-->

success stories -1 | ಅವನ ವೇಗಕ್ಕೆ ಕ್ಯಾಲಿಫೋರ್ನಿಯಾ ಪಕ್ಕದ ಮನೆ ಆಯ್ತು

success stories -1 | ಅವನ ವೇಗಕ್ಕೆ ಕ್ಯಾಲಿಫೋರ್ನಿಯಾ ಪಕ್ಕದ ಮನೆ ಆಯ್ತು





ಬರಹ: ಕೃಷ್ಣ ಭಟ್ (ಕೃಪೆ- ಎಫ್‌.ಬಿ.)


ಮೊನ್ನೆ ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದ್ದ... ಹೇಗಿದ್ದೀರಿ? ನಾನು ಯಾರೂಂತ ಗೊತ್ತಾಯ್ತಾ?

ಕಾರಿನಲ್ಲಿ ಮಗನೊಂದಿಗೆ ಕುಳಿತ ಚಿತ್ರ. ಎಷ್ಟು ಯೋಚಿಸಿದರೂ ನೆನಪಾಗಲೇ ಇಲ್ಲ. *ಕ್ಷಮಿಸಿ ಇಲ್ಲ* ಎಂದ ತಕ್ಷಣವೇ ಫೋನ್ ಬಂದೇ ಬಿಡ್ತು.


*ನಾನು ಮಾರಾಯ್ರೆ... ಹಿಲರಿ... ನಿಮ್ಮ ಕ್ಲಾಸ್ ಮೆಟ್*


ಯಾವ ಕ್ಲಾಸಲ್ಲಿ? ಎಲ್ಲಿ ಅಂತ ತಲೆಗೆ ಹೊಳೆಯದೆ ಮೌನವಾದಾಗ ಅವನೇ ಮುಂದುವರಿಸಿದ... *ಐದನೇ ಕ್ಲಾಸಿಂದ ಏಳನೇ ಕ್ಲಾಸ್ ವರೆಗೆ ಒಟ್ಟಿಗಿದ್ದೆವು. ಆಮೇಲೆ ನಾನು ಫೇಲಾದೆ. ನೀವೆಲ್ಲ ಮುಂದೆ ಹೋದಿರಿ* ಅಂದ.


ಆಗ ಒಂದು‌ ಚಿತ್ರಣ ಸ್ಪಷ್ಟವಾಯಿತು... ಈಗೆಲ್ಲಿ ಅಂತ ಕೇಳಿದ್ರೆ *ಕ್ಯಾಲಿಫೋರ್ನಿಯಾ* ಅಂದ. ಹೌದಾ, ಎಲ್ಲಿಂದ ಎಲ್ಲಿಗೆ ಅಂತ ಯೋಚಿಸ್ತಾ ಇರುವಾಗಲೇ ಮುಂದಿನ ಕತೆ ಅವನೇ ಹೇಳಿದ.

ಹೇಗೋ ಎಸ್ಸೆಸ್ಸೆಲ್ಸಿ ಮುಗಿಸಿದವನು ಯಾರೋ ಹೇಳಿದ್ರು ಅಂತ ಡಿಫಾರ್ಮಾ ಕೋರ್ಸ್ ಸೇರಿದೆ. ಅಲ್ಲಿ ಒಂದು ಸಬ್ಜೆಕ್ಟ್ ಕೂಡಾ ಪಾಸಾಗಲಿಲ್ಲ!







ಅಲ್ಲಿಂದ ಮಂಗಳೂರಿಗೆ ಹೋಗಿ ತರಕಾರಿ ಮೂಟೆ ಹೊತ್ತೆ, ಸಿಕ್ಕ‌ಸಿಕ್ಕ ವಾಹನ ಓಡಿಸಿದೆ, ಬಸ್ ಡ್ರೈವರ್ ಆದೆ. ಪೆಟ್ಟು, ಗಲಾಟೆ ಎಲ್ಲ ಮಾಡ್ಕೊಂಡೆ.


ಗಟ್ಟಿ ಮುಟ್ಟಾಗಿದ್ದೆ, ಮಾತೂ ಜೋರಿತ್ತು. ನನ್ನನ್ನು ಕೆಣಕಿದ್ರೆ ಯಾರನ್ನೂ ಬಿಡಲ್ಲ ಅಂತ ರೋಪ್ ಹಾಕ್ತಾ ಇದ್ದೆ. ಇದರ ನಡುವೆ, ಲಾರಿ, ಟ್ರಕ್ಕು ಎಲ್ಲ ಓಡ್ಸೋದು ಕಲ್ತು ಎಕ್ಸ್ ಪರ್ಟ್ ಆದೆ.

ಈ ಮಧ್ಯೆ ಯಾರೋ ಇಲ್ಲಿ ಗಲಾಟೆ ಮಾಡ್ಕೊಂಡಿರೋ ಬದ್ಲು ಕುವೈಟ್ ಗೆ ಹೋಗು, ಅಲ್ಲಿ ಟ್ರಕ್ ಡ್ರೈವರ್ ಗಳಿಗೆ ಡಿಮ್ಯಾಂಡ್ ಉಂಟು ಅಂದ್ರು.


ಒಲ್ಲದ ಮನಸಿಂದ್ಲೇ ಯಾರದೋ ಪ್ರಭಾವ ಬಳಸಿ ಅಲ್ಲಿ ಹೋದೆ. ಈ ನಡುವೆ ಅಮೆರಿಕ- ಇರಾಕ್ ಎರಡನೇ ಸುತ್ತಿನ ಸಮರ ಸಿರಿಯಾ ವಿಚಾರದಲ್ಲಿ ಆರಂಭ ಆಯ್ತು.


