ಮಂಗಳೂರಿನ ಹಿರಿಯ ಪತ್ರಕರ್ತ ಸುರೇಂದ್ರ ಶೆಟ್ಟಿ ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. 57 ವಯಸ್ಸಿನ ಅವರು ಮಂಗಳವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಬ್ರಹ್ಮಾವರದ ಆವರ್ಸೆ ಪಡುಮನೆಯಲ್ಲಿ ಹುಟ್ಟಿದ ಸುರೇಂದ್ರ ಶೆಟ್ಟಿ ಅಚ್ಲಾಡಿಯಲ್ಲಿ ತಮ್ಮ ಬಾಲ್ಯವನ್ನು ಕಳೆದರು.
ಮಂಗಳೂರು ವಿಶ್ವ ವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಮುಂಗಾರು ಮೂಲಕ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ, ವಿಜಯ ಕರ್ನಾಟಕ, ವಾರ್ತಾ ಭಾರತಿ ಮತ್ತಿತರ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಕೆಲ ಕಾಲ ಕನ್ನಡಪ್ರಭ ಪತ್ರಿಕೆಯ ಮಂಗಳೂರು ಆವೃತ್ತಿ ಮುಖ್ಯಸ್ಥರಾಗಿದ್ದರು.
ಮಂಗಳೂರಿನ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರಿಗೆ ಮಾಮ್ ಸಂಸ್ಥೆ ಆಯೋಜಿಸಿದ ಮನೋಭಿನಂದನ ಕಾರ್ಯಕ್ರಮದಲ್ಲಿ ಹೊರ ತಂದ ಮನೋಭಿನಂದನ ಅಭಿನಂದನಾ ಗ್ರಂಥದ ಸಂಪಾದಕರೂ ಆಗಿ ಸೇವೆ ಸಲ್ಲಿಸಿದ್ದರು.
ಕಳೆದ ಎರಡು ವರ್ಷಗಳಿಂದ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದರು.
ಅವರು ಪತ್ನಿ, ಪುತ್ರಿ, ಕುಟುಂಬಸ್ಥರನ್ನು ಅಗಲಿದ್ದಾರೆ.
ಹಿರಿಯ ಪತ್ರಕರ್ತ ಲೋಕೇಶ್ ಕಾಯರ್ಗ ಅವರು ಸುರೇಂದ್ರ ಶೆಟ್ಟಿ ಅವರಿಗೆ ನುಡಿನಮನ ಸಲ್ಲಿಸಿದ್ದು ಹೀಗೆ...:
ಆತ್ಮೀಯ ಮಿತ್ರ ಸುರೇಂದ್ರ ಶೆಟ್ಟಿಯವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಕಳೆದ ಏಪ್ರಿಲ್ 16 ರಂದು ಕರೆ ಮಾಡಿ ಮಾಡಿದಾಗ, ''ಕೊರೋನಾ ಬಂದು ಒಂದು ವಾರವಾಯಿತು. ಈಗ ಚೇತರಿಸಿಕೊಳ್ಳುತ್ತಿದ್ದೇನೆ. ಮೈ,ಕೈ ನೋವು, ಸುಸ್ತು ಇದೆ. ಉಳಿದಂತೆ ತೊಂದರೆ ಏನೂ ಇಲ್ಲ'' ಎಂದಿದ್ದರು.
ಮೈಸೂರಿಗೆ ಬನ್ನಿ ಶೆಟ್ರೇ, ಇಲ್ಲಿ ನೀವು ಮಾಡುವ ಕೆಲಸವೊಂದಿದೆ ಎಂದಾಗ , ಪತ್ರಿಕೋದ್ಯಮಕ್ಕೆ ಸಂಬಂಧವಿಲ್ಲದ ಸದ್ಯದ ಕೆಲಸವನ್ನು ನೆನಪಿಸಿಕೊಂಡು ''ಇದೇ ನನ್ನ ಕಡೆಯ ಕೆಲಸ. ಇನ್ನೆಲ್ಲಿಗೂ ಬರೊಲ್ಲ ಲೋಕೇಶ್ '' ಎಂದಿದ್ದರು. ಶೆಟ್ರ ಮಾತಿಗೆ ಅರ್ಥ ಕಲ್ಪಿಸಿಕೊಂಡರೆ ಈಗ ಕಣ್ಣಾಲಿಗಳು ತುಂಬಿಕೊಳ್ಳುತ್ತಿವೆ.
ನನ್ನ ಪಾಲಿಗೆ ಶೆಟ್ರು ಹಿರಿಯಣ್ಣ. 1993ರಲ್ಲಿ ಸಂಯುಕ್ತ ಕರ್ನಾಟಕದಲ್ಲಿ ಇಂಟರ್ನ್ ಶಿಪ್ ಮಾಡಲು ಬೆಂಗಳೂರಿಗೆ ಬಂದಾಗ ಒಬ್ಬರೂ ಪರಿಚಿತರಿರಲಿಲ್ಲ. ಆಗ ತಮ್ಮ ರೂಮಿನಲ್ಲಿ ಉಳಿಸಿಕೊಂಡು ಎರಡು ತಿಂಗಳು ಆಶ್ರಯ ನೀಡಿದ್ದು ಶೆಟ್ರು. ಸಂಯುಕ್ತ ಕರ್ನಾಟಕ ನಂತರ ಕನ್ನಡ ಪ್ರಭದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ ಶೆಟ್ರು ಯಾವುದೇ ಸಂಪಾದಕ ನೆಚ್ಚಿಕೊಳ್ಳಬಹುದಾದ ಅತ್ಯುತ್ತಮ ಡೆಸ್ಕ್ ಮನ್ ಆಗಿದ್ದರು. ಶಿಸ್ತು, ಪರಿಶ್ರಮದ ವಿಚಾರದಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದೆ. 2012 ರ ಸುಮಾರಿಗೆ ಅವರು ವಿಜಯ ಕರ್ನಾಟಕಕ್ಕೆ ಬಂದಾಗ ನಾವಿಬ್ಬರೂ ಸಹೋದ್ಯೋಗಿಗಳಾದೆವು.
ವಿಜಯ ಸಂಕೇಶ್ವರ ಅವರು ದಿಗ್ವಿಜಯ ಹೆಸರಿನ ಪೇಪರ್ ಮಾಡ್ತಾರೆಂದು ಹೊರಟ ಶೆಟ್ರು ತಮ್ಮ ನಿರ್ಧಾರಕ್ಕೆ ಕೊನೆಯವರೆಗೂ ಪರಿತಪಿಸುವಂತಾಯಿತು. ಮಂಗಳೂರಿಗೆ ಹೋಗಿ ವಾರ್ತಾ ಭಾರತಿ ಬಳಿಕ ಕನ್ನಡ ಪ್ರಭ ಬ್ಯೂರೋ ಚೀಫ್ ಆದ ಶೆಟ್ರಿಗೆ ಅಲ್ಲೂ ಬಿಡಬೇಕಾದ ಪರಿಸ್ಥಿತಿ ಬಂತು. ಉತ್ತಮ ಪತ್ರಕರ್ತನಾಗಿದ್ದರೂ ಬದುಕಿಗೆ ಭದ್ರತೆ ನೀಡದ ವೃತ್ತಿಯ ಬಗ್ಗೆ ಅವರಿಗೆ ಬೇಸರವಿತ್ತು. ಪರಿಚಿತರ ಬಳಿ ಹೊಸ ಕೆಲಸಕ್ಕೆ ಸೇರಿದಾಗ, 'ಇಲ್ಲಿ ರಾಜಕೀಯವಿಲ್ಲ, ಕೆಲಸದ ಬಗ್ಗೆ ತೃಪ್ತಿ ಇದೆ' ಎಂದಿದ್ದರು. ಪ್ರಾಮಾಣಿಕ, ಸ್ವಾಭಿಮಾನಿ ಮತ್ತು ಪರಿಶ್ರಮಿ ಪತ್ರಕರ್ತನಾಗಿದ್ದ ಶೆಟ್ರಿಗೆ ವೃತ್ತಿ ಬದುಕಿನಲ್ಲಿ ಇದಕ್ಕಿಂತ ಹೆಚ್ಚಿನ ಗೌರವ, ಮಾನ್ಯತೆ ಖಂಡಿತಾ ದೊರೆಯಬೇಕಿತ್ತು.
ಹೋಗಿ ಬನ್ನಿ ಶೆಟ್ರೇ. ನಿಮ್ಮನ್ನು ಎಂದೂ ಮರೆಯಲಾರೆ...
