-->

relax the rules | ಮದುವೆ ಕಾರ್ಯಕ್ರಮಗಳ ನಿರ್ಬಂಧಗಳನ್ನು ಸರಳೀಕರಿಸಿ, ತಾರತಮ್ಯ ನಿವಾರಿಸಿ : ಡಿವೈಎಫ್ಐ ಆಗ್ರಹ

relax the rules | ಮದುವೆ ಕಾರ್ಯಕ್ರಮಗಳ ನಿರ್ಬಂಧಗಳನ್ನು ಸರಳೀಕರಿಸಿ, ತಾರತಮ್ಯ ನಿವಾರಿಸಿ : ಡಿವೈಎಫ್ಐ ಆಗ್ರಹ





ಕೋವಿಡ್ ಸೋಂಕು ಹೆಚ್ಚಳದ ಹಿನ್ನಲೆಯಲ್ಲಿ ಜಾರಿಗೊಳಿಸಲಾಗಿರುವ ಹೊಸ ಮಾರ್ಗಸೂಚಿಗಳ ಅನ್ವಯ ನಿಗದಿಯಾಗಿರುವ ಮದುವೆಗಳನ್ನು ನಡೆಸಲು ಅವಕಾಶ ನೀಡಿ ಹಲವು ಕಠಿಣ ನಿಯಮಗಳನ್ನು ವಿಧಿಸಲಾಗಿದೆ. 


ಈಗ ವಿಧಿಸಲಾಗಿರುವ ನಿಯಮಗಳು ಪಾಲಿಸಲು ಅಸಾಧ್ಯವಾಗುವಷ್ಟು ಕಠಿಣವಾಗಿದ್ದು, ಮದುವೆ ನಿಗದಿಯಾಗಿರುವ ಕುಟುಂಬಗಳು ಸ್ಥಿತಿ ದಿಕ್ಕುಕಾಣದಂತಾಗಿದೆ. 





ಸರಕಾರ ನಿಯಮಗಳಲ್ಲಿರುವ ಕಠಿಣ ಅಂಶಗಳನ್ನು ತಕ್ಷಣವೇ ತೆಗೆದು ಹಾಕಿ ನಿಗದಿಯಾಗಿರುವ ಮದುವೆಗಳು ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಿ ಸರಳವಾಗಿ ನಡೆಯಲು ಅವಕಾಶ ನೀಡಬೇಕು. ಹಾಗೂ ಪ್ರಭಾವಿಗಳ ಕುಟುಂಬದ ಮದುವೆ, ಮೆಹಂದಿಗಳು ಯಾವುದೆ ಅನುಮತಿ, ನಿರ್ಬಂಧಗಳಿಲ್ಲದೆ ಶಿಷ್ಟಾಚಾರ ಉಲ್ಲಂಘಿಸಿ ನಡೆಯುತ್ತಿರುವುದು ವರದಿಯಾಗುತ್ತಿದ್ದು,ಇಂತಹ ತಾರತಮ್ಯಗಳನ್ನು ನಿವಾರಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.


ಕೋವಿಡ್ ಮಾರ್ಗ ಸೂಚಿಯ ಪ್ರಕಾರ ಮದುವೆಗಳಿಗೆ ಕೇವಲ 50 ಜನರಿಗಷ್ಟೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಹಾಗೂ ಭಾಗವಹಿಸುವ ಪ್ರತಿಯೊಬ್ಬರ ಆಧಾರ್ ಕಾರ್ಡ್ ಸಹಿತ ಗುರುತು ಚೀಟಿಗಳನ್ನು ಸಂಬಂಧ ಪಟ್ಟ ಅಧಿಕಾರಿಗಳ ಮುಂದೆ ಹಾಜರು ಪಡಿಸಿ ಪಾಸ್ ಗಳನ್ನು ಪಡೆಯುವಂತೆ, ಆ ಪಾಸ್ ಗಳನ್ನು ಹೊಂದಿದವರಷ್ಟೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು, ಕರ್ಫ್ಯೂ ಅವಧಿಯಲ್ಲಿ‌ ಮದುವೆ ಮಂಟಪಕ್ಕೆ ಸಂಚರಿಸಲು ಅವಕಾಶ ನೀಡಲಾಗಿದೆ. ಇದು ಅತ್ಯಂತ ಕಠಿಣ ಶರತ್ತಾಗಿದ್ದು ಮದುವೆ ನಡೆಯುವ ಕುಟುಂಬಸ್ಥರು ಈ ಶರತ್ತನ್ನು ಪಾಲಿಸಲಾಗದೆ ಕಂಗೆಟ್ಟಿದ್ದಾರೆ. ಜೊತೆಗೆ ಬಟ್ಟೆ ಬರೆ, ಚಿನ್ನ, ಅಲಂಕಾರಿಕ ಸಾಮಗ್ರಿಗಳ ಅಂಗಡಿ, ಹೂವಿನ ಸ್ಟಾಲ್ ಗಳನ್ನು ಮುಚ್ಚಿಸಿರುವುದು ಮದುವೆ ನಿಗದಿಯಾಗಿರುವ ಕುಟುಂಬಳನ್ನು ಅತ್ಯಂತ ಸಂಕಷ್ಟಮಯ ಸ್ಥಿತಿಗೆ ತಲುಪಿಸಿದೆ. 



ಈ ಹಿನ್ನಲೆಯಲ್ಲಿ ಸರಕಾರ ಶರತ್ತುಬದ್ದ ಪಾಸ್ ವಿತರಿಸುವ ಕ್ರಮಗಳನ್ನು ಕೈಬಿಡಬೇಕು. ಮದುವೆಗಳಲ್ಲಿ ಭಾಗವಹಿಸುವ ಜನರ ಮಿತಿಯನ್ನು ಕನಿಷ್ಟ ನೂರರಿಂದ ನೂರೈವತ್ತಕ್ಕೆ ಏರಿಸಬೇಕು. ಮದುವೆಯ ಖರೀದಿಗಳಿಗೆ ಅವಕಾಶ ಒದಗಿಸಬೇಕು, ಕೋವಿಡ್ ಶಿಷ್ಟಾಚಾರ ಪಾಲಿಸಿ ಮದುವೆಗಳು ಸರಳವಾಗಿ ನಡೆಯಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.


ಹಾಗೆಯೆ ಜನಸಾಮಾನ್ಯರ ಮದುವೆ ಮನೆ, ಮಂಟಪಗಳಿಗೆ ತಪಾಸಣೆಗೆ ನುಗ್ಗುವ ಅಧಿಕಾರಿ ವರ್ಗ, ಕೆಲವೆಡೆ ಪ್ರಭಾವಿ ವ್ಯಕ್ತಿಗಳ ಕುಟುಂಬದ ಮದುವೆ, ಮೆಹಂದಿಗಳು ಯಾವುದೇ ಅನುಮತಿ ಇಲ್ಲದೆ, ಶಿಷ್ಟಾಚಾರಗಳನ್ನು ಮೀರಿ ನಡೆಯಲು ಅವಕಾಶ ನೀಡಿವೆ. ಈ ತಾರತಮ್ಯ ಸಲ್ಲದು. ಉಡುಪಿಯಲ್ಲಿ ಆಡಿಷನಲ್ ಎಸ್ ಪಿ ಮಗಳ ಮೆಹಂದಿ ಕಾರ್ಯಕ್ರಮ ಅನುಮತಿ ಪಡೆಯದೆ ಕೋವಿಡ್ ಮಾರ್ಗಸೂಚಿ, ಶಿಷ್ಟಾಚಾರ ಉಲ್ಲಂಘಿಸಿ ನಡೆದಿದೆ. 


ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಸಹಿತ ಪ್ರತಿಷ್ಟಿತರು ಭಾಗಿಯಾಗಿರುವ ಕುರಿತು ವರದಿಯಾಗಿದೆ. ಇದು ಅಕ್ಷಮ್ಯ ನಡೆಯಾಗಿದ್ದು, ಸಾಮಾನ್ಯ ನಾಗರಿಕರಿಗೂ, ಅಧಿಕಾರಸ್ಥರಿಗೂ ನಡುವೆ ಮಾಡಿದ ಅಸಮಾನತೆಯ ನಿರ್ಲಜ್ಜ ಉದಾಹರಣೆಯಾಗಿದೆ. ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ಜಿಲ್ಲಾಧಿಕಾರಿ, ಅಡಿಷನಲ್ ಎಸ್ ಪಿ ಸಹಿತ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಆ ಮೂಲಕ ಈ ಪ್ರಕರಣದ ಕುರಿತು ಎದ್ದಿರುವ ಜನಾಗ್ರಹಕ್ಕೆ ನ್ಯಾಯ ಒದಗಿಸಬೇಕು ಎಂದು ಡಿವೈಎಫ್ಐ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article