ಬರಹ: ರಾಚಪ್ಪ ಮನೋಜ್, ಹಿರಿಯ ಪತ್ರಕರ್ತರು
ಕೊರೋನಾ ಎರಡನೇ ಅಲೆ ಸುನಾಮಿಯಂತೆ ಬಂದು ಅಪ್ಪಳಿಸಿದೆ.. ಕೊರೋನಾ ಅಬ್ಬರಿಸುತ್ತಿರೋ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೈ ಮರೆತು ತಮ್ಮ ಜವಾಬ್ದಾರಿ ಮರೆತಿವೆ.. ಮೊದಲ ಕೊರೋನಾ ಅಲೆ ನಿಯಂತ್ರಣ ಮಾಡಿ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ತಮ್ಮ ಬೆನ್ನನ್ನು ಸರ್ಕಾರಗಳು ತಟ್ಟಿಕೊಂಡು ಸುಮ್ಮನಾದವು..
ಎರಡನೇ ಅಲೆ ಅಪ್ಪಳಿಸುವ ಸೂಚನೆ ಇದ್ದರೂ ಪ್ರಮುಖವಾಗಿ ಕೇಂದ್ರ ಸರ್ಕಾರ ನಿದ್ದೆಗೆ ಜಾರಿದೆ. ಕೊರೋನಾ ನಿಯಂತ್ರಣ ಸಂಬಂಧ ಪಾಲಿಸಬೇಕಾದ ನಿಯಮಗಳನ್ನು ಸರ್ಕಾರ ಜಾರಿಗೆ ತರಲೇ ಇಲ್ಲ. ಸೋಂಕಿತರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.
ಸೋಂಕಿತರ ಜೊತೆ ಸಂಪರ್ಕ ಸಾಧಿಸಿದವರನ್ನು ಹುಡುಕುವ ಪ್ರಯತ್ನ ಮಾಡಲಿಲ್ಲ. ಇನ್ನೂ ಕ್ವಾರಂಟೈನ್ ಮಾತೇ ಇಲ್ಲ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿಲ್ಲ. ಬದಲಿಗೆ ಜನರ ಮೇಲೆ ಗೂಬೆ ಕೂರಿಸಲಾಯ್ತು. ನಾಯಕರ ದೂರದೃಷ್ಟಿಯಿಂದ ಕೊರೋನಾ ಮೊದಲ ಅಲೆ ನಿಯಂತ್ರಿಸಲಾಯ್ತು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದವರು ಇಂದು ಮೌನಕ್ಕೆ ಶರಣಾಗಿದ್ದಾರೆ.
ಎರಡನೇ ಅಲೆ ಬರುತ್ತೆ ಅನ್ನೋ ಸಾಮಾನ್ಯ ಜ್ಞಾನವೂ ನಮ್ಮ ನಾಯಕರಿಗೆ ಇರಲಿಲ್ಲ ಅನ್ನೋದು ಸತ್ಯ. ದೀಪ ಹಚ್ಚಿ, ಗಂಟೆ ಬಾರಿಸಿ ಎರಡನೇ ಅಲೆ ನಿಯಂತ್ರಣ ಮಾಡಬಹುದಿತ್ತು ಅನ್ಸುತ್ತೆ. ಕೊರೋನಾ ನಿಯಂತ್ರಣಕ್ಕೆ ಬೇಕಾಗಿರೋದು ವೈಜ್ಞಾನಿಕ ಪರಿಹಾರ. ವ್ಯಾಕ್ಸಿನ್ ವಿಚಾರದಲ್ಲಿ ಕೇಂದ್ರದ ನಡೆ ನಿಜಕ್ಕೂ ಶಾಕಿಂಗ್. ಮನೆಗೆ ಮಾರಿ ಊರಿಗೆ ಉಪಕಾರಿ ಅನ್ನೋ ರೀತಿಯಲ್ಲಿ ನಡೆದುಕೊಂಡ ಕೇಂದ್ರ, ಬೇರೆ ಬೇರೆ ರಾಷ್ಟ್ರಗಳಿಗೆ ವ್ಯಾಕ್ಸಿನ್ ನೀಡಿ ತಮ್ಮ ಜನರನ್ನೇ ಕೊರೋನಾ ಕೂಪಕ್ಕೆ ತಳ್ಳಿದ್ದು ಅರ್ಧವಾಗುತ್ತಿಲ್ಲ.
ವ್ಯಾಕ್ಸಿನ್ ಅಭಿಯಾನದಲ್ಲೂ ಕೇಂದ್ರ ಎಡವಿದೆ.. ಮುಕ್ತ ಮಾರುಕಟ್ಟೆಗೆ ವ್ಯಾಕ್ಸಿನ್ ಬಿಡುಗಡೆ ಮಾಡಲು ಹಿಂದೇಟು ಏಕೆ. ದೇಶದಲ್ಲಿ ಕೊರೋನಾ ಮತ್ತಷ್ಟು ಅಬ್ಬರಿಸುವ ಮುನ್ನ ಕೇಂದ್ರ ಎಚ್ಚೆತ್ತುಕೊಳ್ಳಬೇಕು.. ಕರ್ಫ್ಯೂ ಮತ್ತು ಲಾಕ್ಡೌನ್ ಕೊರೋನಾ ನಿಯಂತ್ರಣಕ್ಕೆ ಪರಿಹಾರ ಅಲ್ಲ. ಆರ್ಥಿಕತೆ, ಮಧ್ಯಮ, ಬಡಜನರ ಬದುಕು ಬೀದಿಗೆ ಬೀಳುತ್ತೆ ಅಷ್ಟೇ..
ಇನ್ನೂ ಮಾಧ್ಯಮಗಳು ಕೊರೋನಾ ವಿಚಾರದಲ್ಲಿ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಬಿಟ್ಟು ಬೆಳಗ್ಗೆಯಿಂದ ರಾತ್ರಿ ತನಕ ಸಾರ್ವಜನಿಕರನ್ನೇ ಟಾರ್ಗೆಟ್ ಮಾಡಿಕೊಂಡಿವೆ. ಕೊರೋನಾ ನಿಯಂತ್ರಿಸಲು ಸಾಧ್ಯವಾಗದ ಸರ್ಕಾರಗಳ ಕಿವಿ ಹಿಂಡುವಷ್ಟು ಧೈರ್ಯ ತೋರುತ್ತಿಲ್ಲ. ಕರ್ಫ್ಯೂ ಜಾರಿ, ಲಾಕ್ ಡೌನ್ ಆಗುತ್ತೆ ಅಂತಾ ದಿನಾ ಕೂಗುಮಾರಿಯಂತೆ ಕಿರುಚಿಕೊಳ್ಳುತ್ತಿವೆ.
ಸ್ವಲ್ಪ ಯೋಚನೆ ಮಾಡಿ ಇನ್ನೊಂದು ಲಾಕ್ಡೌನ್ ನಿಂದ ಆಗುವ ನಷ್ಟವನ್ನು ದೇಶ ಮತ್ತು ಜನರು ತಡೆದುಕೊಳ್ಳಲು ಸಾಧ್ಯ ಇದೆಯಾ..ಮತ್ತೊಂದು ಲಾಕ್ಡೌನ್ ಆದ್ರೆ, ಲಾಕ್ ಡೌನ್ ಲಾಕ್ ಡೌನ್ ಅಂತಾ ಬ್ರೇಕಿಂಗ್ ಹಾಕುವ ಪತ್ರಕರ್ತ ಕೂಡ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಚ್ಚರ ಇರಲಿ..TRP ಗಾಗಿ ಲಾಕ್ಡೌನ್ ಬೇಕಾ.. ಈಗಾಗಲೇ ಸಾಕಷ್ಟು ಪತ್ರಕರ್ತರು ಬೀದಿಗೆ ಬಿದ್ದಿದ್ದಾರೆ.
ಅರ್ಥ ಮಾಡಿಕೊಳ್ಳಿ. ಜನರು ಮಾಸ್ಕ್ ಹಾಕಿಲ್ಲ ಅಂತ ಕಿರುಚಿಕೊಳ್ಳುವ ಮಾಧ್ಯಮಗಳು ಪ್ರಧಾನಿ, ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು ರಾಜಕಾರಣಿಗಳು ಮಾಸ್ಕ್ ಯಾಕೆ ಹಾಕಿಲ್ಲ ಎಂದು ಪ್ರಶ್ನೆ ಮಾಡುವುದಿಲ್ಲ. ಕೊರೋನಾ ನಿಯಂತ್ರಣ ವಿಷಯದಲ್ಲಿ ಜನರ ಪಾತ್ರವೂ ಇದೆ.. ಆದ್ರೆ ಅವರಿಗೆ ತಿಳಿ ಹೇಳುವ ಮಾಧ್ಯಮಗಳು ಮತ್ತು ಸರ್ಕಾರಗಳು ಬೇಕಾಗಿವೆ..
ಇಲ್ಲಿ ಎರಡು ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.. ಒಂದು ಮಾಸ್ಕ್ ಹಾಕಿಲ್ಲ ಅಂತಾ ನಾರ್ವೆ ಪ್ರಧಾನಿ ಅವರಿಗೆ ದಂಡ ಹಾಕಲಾಯ್ತು.. ಇಂತಹದೊಂದು ವ್ಯವಸ್ಥೆ ನಮ್ಮ ದೇಶದಲ್ಲಿ ಜಾರಿಗೆ ಬರಬೇಕು..
ಎರಡನೇಯದು, ಬ್ರಿಟನ್ ರಾಜ ಫಿಲಿಪ್ ನಿಧನರಾದಾಗ ಬಿಬಿಸಿ ಚಾನೆಲ್, ಎಲ್ಲಾ ನ್ಯೂಸ್ ಗಳನ್ನು ಬದಿಗೊತ್ತಿ ರಾಜನ ಸಾವಿನ ಸುತ್ತ ಸುದ್ದಿ ಪ್ರಸಾರ ಮಾಡಲಾರಂಭಿಸಿತು.. ಆಗ ಬಿಬಿಸಿ ಕಚೇರಿಗೆ ಸಾರ್ವಜನಿಕರಿಂದ ದೂರಿನ ಸುರಿಮಳೆ ಆಯ್ತು.. ರಾಜನ ಸಾವಿನ ಸುದ್ದಿ ಬಿಟ್ರೆ ಬೇರೆ ಸುದ್ದಿ ಇಲ್ವಾ ಎಂದು ಜನರು ಪ್ರಶ್ಸಿಸಿದ್ರು..
ಕೂಡಲೇ ಎಚ್ಚೆತ್ತ ಬಿಬಿಸಿ ರಾಜನ ಸಾವಿನ ಬಗ್ಗೆ ಮಾಡಿಕೊಂಡಿದ್ದ ಕೆಲವು ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಸುದ್ದಿಗಳತ್ತ ಗಮನಹರಿಸಿತು.. ಏಕೆ ಈ ಎರಡು ವಿಚಾರ ಮುಖ್ಯ ಅಂದ್ರೆ, ಆಡಳಿತ ನಡೆಸುವವರಿಗೂ ದಂಡ ಬೀಳತ್ತೆ ಇನ್ನೂ ನಾವೇನು ಮಹಾ ಅಂತಾ ಜನರು ಸರಿದಾರಿಗೆ ಬರ್ತಾರೆ.. ಇನ್ನೂ ಸ್ವಯಂ ನಿಯಂತ್ರಣ ಹಾಕಿಕೊಳ್ಳದ ಮಾಧ್ಯಮಗಳಿಗೆ ವಾರ್ತಾ ಸಚಿವಾಲಯ ಕಡಿವಾಣ ಹಾಕಿದ್ರೆ ಸುಳ್ಳು ಸುದ್ದಿ, ಪ್ರಚೋದಿತ ಸುದ್ದಿಗಳ ಪ್ರಸಾರಕ್ಕೆ ಬ್ರೇಕ್ ಬೀಳುತ್ತೆ.
