಕರಣಗಳು ನಗರದ ಬಹುತೇಕ ಆಸ್ಪತ್ರೆಗಳಲ್ಲಿ ನಡೆಯುತ್ತಲೇ ಇದೆ. ಕೋವಿಡ್ ರೋಗಿಗಳ ಕುಟುಂಬಸ್ಥರ ರಕ್ತ ಹೀರಲಾಗಿದೆ. ಕೆಲವು ಕುಟುಂಬಗಳು‌ ಚಿನ್ನಾಭರಣ ಮಾಡಿ, ಮನೆ ಅಡವಿಟ್ಟು ಬರ್ಬಾದ್ ಅಗಿ ಹೋಗಿವೆ.

ಈಗಿನ ಪರಿಸ್ಥಿತಿಯಲ್ಲಿ ಕೋವಿಡ್ ಸಂತ್ರಸ್ತರ ಧ್ವನಿ ಉಡುಗಿ ಹೋಗಿದೆ. ಇಂತಹ ದಂಧೆಯ ವಿರುದ್ಧ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳೂ ದನಿ ಎತ್ತಲು ಹಿಂಜರಿಯುತ್ತಿವೆ. ಸರಕಾರದ, ಜಿಲ್ಲಾಡಳಿತದ ಮಾರ್ಗ ಸೂಚಿಗಳು ಖಾಸಗಿ ಆಸ್ಪತ್ರೆಯ ಧಣಿಗಳ ಚೇಂಬರ್ ನ ಕಸದ ಬುಟ್ಟಿಯನ್ನು ಸೇರುತ್ತಿವೆ.

Ads on article

Advertise in articles 1

advertising articles 2

Advertise under the article