ಮಂಗಳೂರು: ಉತ್ತರಕನ್ನಡ ಸಂಸದ, ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.
ಹಲವು ವರ್ಷಗಳಿಂದ ಕಾಡುತ್ತಿದ್ದ ತೀವ್ರವಾದ ಬೆನ್ನುನೋವು ಮತ್ತು ಕಾಲು ನೋವಿನಿಂದ ಬಳಲುತ್ತಿದ ಸಂಸದರು ಮಂಗಳೂರಿನ ಕೆ.ಎಸ್ ಹೆಗಡೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಅನಂತಕುಮಾರ್ ಹೆಗಡೆ ಅವರ ಆರೋಗ್ಯದ ಬಗ್ಗೆ ಆಪ್ತ ಸಹಾಯಕ ಸುರೇಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಕೆಲವು ತಿಂಗಳುಗಳಿಂದ ಬೆನ್ನು ನೋವು ಮತ್ತು ಕಾಲು ನೋವು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಕೆ.ಎಸ್ ಹೆಗಡೆ ಆಸ್ಪತ್ರೆಯ ತಜ್ಞ ವೈದ್ಯ ಡಾ.ವಿಕ್ರಮ್ ಶೆಟ್ಟಿ ತಕ್ಷಣವೇ ಕಾಲಿನ ಶಸ್ತ್ರಚಿಕಿತ್ಸೆ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿದ್ದರು.
ಇದೀಗ ಕೆಲವು ದಿನಗಳ ಹಿಂದೆ ನಡೆದ ಶಸ್ತ್ರ ಚಿಕಿತ್ಸೆ ನಂತರ ಸಂಸದರು ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಗೊಂಡು ತಮ್ಮ ದೆಹಲಿ ನಿವಾಸಕ್ಕೆ ತೆರಳಿ ಕೆಲ ದಿನಗಳ ಕಾಲ ಅಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.