ನನ್ನ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಮುಂದಿಟ್ಟುಕೊಂಡು ಮಾಜಿ ಸಚಿವರೊಬ್ಬರು ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ತಮಿಳಿನ ಖ್ಯಾತ ಚಿತ್ರನಟಿಯೊಬ್ಬರು ಚೆನ್ನೈ ಪೊಲೀಸ್ ಆಯುಕ್ತರಿಗೆ ಇಂದು ದೂರು ನೀಡಿದ್ದಾರೆ.
ತಮಿಳುನಾಡಿನಲ್ಲಿ ಈ ಹಿಂದೆ ಅಧಿಕಾರದಲ್ಲಿ ಇದ್ದ ಎಐಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದ ಮಣಿಗಂಡನ್, ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನ ಜೊತೆ 5 ವರ್ಷಗಳ ಕಾಲ ಗೌಪ್ಯವಾಗಿ ಸಾಂಸಾರಿಕ ಜೀವನ ನಡೆಸಿದ್ದಾರೆ.
ಅಲ್ಲದೆ, ಈ ವೇಳೆ ಅವರು ನನ್ನ ಜೊತೆಗೆ ನಡೆಸಿದ ಆತ್ಮೀಯ ಸಲ್ಲಾಪಕ್ಕೆ ಸಂಬಂಧಿಸಿದ ಅಶ್ಲೀಲ ಪೋಟೋ ಮತ್ತು ವೀಡಿಯೋಗಳನ್ನು ತೆಗೆದಿಟ್ಟುಕೊಂಡಿದ್ದಾರೆ ಎಂದು ನಟಿ ತನ್ನ ದೂರಿನಲ್ಲಿ ಹೇಳಿದ್ಧಾರೆ.
ಈಗ ನಾಲ್ಕು ಗೋಡೆಗಳ ನಡುವೆ ಇರಬೇಕಾದ ಈ ಫೋಟೋ ಮತ್ತು ವೀಡಿಯೋಗಳನ್ನು ಮುಂದಿಟ್ಟು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿ ತಮಿಳು ಚಿತ್ರ ನಟಿ ಶಾಂತಿನಿ ದೇವಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ನಟಿ ಶಾಂತಿನಿ ದೇವಾ ತಾನು ಓರ್ವ ನಟಿಯಾಗಬೇಕು ಎಂಬ ಆಸೆಯಿಂದ ಚೆನ್ನೈಗೆ ಬಂದವರು. ಆದರೆ, ಅವರಿಗೆ ಸಿನಿಮಾದಲ್ಲಿ ಒಳ್ಳೆಯ ಅವಕಾಶಗಳು ಲಭ್ಯವಾಗಿಲ್ಲ. ಈ ಸಂದರ್ಭದಲ್ಲಿ ಆಗ ಸಚಿವರಾಗಿದ್ದ ಮಣಿಗಂಡನ್ ಪರಿಚಯವಾಗಿತ್ತು.
ಮಣಿಗಂಡನ್ ಈಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾರೆ. ಇಬ್ಬರೂ 5 ವರ್ಷ ಒಟ್ಟಿಗೆ ಜೀವನವನ್ನೂ ಮಾಡಿದ್ದಾರೆ. ಆರೋಪಿ ಮಣಿಗಂಡನ್ ನಟಿಗೆ ಮನೆಯನ್ನೂ ಕೊಡಿಸಿದ್ದಾರೆ. ಆದರೆ, ನಟಿ ಶಾಂತಿನಿ ಇದೀಗ ತನ್ನನ್ನು ಮದುವೆಯಾಗುವಂತೆ ಮಣಿಗಂಡನನ್ನು ಪೀಡಿಸಿದ್ದಾಳೆ.
ಆದರೆ, ಇದಕ್ಕೆ ಒಪ್ಪದ ಮಣಿಗಂಡನ್ ಆಕೆಯ ಅಶ್ಲೀಲ ಪೋಟೋ ಹಾಗೂ ವಿಡಿಯೋಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದಾರೆ. ಇದಲ್ಲದೇ ಜನರನ್ನು ಬಿಟ್ಟು ಹತ್ಯೆ ಮಾಡುವುದಾಗಿಯೂ ಅವರು ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.




