ಲಾಕ್‌ಡೌನ್‌ನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾದವರಿಗೆ ಮತ್ತು ಕೂಲಿ- ಕಾರ್ಮಿಕರಿಗೆ ಆಹಾರದ ಕಿಟ್ ನೀಡುವಂತೆ ರಾಜ್ಯ ಸರ್ಕಾರವನ್ನು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ಧಾರೆ.
ಬಂಟ್ವಾಳದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ ಬಳಿಕ ಬಹುತೇಕ ಎಲ್ಲರಿಗೂ ಸಮಸ್ಯೆ ಉಂಟಾಗಿದೆ. ಇದರಿಂದ ಬಡ- ಮಧ್ಯಮ ವರ್ಗದವರು ತೀವ್ರ ಬಾಧೆಗೊಳಗಾಗಿದ್ಧಾರೆ. ಉದ್ಯೋಗ ಇಲ್ಲದೆ, ಆದಾಯದ ಯಾವುದೇ ಮೂಲ ಇಲ್ಲದ ಈ ಕುಟುಂಬಗಳಿಗೆ ತಕ್ಷಣ ಆಹಾರದ ಕಿಟ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ರೀತಿ, ಲಸಿಕೆಯನ್ನು ವ್ಯವಸ್ಥಿತವಾಗಿ ಪೂರೈಕೆ ಮಾಡಲು ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸಿದರು.
ಕಳೆದ ಒಂದು ವರ್ಷದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಲಸಿಕೆಯನ್ನು ಉತ್ಪಾದಿಸಿದ ಬಳಿಕ ದೇಶಾದ್ಯಂತ ಸಮರೋಪಾದಿಯಲ್ಲಿ ವಿತರಿಸುವ ಎಲ್ಲ ಸಿದ್ಧತೆಯನ್ನು ನಡೆಸಿತ್ತು ಎಂಬ ಬಿಲ್ಡಪ್ ನೀಡಿತ್ತು. ಈ ಬಗ್ಗೆ ಮಾಡಲಾದ ಹಲವು ಸರಣಿ ಸಭೆಗಳು ವಿಫಲವಾದವೇ ಎಂದು ಅವರು ಪ್ರಶ್ನಿಸಿದರು.
