-->

farewell to DK SP Laxmiprasad | ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ದಕ್ಷ ಅಧಿಕಾರಿ ಲಕ್ಷ್ಮೀಪ್ರಸಾದ್‌ಗೆ ವಿದಾಯ

farewell to DK SP Laxmiprasad | ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ದಕ್ಷ ಅಧಿಕಾರಿ ಲಕ್ಷ್ಮೀಪ್ರಸಾದ್‌ಗೆ ವಿದಾಯ




ಬರಹ: ಗೌತಮ್ ಶೆಟ್ಟಿ, ಹಿರಿಯ ಪತ್ರಕರ್ತರು


ಅದು ಕೋವಿಡ್-19 ಲಾಕ್ ಡೌನ್ ನ ಮೇ ತಿಂಗಳ ಅವಧಿ. ಕೆಲಸದ ನಿಮಿತ್ತ ಮಂಗಳೂರಿಗೆ ಬಂದಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರಿಗೆ ಮರಳಲು ಹಾತೊರೆಯುತ್ತಿದ್ದ ಸಮಯ. ಆ ವೇಳೆಯಲ್ಲಿ ತಮ್ಮ ಊರುಗಳಿಗೆ ಇಂದು ರೈಲು ಹೊರಡುತ್ತಿದೆ ಎನ್ನುವ ಮಾತು, ವದಂತಿಗಳನ್ನು ನಂಬಿ ನೂರಾರು ಸಂಖ್ಯೆಯಲ್ಲಿ ಅಮಾಯಕ ಕಾರ್ಮಿಕರು ಪ್ರತೀ ದಿನ ರೈಲು ನಿಲ್ದಾಣದಲ್ಲಿ ಜಮಾಯಿಸುತ್ತಿದ್ದರು. ಅಂತೆಯೇ ಮೇ 12ರಂದು ಕೂಡ ರಾತ್ರಿ ವೇಳೆಗೆ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಮಂಗಳೂರಿನಿಂದ ರೈಲು ಹೊರಡುತ್ತಿದೆ ಎಂದು ನಿಲ್ದಾಣಕ್ಕೆ ಬಂದು, ರೈಲು ಇಲ್ಲವೆಂದು ಕಾಲ್ನಡಿಗೆಯಲ್ಲೇ ತಮ್ಮ ಸಾಮಾಗ್ರಿಗಳ ಸಹಿತ ತಮ್ಮ ಊರುಗಳತ್ತ ಹೊರಟಿದ್ದರು. 


ಈ ಬಗ್ಗೆ ರಾತ್ರಿ ಸುಮಾರು 10 ಗಂಟೆಯ ವೇಳೆಗೆ V4 News ಕಚೇರಿಗೆ ಬಂದ ಕರೆಯ ಹಿನ್ನೆಲೆಯಲ್ಲಿ ಕ್ಯಾಮೆರಾ ಪರ್ಸನ್ ನಾಗರಾಜ್ ಜೊತೆಗೆ ನಾನು ವರದಿಗಾರಿಕೆಗೆ ತೆರಳಿದ್ದೆ. ಹೆದ್ದಾರಿಯ ಮೂಲಕ ಪ್ರಯಾಣ ಆರಂಭಿಸಿದ್ದ ಕಾರ್ಮಿಕರನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ, ಕಾರ್ಮಿಕರ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಅಂದಿನ ಪೊಲೀಸ್ ಆಯುಕ್ತರಾಗಿದ್ದ ಡಾ| ಹರ್ಷ ಪಿ.ಎಸ್, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು ಸಹಿತ ಎಲ್ಲರೂ ಅಡ್ಯಾರ್ ಕಟ್ಟೆ ಬಳಿ ಕಾರ್ಮಿಕರನ್ನು ಮನವೊಲಿಸಲು ಪ್ರಯತ್ನ ಮಾಡುತ್ತಿದ್ದರು. ಎಲ್ಲರ ಪ್ರಯತ್ನಗಳು ಮುಂದುವರೆದು ವಿಫಲರಾಗುತ್ತಿದ್ದಂತೆ ಕಾರ್ಮಿಕರ ಪ್ರಯಾಣ ಕಾಲ್ನಡಿಗೆಯಲ್ಲೇ ಮುಂದುವರೆದಿತ್ತು. ಅಷ್ಟರಲ್ಲಿ ಮಾಹಿತಿ ತಿಳಿದ ದ.ಕ. ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ಅವರು ಕೂಡ ಅಲ್ಲಿಗೆ ಬಂದರು. ನೇರವಾಗಿ ಕಾರ್ಮಿಕರ ನಡುವೆ ತೆರಳಿ ಅವರ ಪ್ರಮುಖರ ಜೊತೆಗೆ ಮನವೊಲಿಕೆಗೆ ನಿಂತರು. ಅಷ್ಟಿದ್ದರೂ ಕಾರ್ಮಿಕರ ಒಂದು ಗುಂಪು ಕಾಲ್ನಡಿಗೆಯಲ್ಲಿ ಫರಂಗಿಪೇಟೆಯನ್ನೂ ದಾಟಿ ಮುಂದುವರೆದಿತ್ತು. ಕೊನೆಗೆ ಅಲ್ಲಿಯವರೆಗೂ ತೆರಳಿದ ಎಸ್ಪಿ ಲಕ್ಷ್ಮೀಪ್ರಸಾದ್ ಅವರು ಕಾರ್ಮಿಕರ ನಡು-ನಡುವೆ ತೆರಳಿ ಅವರಿಗೆ ವಸ್ತುಸ್ಥಿತಿಯನ್ನು ವಿವರಿಸಿ, ಅವರ ಮನವೊಲಿಸಲು ಶತ ಪ್ರಯತ್ನಗಳನ್ನು ನಡೆಸಿದರು.


 ಕಾಲ್ನಡಿಗೆಯಲ್ಲಿ ಊರು ಸೇರಲು ಸಾಧ್ಯವಿಲ್ಲ, ಸಂಬಂಧಪಟ್ವವರ ಜೊತೆಗೆ ಮಾತುಕಥೆ ನಡೆಸಿ ನಿಮ್ಮನ್ನು ರೈಲಿನ ಮೂಲಕವೇ ನಿಮ್ಮ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎನ್ನುವುದನ್ನು ಪರಿಪರಿಯಾಗಿ ಅವರಿಗೆ ಮನವರಿಕೆ ಮಾಡಿಕೊಟ್ಟರು. ಹಲವು ತಾಸುಗಳ ಮನವೊಲಿಕೆಯ ಬಳಿಕ ಕೊನೆಗೂ ಕಾರ್ಮಿಕರು ಉಳಿದುಕೊಳ್ಳಲು ಒಪ್ಪಿಕೊಂಡರು. ರಾತ್ರೋರಾತ್ರಿ ಕೆಎಸ್ಸಾರ್ಟಿಸಿಯಿಂದ 10-20 ಬಸ್ಗಳನ್ನು ತರಿಸಿ ಅವುಗಳಲ್ಲಿ ಹಲವು ಟ್ರಿಪ್ಗಳಲ್ಲಿ ಕಾರ್ಮಿಕರನ್ನು ಬಂಟ್ವಾಳದ ಬಂಟರ ಭವನ ಸಭಾಂಗಣಕ್ಕೆ ಕರೆತರಲಾಯಿತು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಮತ್ತು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಜೊತೆಗೆ ಕೆಲವು ಸ್ವಯಂಸೇವಾ ಸಂಸ್ಥೆಗಳ ಸಹಕಾರದಲ್ಲಿ ಅಷ್ಟೂ ಕಾರ್ಮಿಕರಿಗೆ ರಾತ್ರಿ ಊಟ, ವಸತಿಯ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಖುದ್ದು ಎಸ್ಪಿಯವರೇ ಮುಂದೆ ನಿಂತು ಈ ಎಲ್ಲಾ ಕೆಲಸಗಳ ನೇತೃತ್ವವನ್ನು ವಹಿಸಿಕೊಂಡರು. ಎಲ್ಲಾ ಕಾರ್ಮಿಕರಿಗೆ ವ್ಯವಸ್ಥೆಗಳಾದ ಬಳಿಕವೇ ಅವರು ಅಲ್ಲಿಂದ ಮರಳಿದ್ದು. ಇಷ್ಟೆಲ್ಲಾ ಆಗುವಾಗ ಸಮಯ ರಾತ್ರಿ 2 ಗಂಟೆ. ಇವೆಲ್ಲವನ್ನೂ ನಮ್ಮ ಕ್ಯಾಮೆರಾ ರೆಕಾರ್ಡ್ ಮಾಡಿಕೊಂಡಿತ್ತು.


ಮರುದಿನ ಬೆಳಗ್ಗೆ ಎಂದಿನಂತೆ ನ್ಯೂಸ್ ಬುಲೆಟಿನ್ ಆಂಕರಿಂಗ್ ಗೆ ಕೂತಿದ್ದೆ. ನ್ಯೂಸ್ ಇನ್ಚಾರ್ಜ್ ಜವಾಬ್ದಾರಿ ನನ್ನದೇ ಆಗಿದ್ದಿದುರಿಂದ ರಾತ್ರಿಯ ಅಷ್ಟೂ ವಿದ್ಯಾಮಾನಗಳನ್ನು ಯಥಾವತ್ತಾಗಿ ನೇರಪ್ರಸಾರದಲ್ಲಿ ಟೆಲಿಕಾಸ್ಟ್ ಮಾಡಿದೆವು. ಎಲ್ಲವೂ ಮುಗಿದು ಮಧ್ಯಾಹ್ನದ ವೇಳೆ ಕಚೇರಿಯ ಲ್ಯಾಂಡ್ ಲೈನ್ ನಂಬರ್ ಗೆ ಎಸ್ಪಿ ಕಚೇರಿಯಿಂದ ಕರೆಬಂದಿತ್ತು. ಕಾರ್ಮಿಕರ ಬಗ್ಗೆ ವರದಿ ಮಾಡಿದವರು ಯಾರು? ಅವರ ನಂಬರ್ ಬೇಕೆಂದು ನನ್ನ ಮೊಬೈಲ್ ನಂಬರ್ ನ್ನು ಪಡೆದುಕೊಂಡರು. ವಿಚಾರ ನನಗೆ ತಿಳಿದಾಗ ಏನಾಗಿರಬಹುದು ಎನ್ನುವ ಯೋಚನೆ ಕಾಡಲಾರಂಭಿಸಿತ್ತು. ಸ್ವಲ್ಪ ಹೊತ್ತಿನಲ್ಲೇ ಎಸ್ಪಿಯವರ ಮೊಬೈಲ್ ಸಂಖ್ಯೆಯಿಂದ ಒಂದು ಸಂದೇಶ ಬಂತು. ಏನಿರಬಹುದಪ್ಪಾ ಎಂದು ತೆರೆದು ಓದಿದ ಬಳಿಕ ಏನು ಹೇಳಬೇಕೆಂದು ತಿಳಿಯಲಿಲ್ಲ. ನಮ್ಮ ರಾತ್ರಿಯ ಪರಿಶ್ರಮ ಮತ್ತು ಯಥಾವತ್ ವರದಿಗಾರಿಕೆಯನ್ನು ಕಂಡು ಎಸ್ಪಿಯವರು ಅಭಿನಂದಿಸಿ ಸಂದೇಶವನ್ನು ಕಳಿಸಿದ್ದರು. ನಮ್ಮಂತಹ ಸಣ್ಣ ಪತ್ರಕರ್ತರ ಶ್ರಮವನ್ನು ಐಪಿಎಸ್ ದರ್ಜೆಯ ಅಧಿಕಾರಿಯೊಬ್ಬರು ಗುರುತಿಸಿ ಪ್ರಶಂಸಿಸಿದ್ದು ಕಂಡು ಹೃದಯ ತುಂಬಿ ಬಂದಿತ್ತು.