ನಂಗೆ ಮೊದಲಿಂದ್ಲೂ ಬಾಯಿ ಜೋರು.‌ ಹೇಗೋ ಅಮೆರಿಕದ ಮಿಲಿಟರಿಯಲ್ಲಿ ಯಾರದೋ ಸ್ನೇಹ ಮಾಡ್ಕೊಂಡೆ. ಅವರಿಗೆ ಮಿಲಿಟರಿ ಟ್ರಕ್ ಚಾಲಕ ಬೇಕಾಗಿತ್ತು. ನಾನು ಸೇರ್ಕೊಂಡೆ. ನಂತ್ರ ಅಲ್ಲಿನ ಯುದ್ಧ ಮುಗಿದಾಗ ಮುಂದೇನು ಅಂತ ಪ್ರಶ್ನೆ ಬಂತು. ಒಬ್ಬ ಪರಿಚಯದವರು ಅಮೆರಿಕಕ್ಕೆ ಬಾ ಅಂದ್ರು.


ಹಾಗೆ ಬಂದವನಿಗೆ ಇಲ್ಲಿ ಭಾರತೀಯ ಕಂಪನಿಯಲ್ಲಿ ಕೆಲಸ ಸಿಕ್ಕಿತು. ನಿಜ ಅಂದ್ರೆ ಅಮೆರಿಕ‌ದ ಕಂಪನಿಯಲ್ಲೇ ಸಿಕ್ಕಿತ್ತು. ಒಳ್ಳೆಯ ಸಂಬಳವೂ‌ ಇತ್ತು. ಆದರೆ ಅಮೆರಿಕದ ಕಂಪನಿ ಕತೆ ಏನಂದ್ರೆ ನಿಗದಿತ ಸಮಯದಲ್ಲಿ ಮಾತ್ರ ಕೆಲಸ. ಓ.ಟಿ ಮಾಡಲು ಅವಕಾಶ ಇರಲಿಲ್ಲ.


ನಂಗೋ ಹೆಚ್ಚೆಚ್ಚು ದುಡೀಬೇಕು. ದುಡ್ಡು ಮಾಡಿ ದೊಡ್ಡವನಾಗಬೇಕು ಎನ್ನುವ ಆಸೆ. ಹಾಗಾಗಿ ಹೆಚ್ಚುವರಿ ಟೈಮ್ ದುಡೀಬಹುದು ಅನ್ನೊ‌ ಕಾರಣಕ್ಕೆ ಇಂಡಿಯನ್ ಕಂಪನಿ ಆಯ್ಕೆ ಮಾಡಿದೆ.

ಅಮೆರಿಕಕ್ಕೆ ಬಂದು ಕೆಲವು ವರ್ಷ ಆಯಿತು.. ಈಗ ಕ್ಯಾಲಿಫೋರ್ನಿಯಾವೇ ನನ್ನದು ಅನ್ನೋ ತರ ಓಡಾಡ್ತೇನೆ. ಈಗ ಒಂದು ಟ್ರಕ್ ಇದೆ, ಇನ್ನೊಂದು ಟ್ರಕ್ ಗೆ ಲೋನ್ ಮಾಡಿ ಆರ್ಡರ್ ಮಾಡಿದ್ದೇನೆ. ಸದ್ಯವೇ ಟ್ರಾವೆಲ್ಸ್ ಕಂಪನಿ ಆಗ್ತದೆ ನಂದು. ಅಂದ ಹಾಗೆ, ಇಲ್ಲಿ ಒಂದು ಟ್ರಕ್ ನ ಬೆಲೆ ಸುಮಾರು ಎರಡು ಕೋಟಿ ಆಗ್ತದೆ.


ಹೆಂಡತಿ ಮತ್ತು ಇಬ್ಬರು ಮಕ್ಕಳು ಇಲ್ಲೇ ಸೆಟ್ಲ್ ಆಗಿದ್ದೇವೆ. ಇನ್ನೂ ಏನೇನೋ ಪ್ಲಾನ್ಸ್ ಇದೆ.

ಮಾತಿನ್ನೂ ಮುಂದುವರಿದಿತ್ತು. ಅವನಿಗೆ ಫೇಲಾಗಿದ್ದು, ಎಲ್ಲ ಸಬ್ಜೆಕ್ಟ್ ಹೋಗಿದ್ದು ಒಂದು ಮ್ಯಾಟರೇ ಆಗಲಿಲ್ಲ. ಸುಟ್ಟು ತಿನ್ನಲೂ ಬರದಿದ್ದ ಹಿಂದಿ, ಇಂಗ್ಲಿಷ್ ಅವನನ್ನು ಕಟ್ಟಿ ಹಾಕಲೇ ಇಲ್ಲ.


ಹೇಗಿದು ಅಂತ ಯೋಚನೆ ಆಯಿತು.


ಹೂಂ... ಅವನನ್ನು ಡ್ರೈವ್ ಮಾಡ್ತಾ ಇದ್ದಿದ್ದು ದೊಡ್ಡ ಕನಸು ಮತ್ತು ಹಠ ಅನ್ನೋದು ಸ್ಪಷ್ಟವಾಯಿತು. ಜತೆಗೆ ನಾನೂ ಸೇರಿದಂತೆ ಎಲ್ಲರಿಗೂ ಇರಬಹುದಾದ ವಿಶಾಲ ಅವಕಾಶಗಳ ಝಲಕ್ ಕೂಡಾ.

Ads on article

Advertise in articles 1

advertising articles 2

Advertise under the article