ಮಂಗಳೂರು: ಡೊಂಗರಕೇರಿಯ ಕೆನರಾ ಹೈಸ್ಕೂಲ್ ಮೈನ್ ಇಲ್ಲಿನ ಮುಖ್ಯೋಪಾಧ್ಯಾಯರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ ಕಾಂತಾವರ ವೆಂಕಟೇಶ್ ಕಾಮತ್ ವಯೋ ಸಹಜ ಅಸ್ವಸ್ಥತೆಯಿಂದ ನಿಧನ ಹೊಂದಿದ್ದಾರೆ.
ಕೆಲ ದಿನಗಳ ಹಿಂದೆ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರು ಪತ್ನಿ ಹಾಗೂ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
ನ್ಯೂ ಚಿತ್ರ ಥಿಯೇಟರ್ ಬಳಿ ಫ್ಲೋರ್ ಮಿಲ್ ನಡೆಸುತ್ತಿದ್ದ ಕುಟುಂಬದಲ್ಲಿ ಜನಿಸಿದ ವೆಂಕಟೇಶ್ ಕಾಮತ್ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ನಗರದ ಬಿ.ಇ.ಎಂ. ಸ್ಕೂಲ್‌ನಲ್ಲಿ ಮುಗಿಸಿದ್ದರು. ಬಳಿಕ ಬಿಎಸ್‌ಸಿ ಮತ್ತು ಬಿಎಡ್‌ನ್ನು ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಮುಗಿಸಿದರು.
1970ರಲ್ಲಿ ಕೆನರಾ ಹೈಸ್ಕೂಲ್ ಸೇರಿದ ಅವರು, ಗಣಿತ, ವಿಜ್ಞಾನ ಹಾಗೂ ಕನ್ನಡವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿದ್ದರು. 1976ರಲ್ಲಿ ತಮ್ಮ 31ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಕೆನರಾ ಮೈನ್ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯರಾಗಿ ನಿಯುಕ್ತರಾದರು. ಅಲ್ಲಿಂದ ಸುಮಾರು 28 ವರ್ಷಗಳ ಕಾಲ ಈ ಹುದ್ದೆಯಲ್ಲಿ ಇದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಜೀವನದ ದಾರಿದೀಪವಾಗಿ ಬೆಳಗಿದರು.
1991ರಲ್ಲಿ ಕೆನರಾ ಹೈಸ್ಕೂಲ್‌ನ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಅವರು ಮುಖ್ಯೋಪಾಧ್ಯಾಯರಾಗಿ ಉತ್ತಮ ಕಾರ್ಯ ನಿರ್ವಹಿಸಿದರು. ಸರಳ, ಸಜ್ಜನರಾಗಿ ಎಲ್ಲರಿಗೂ ಮಾದರಿಯಾಗುವ ಜೀವನ ನಡೆಸಿದರು.
ಸ್ವಯಂ ನಿವೃತ್ತಿ ಪಡೆದು ಬಳಿಕ ಸುಮಾರು 17 ವರ್ಷಗಳಿಂದ ರಥಬೀದಿಯ ಕುದ್ಕೋರಿ ಮಹಾಮಾಯ ದೇವಾಲಯದ ಟ್ರಸ್ಟಿಯಾಗಿ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು.