ಬಿಜೆಪಿ ಮಾಡಿದ ತಪ್ಪೇನು...?
ದೀದಿ ಗೆಲುವಿನ ರಸಹ್ಯವೇನು...?
ರಾಜಕೀಯ ತಂತ್ರಗಾರನ ಮನದ ಮಾತು
ಯಶಸ್ಸಿನ ಬೆನ್ನಲ್ಲೇ ತಂತ್ರಗಾರನ ನಿವೃತ್ತಿ?
ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ, ಅಮಿತ್ ಟೀಮಿನ ವಿರುದ್ಧ ಭರ್ಜರಿ ಪ್ರದರ್ಶನ, ತಮಿಳುನಾಡಿನಲ್ಲಿ 10 ವರ್ಷಗಳ ಬಳಿಕ ಅಧಿಕಾರಕ್ಕೆ ಮರಳಿದ ದ್ರಾವಿಡ ಮುನ್ನೇತ್ರ ಕಳಗಂ.... ಈ ಯಶಸ್ಸಿನ ಹಿಂದೆ ಇರೋದು ಒಂದೇ ಹೆಸರು... ಅದೇ ಪ್ರಶಾಂತ್ ಕಿಶೋರ್.
2014ರಲ್ಲಿ ನರೇಂದ್ರ ಮೋದಿ ಎಂಬ ಬ್ರ್ಯಾಂಡನ್ನು ದೇಶಾದ್ಯಂತ ಹಾಟ್ ಕೇಕ್ ಆಗಿ ಸೇಲ್ ಮಾಡಿದ್ದ ಪ್ರಶಾಂತ್ ಕಿಶೋರ್, ದಿಲ್ಲಿಯಲ್ಲಿ ಕೇಜ್ರೀವಾಲ್.. ಬಿಹಾರದಲ್ಲಿ ಲಾಲೂ.. ಒರಿಸ್ಸಾದಲ್ಲಿ ನವೀನ್ ಪಟ್ನಾಯಕ್ ಅವರ ಭರ್ಜರಿ ಪ್ರದರ್ಶನದ ಹಿಂದೆ ಚುನಾವಣಾ ತಂತ್ರಗಾರಿಕೆಯನ್ನು ಮೆರೆದವರು.
ಬಿಜೆಪಿ ಮೂರಂಕೆ ದಾಟಲ್ಲ ಎಂದಿದ್ದ ಪಿಕೆ...
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೂರು ಅಂಕೆ ದಾಟಲ್ಲ. ಒಂದು ವೇಳೆ ದಾಟಿದರೆ ನಾನು ಟ್ವಿಟ್ಟರ್ ಜಗತ್ತಿಗೆ ರಾಜೀನಾಮೆ ನೀಡುತ್ತೇನೆ. ಮತ್ತೆಂದೂ ಟ್ವೀಟ್ ಜಗತ್ತಿಗೆ ಮರಳಲ್ಲ ಎಂದು ಸವಾಲು ಹಾಕಿದವರು ಇದೇ ಪ್ರಶಾಂತ್ ಕಿಶೋರ್. ಈಗ ಆ ಮಾತು ಅಕ್ಷರಶಃ ನಿಜವಾಗಿದೆ.
ಈ ಸಾಧನೆಯ ಬೆನ್ನಲ್ಲೇ ಲೈವ್ ಇಂಟರ್‌ವ್ಯೂ ನೀಡಿದ ಪಿ.ಕೆ. ತಾನು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ, ಬಿಜೆಪಿಗೆ ಮುಳುವಾಗಿದ್ದೇನು ಮತ್ತು ದೀದಿಯ ಸಾಧನೆಯ ಹಿಂದಿನ ಕಾರಣ ಏನು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಮಮತಾ ಬ್ಯಾನರ್ಜಿ ಲೋಕಸಭಾ ಚುನಾವಣೆ ವೇಳೆ ಮಾಡಿದ್ದ ತಪ್ಪುಗಳನ್ನು ಪುನರಾವರ್ತನೆ ಮಾಡಲಿಲ್ಲ. ತಪ್ಪನ್ನು ತಿದ್ದುಕೊಂಡರು. ಆದರೆ, ಬಿಜೆಪಿ ಇದಕ್ಕೆ ತದ್ವಿರುದ್ಧವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ತಪ್ಪನ್ನೇ ಮರುಕಳಿಸಿತು.
ಇನ್ನು, ಚುನಾವಣೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಾಯಕರು ಬಿಜೆಪಿ ಪಾಲಿಗೆ ಮುಳುವಾದರು. ಈ ಪಕ್ಷಾಂತರಗಳ ಬಗ್ಗೆ ವ್ಯಾಪಕ ಚರ್ಚೆಯಾಯಿತು. ಟಿಎಂಸಿ ಅಂತ್ಯಗೊಳ್ಳುತ್ತಿದೆ, ಬಿಜೆಪಿ ಗೆಲುವಿನ ಸನಿಹಕ್ಕೆ ಹೋಗುತ್ತಿದೆ ಎಂದು ಮಾಧ್ಯಮದಲ್ಲಿ ಹೊಗಳಲಾಯಿತು. ಆದರೆ, ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಬಹುತೇಕ ನಾಯಕರು ಒಂದೋ ಭ್ರಷ್ಟಾಚಾರಿಗಳು ಇಲ್ಲವೇ ವರ್ಚಸ್ಸು ಕಳೆದುಕೊಂಡ ರಾಜಕಾರಣಿಗಳಾಗಿದ್ದರು ಎಂದು ಪ್ರಶಾಂತ್ ಕಿಶೋರ್ ಬಣ್ಣಿಸಿದ್ದಾರೆ.