ರಾಂಚಿ: ವರ್ಣರಂಜಿತ ರಾಜಕಾರಣಿ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಜೈಲಿನಿಂದ ಬಿಡುಗಡೆಯ ಭಾಗ್ಯ ಸನ್ನಿಹಿತವಾಗಿದೆ.
ಬಹು ಕೋಟಿ ಮೇವು ಹಗರಣದ ಆರೋಪಿಯಾಗಿರುವ ಲಾಲೂ ಅವರಿಗೆ ದುಮ್ಕಾ ಖಜಾನೆಯಿಂದ ಅಕ್ರಮ ಹಣ ಪಡೆದ ಆರೋಪ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ.
ಜೈಲು ಶಿಕ್ಷೆಗೆ ಗುರಿಯಾಗಿ ಇದೀಗ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಪ್ರಸಾದ್ ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳ ಪೈಕಿ ಮೂರರಲ್ಲಿ ಈಗಾಗಲೇ ಜಾಮೀನು ಪಡೆದಿದ್ದಾರೆ.
ನಾಲ್ಕನೇ ಪ್ರಕರಣದಲ್ಲೂ ಜಾಮೀನು ಪಡೆದಿರುವುದರಿಂದ ಅವರ ಬಿಡುಗಡೆಯ ಹಾದಿ ಸುಗಮವಾಗಿದೆ. ಕಳೆದ ಮೂರು ವರ್ಷ ಹಾಗೂ ನಾಲ್ಕು ತಿಂಗಳು ಅವರು ಜೈಲಿನಲ್ಲಿದ್ದು, ಆರ್‌ಜೆಡಿ ನಾಯಕ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ನಿರೀಕ್ಷೆ ಇದೆ.
ಜಾಮೀನು ಅವಧಿಯಲ್ಲಿ ವಿದೇಶಕ್ಕೆ ಪ್ರಯಾಣಿಸುವಂತಿಲ್ಲ. ವಿಳಾಸ ಮತ್ತು ಮೊಬೈಲ್ ನಂಬರ್ ಬದಲಿಸುವಂತಿಲ್ಲ ಎಂಬ ಷರತ್ತನ್ನು ಜಾಮೀನು ಅರ್ಜಿ ಮಂಜೂರು ಮಾಡಿದ ಹೈಕೋರ್ಟ್ ವಿಧಿಸಿದೆ.
ಸೋಮವಾರ ಸಿಬಿಐ ವಿಶೇಷ ನ್ಯಾಯಾಲಯದ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಮತ್ತೆ ಬಿಡುಗಡೆಯ ಆದೇಶವನ್ನು ಜೈಲಾಧಿಕಾರಿಗಳಿಗೆ ರವಾನಿಸಲಾಗುವುದು ಎಂದು ಲಾಲು ಅವರ ವಕೀಲರು ತಿಳಿಸಿದ್ದಾರೆ.