ಅಪ್ರಾಪ್ತೆ ಜೊತೆ ಜಾಲಿ ರೈಡ್: ಉಂಡಾಡಿ ಗುಂಡ ಯುವಕನಿಗೆ ಪೊಲೀಸರ ಕ್ಲಾಸ್!
ಎಂಟನೇ ತರಗತಿ ವಿದ್ಯಾರ್ಥಿನಿ ಜೊತೆ ಚೆಲ್ಲು ಚೆಲ್ಲಾಗಿ ವರ್ತಿಸುತ್ತಿದ್ದ ಯುವಕ... ಬೈಕ್‌ನಲ್ಲಿ ಜಾಲಿ ರೈಡ್ ಮಾಡುತ್ತಿದ್ದ. ಈಕೆಯೂ ತನ್ನ ಮನೆಯವರ ಕಣ್ಣು ತಪ್ಪಿಸಿ ಈತನೊಂದಿಗೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಳು.
ಇದನ್ನು ಗಮನಿಸಿದ ಸ್ಥಳೀಯರು ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದರು. ಅವರು ತಕ್ಷಣ ಸಹಾಯಕ್ಕಾಗಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಮೊರೆ ಹೋದರು.
ತಕ್ಷಣ ಕಾರ್ಯಪ್ರವೃತ್ತರಾದ ಹಿಂದೂ ಪರ ಸಂಘಟನೆಗಳು ಲವ್ವಿ ಡವ್ವಿ ಎಂಬ ನಾಟಕವಾಡಿ ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಜೋಡಿಯನ್ನು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುವಕ ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ. ಆರ್ಥಿಕ ಆದಾಯವೂ ಇರಲಿಲ್ಲ. ಕೆಲಸ ಇಲ್ಲದೆ ಉಂಡಾಡಿ ಗುಂಡನ ಹಾಗೆ ತಿರುಗಾಡುತ್ತಿದ್ದ ಈತ ಶೋಕಿಗಾಗಿ ಅಪಾರ ಹಣ ವ್ಯಯಿಸುತ್ತಿದ್ದ. ಈ ಸ್ಟೈಲ್ ಮತ್ತು ಬೈಕ್ ರೈಡ್ ಗಮ್ಮತ್ತಿಗಾಗಿ ಎಂಟನೇ ತರಗತಿಯ ವಿದ್ಯಾರ್ಥಿನಿಯೂ ಈತನ ಮೋಡಿಗೆ ಮರುಳಾಗಿದ್ದಳು.
ಬಳಿಕ, ಪೊಲೀಸರು ಈಕೆಗೆ ಬುದ್ಧಿವಾದ ಹೇಳಿ ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದಾರೆ.
ಯುವಕನಿಗೆ ಎಚ್ಚರಿಕೆ ನೀಡಿ, ಇನ್ನೊಮ್ಮೆ ಈ ರೀತಿ ಮಾಡದಂತೆ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.
ಒಟ್ಟಿನಲ್ಲಿ ಈಗಿನ ಯುವ ಪೀಳಿಗೆ ಲವ್, ಶೋಕಿ, ಗಮ್ಮತ್ತಿನಲ್ಲೇ ಕಾಲ ಕಳೆಯುವುದು ದುರಂತವೇ ಸರಿ.