ನಾನು ಯಾವ ವ್ಯಕ್ತಿ/ಅಧಿಕಾರಿಯ ಬಗ್ಗೆಯೂ ನಾನು ಪೋಸ್ಟ್ ಹಾಕಿಲ್ಲ, ಬರೆದಿಲ್ಲ. ಎಸ್ಪಿ ಲಕ್ಷ್ಮೀಪ್ರಸಾದ್ ಅವರ ಬಗ್ಗೆ ಬರೆಯಬೇಕೆನಿಸಿದ್ದು ಈ ವಿಚಾರಕ್ಕಲ್ಲ. ಲಕ್ಷ್ಮೀ ಪ್ರಸಾದ್ ಅವರ ಒಳಗಿನ ಮಾನವೀಯ ಅಂತಃಕರಣಕ್ಕೆ. ಆ ನಡುರಾತ್ರಿಯಲ್ಲಿ ಸ್ವಲ್ಪವೂ ತಾಳ್ಮೆಯನ್ನು ಕಳೆದುಕೊಳ್ಳದೆ, ಆ ಕಾರ್ಮಿಕರ ನಡುವೆ ಅವರ ಪರಿಸ್ಥಿತಿಯನ್ನೂ ಅರ್ಥಮಾಡಿಕೊಂಡು ಅವರ ಮನವೊಲಿಸಲು ಯತ್ನಿಸುತ್ತಿದ್ದುದನ್ನು ಕಂಡಾಗ ನನಗೆ ಕಂಡಿದ್ದು ಅದುವೇ. ಬಹುಶಃ ಬೇರೆ ಯಾರೇ ಆಗಿದ್ದರೂ ಅಷ್ಟೊಂದು ಸಹನೆಭರಿತ ಪ್ರಯತ್ನಗಳನ್ನು ಮಾಡುತ್ತಿರಲಿಲ್ಲವೇನೋ? ಆದರೆ ಲಕ್ಷ್ಮೀಪ್ರಸಾದ್ ಅವರು ಮಾಡಿದರು. ಅದರ ಜೊತೆಗೆ ಜಿಲ್ಲೆಯಲ್ಲಿ ದಕ್ಷವಾಗಿ ಕರ್ತವ್ಯವನ್ನು ನಿಭಾಯಿಸಿದ್ದಾರೆ. 


ಬಂಟ್ವಾಳದ ಹತ್ಯೆ ಪ್ರಕರಣ, ಬೆಳ್ತಂಗಡಿ ಬಾಲಕನ ಅಪಹರಣ ಪ್ರಕರಣ ಹೀಗೆ ಇನ್ನೂ ಅನೇಕ ಕ್ಲಿಷ್ಟ ಕೇಸ್ಗಳನ್ನು ಯಾವುದೇ ಒತ್ತಡ, ಲಾಬಿಗೆ ಮಣಿಯದೆ ನಿಷ್ಪಕ್ಷಪಾತವಾಗಿ, ಕ್ಷಿಪ್ರವಾಗಿ ತಮ್ಮ ತಂಡದ ಜೊತೆಗೆ ತನಿಖೆ ನಡೆಸಿದ್ದಾರೆ. ಈ ಮೂಲಕ ತಾವು ಒಬ್ಬ ದಕ್ಷ ಮತ್ತು ಪ್ರಚಾರದಿಂದ ದೂರ ಉಳಿಯುವ ಅಧಿಕಾರಿ ಎಂದು ನಿರೂಪಿಸಿದ್ದಾರೆ. ಇದೀಗ ಶಿವಮೊಗ್ಗ ಜಿಲ್ಲೆಗೆ ಲಕ್ಷ್ಮೀಪ್ರಸಾದ್ ಅವರು ವರ್ಗಾವಣೆಯಾಗಿದ್ದಾರೆ. ಅವರ ಮುಂದಿನ ಪಯಣವೂ ಸುಗಮವಾಗಿರಲಿ. ಶುಭವಾಗಲಿ. ಶಿವಮೊಗ್ಗ ಜಿಲ್ಲೆಗೂ ದಕ್ಷ ಸೇವೆ ಸಿಗಲಿ ಎನ್ನುವುದು ನನ್ನ ಹಾರೈಕೆಗಳು.

Ads on article

Advertise in articles 1

advertising articles 2

Advertise under the article