-->
Alvas News | ಕುವೆಂಪು ಸಾಹಿತ್ಯ ಸಾಮಾಜಿಕ ವ್ಯವಸ್ಥೆಗಳ ಪ್ರತಿಬಿಂಬ': ಕುಲಪತಿ ಡಾ.ಸ.ಚಿ.ರಮೇಶ್

Alvas News | ಕುವೆಂಪು ಸಾಹಿತ್ಯ ಸಾಮಾಜಿಕ ವ್ಯವಸ್ಥೆಗಳ ಪ್ರತಿಬಿಂಬ': ಕುಲಪತಿ ಡಾ.ಸ.ಚಿ.ರಮೇಶ್


ಮೂಡುಬಿದಿರೆ: `ಒಬ್ಬ ಮನುಷ್ಯನಿಗೆ ಕಾವ್ಯದ ಅಧ್ಯಯನ ತುಂಬಾ ಮುಖ್ಯ. ವಿವಿಧ ಕ್ಷೇತ್ರಗಳಲ್ಲಿ ಪರಿಣತರಾಗಿ ನಾಡು ಕಟ್ಟಲು ಸಾಹಿತ್ಯದ ಅರಿವು ಅವಶ್ಯ. ಒಂದು ಉತ್ತಮ ಸಾಹಿತ್ಯ ನಮ್ಮ ಬದುಕು ಹೇಗೆ ಇರಬೇಕೆಂದು ಹೇಳುತ್ತದೆ. ಕುವೆಂಪುರವರ ಸಾಹಿತ್ಯ ಕೃತಿಗಳು ಮನುಜನಾಗಲಿ ಅಥವಾ ಯಾವುದೇ ಜೀವಿಗಳಾಗಲಿ ಎಲ್ಲರೂ ಸಮಾನರೆಂಬ ತತ್ವವನ್ನು ಸಾರುತ್ತವೆ' ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಸ.ಚಿ ರಮೇಶ್ ಹೇಳಿದರು.


ಕುಪ್ಪಳಿಯ ಕುವೆಂಪು ಕನ್ನಡ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ `ಕುವೆಂಪು ಕಾವ್ಯ: ಅನುಸಂಧಾನದ ನೆಲೆಗಳು' ಕುರಿತ ಎರಡು ದಿನಗಳ ಕರ‍್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕುವೆಂಪು ಸಾಹಿತ್ಯ ಕೃತಿಗಳನ್ನು ವಿಶ್ಲೇಷಿಸಿದ ಅವರು, `ಸಾಲದ ಮಗು', `ಧನ್ವಂತರಿ' ಕ್ರಮವಾಗಿ ಜೀತ ಹಾಗೂ ರೈತಾಪಿ ವರ್ಗದ ಮೇಲೆ ಬೆಳಕು ಚೆಲ್ಲಿದರೆ ಅವರ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಸುಬ್ಬಮ್ಮ ಅಂದಿನ ಸಾಮಾಜಿಕ ವ್ಯವಸ್ಥೆಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಜೊತೆಗೆ ಸಮಾನತೆಯ ಧರ್ಮವನ್ನು ಬೋಧಿಸಿವೆ' ಎಂದರು.


ಆಶಯ ನುಡಿಗಳನ್ನು ಹೇಳಿದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎ.ವಿವೇಕ್ ರೈ, `ಇತ್ತೀಚಿನ ದಿನಗಳಲ್ಲಿ ವೈಚಾರಿಕತೆ ಕ್ಲೀಷೆ ಆಗಿದೆ. ಅದರಿಂದ ವಿದ್ಯಾರ್ಥಿಗಳು ಹೊರ ಬರಬೇಕು. ಯಾವುದೇ ವಿಚಾರವನ್ನು ರಾಜಕೀಯವಾಗಿ ಪರಾಮರ್ಶಿಸುವುದಕ್ಕೂ ಸಾಹಿತ್ಯಾತ್ಮಕವಾಗಿ ಪ್ರಸ್ತುತಪಡಿಸುವುದಕ್ಕೂ ವ್ಯತ್ಯಾಸ ಇದೆ. ಭಾಷಾಜ್ಞಾನ ವಿಸ್ತಾರವಾದಂತೆ ಹೊಸತನವನ್ನು ನಾವು ಕಾಣಬಹುದು. ಕಾವ್ಯ ಕಲ್ಪನೆ ಆಗಿದ್ದು, ಓದುತ್ತಾ ಹೋದಂತೆ ಮನಸ್ಸು ಹಾಗೂ ಆಲೋಚನೆಗಳು ವಿಸ್ತಾರವಾಗುತ್ತವೆ. ಭಾಷೆಯಲ್ಲಿನ ಹೊಸತನವನ್ನು ಕಾವ್ಯದ ಮೂಲಕ ಕಟ್ಟಲು ಸಾಧ್ಯ' ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನಾವು ಯಾವಾಗಲು ನಮ್ಮದೇ ಚೌಕಟ್ಟಿನ ಒಳಗೆ ಯೋಚನೆ ಮಾಡುತ್ತೆವೆ. ಆದರೆ ಆ ಚೌಕಟ್ಟಿನ ಹೊರಗೂ ನಮ್ಮ ಆಲೋಚನೆಗಳನ್ನು ರೂಪಿಸಿಕೊಳ್ಳಬಹುದು ಎಂಬುದಕ್ಕೆ ಕುವೆಂಪು ಅವರ ಸಾಹಿತ್ಯ ಅದ್ಭುತ ನಿದರ್ಶನವಾಗಿದೆ. `ರಾಮಾಯಣ ದರ್ಶನಂ' ಮಹಾಕಾವ್ಯವನ್ನು ಕುವೆಂಪುರವರು ತಮ್ಮದೇ ರೀತಿಯಲ್ಲಿ ಕಟ್ಟಿಕೊಟ್ಟದ್ದನ್ನು ಕಾಣಬಹುದು. ಒಬ್ಬರ ಅಭಿಪ್ರಾಯಗಳಿಗೆ ಸೀಮಿತವಾಗದೆ ನಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದಾಗ ಮಾತ್ರ ಕುವೆಂಪು ಸಾಹಿತ್ಯಕ್ಕೆ ಗೌರವಸಿಗುತ್ತದೆ ಎಂದು ತಿಳಿಸಿದರು.


ಕಮ್ಮಾಟರ್ಥಿಗಳಿಂದ ಕುವೆಂಪು ಕಾವ್ಯ: ಅನುಸಂಧಾನದ ನೆಲೆಗಳು ವಿಷಯದ ಕುರಿತು ಚರ್ಚೆ ನಡೆಯಿತು. ಕುವೆಂಪು ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಎಂ. ಪುಟ್ಟಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿ ಆಯನಾ ರಮಣ್ ನಿರೂಪಿಸಿದರು. 


ವೈಷ್ಣವಿ ಗೋಪಾಲ್ ವಂದಿಸಿದರು. ಬಿವಿಎ ವಿದ್ಯಾರ್ಥಿ ತಿಲಕ್ ಲೀಫ್ ಆರ್ಟ್ ಮೂಲಕ ಮಾಡಿದ ಕಲಾಕೃತಿಯನ್ನು ಕುಲಪತಿ ರಮೇಶ್ ಅವರಿಗೆ ಅರ್ಪಣೆ ಮಾಡಿದರು.

Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg