ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ
ಪಾಲಿಕೆ ಆಯುಕ್ತರು, ಪೊಲೀಸ್ ಕಮಿಷನರ್‌ಗೆ ಮೊರೆ
ಸ್ಥಳೀಯ ನಾಗರಿಕ ಸಮಿತಿಯಿಂದ ದೂರು ನೀಡಲು ಚಿಂತನೆ
ಮಂಗಳೂರು ನಗರದ ಬೆಂದೂರು ಮತ್ತು ಶಿವಭಾಗ್ ವಾರ್ಡ್‌ನಲ್ಲಿ ಪ್ರತ್ಯೇಕವಾಗಿ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ. ಈ ಎರಡು ಕಾಮಗಾರಿಗಳು ಕೆಲವು ತಿಂಗಳ ಹಿಂದೆ ಸರಿಸುಮಾರು ಏಕಕಾಲಕ್ಕೆ ಆರಂಭವಾಗಿದ್ದು, ಎರಡೂ ಕಾಮಗಾರಿಗಳು ವಿಳಂಬಗೊಂಡಿವೆ. ಈ ಎರಡು ರಸ್ತೆಗಳ ಕಾಮಗಾರಿಗಳಿಂದ ಸುಮಾರು 400 ಕುಟುಂಬಗಳು ವಾಸಿಸುವ ಪ್ರದೇಶ ವಾಹನ ಸಂಚಾರಕ್ಕೆ ಅವಕಾಶ ಇಲ್ಲದಂತಾಗಿ ದ್ವೀಪದಂತಾಗಿ ಪರಿಣಮಿಸಿದೆ.
ಎರಡೂ ಕಾಮಗಾರಿಗಳೂ ಪ್ರತ್ಯೇಕವಾಗಿದ್ದು, ಇದನ್ನು ಪ್ರತಿನಿಧಿಸುವ ಕಾರ್ಪೊರೇಟರ್‌ಗಳೂ ಬೇರೆ ಬೇರೆಯೇ ಆಗಿರುತ್ತಾರೆ.
ಒಂದು ಕಾಮಗಾರಿ ಬೆಂದೂರಿನ ಎ.ಜೆ. ಶೆಟ್ಟಿ ಮನೆ ಎದುರುಗಡೆ ಕೊಲಾಸೊ ಆಸ್ಪತ್ರೆಯಿಂದ ಕೆಳಗೆ ಇಳಿಯುವ ರಸ್ತೆಯ ಕಾಂಕ್ರೀಟ್ ಮಾಡುವ ಕಾಮಗಾರಿ. ಎರಡನೆಯದು, ತೆರೆಸಾ ಸ್ಕೂಲ್‌ನಿಂದ ಒಳಗೆ ಹೋಗುವ ಕಾಂಕ್ರೀಟ್ ಕಾಮಗಾರಿ.
ಈ ಎರಡೂ ಕಾಮಗಾರಿಗಳು ಏಕಕಾಲಕ್ಕೆ ನಡೆದಿದ್ದು, ಇದರ ಮೇಲುಸ್ತುವಾರಿ ವಹಿಸಿರುವ ಜೆಇ ಒಬ್ಬರೇ ಆಗಿರುತ್ತಾರೆ. ಈ ಎರಡೂ ರಸ್ತೆಗಳ ಕಾಮಗಾರಿಯಿಂದ ಮೂರು ಫ್ಲ್ಯಾಟ್ ಸೇರಿದಂತೆ ಸುಮಾರು 400 ಕುಟುಂಬಗಳು ನಗರ ಪ್ರದೇಶಕ್ಕೆ ಬರುವ ಸಂಪರ್ಕ ರಸ್ತೆಯನ್ನು ನಿರ್ಬಂಧಿಸಿದಂತಾಗಿದ್ದು, ಪರ್ಯಾಯ ಮಾರ್ಗ ಇಲ್ಲದಂತಾಗಿದೆ. ಕಳೆದ ಎರಡು ತಿಂಗಳಿನಿಂದ ವಾಹನ ಸಂಪರ್ಕದ ಸಮಸ್ಯೆ ಎದುರಿಸಿದ್ದಾರೆ ಎಂದು ನಾಗರಿಕ ಸಮಿತಿ ಅಳಲು ವ್ಯಕ್ತಪಡಿಸಿದೆ.
ಈ ಎರಡು ಕಾಮಗಾರಿ ಒಟ್ಟಿಗೆ ಆರಂಭವಾದರೆ, ಇದನ್ನು ಬಳಸುವ ನಾಗರಿಕರಿಗೆ ಸಮಸ್ಯೆಯಾಗುತ್ತದೆ ಮತ್ತು ಅವರಿಗೆ ಪರ್ಯಾಯ ಮಾರ್ಗ ಇಲ್ಲ ಎಂಬುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೂ ಗೊತ್ತಿದೆ. ಹಾಗಿದ್ದರೂ ಈ ಕಾಮಗಾರಿಯನ್ನು ಆರಂಭಿಸಿದ್ದಾರೆ ಎಂದು ನಾಗರಿಕ ಸಮಿತಿಯ ಮುಖಂಡರು ದೂರಿದ್ದಾರೆ.
ಆದರೆ, ಕಾಮಗಾರಿ ಬೇಗನೆ ಮುಗಿಯುತ್ತದೆ ಎಂಬ ಆಶಾವಾದದಿಂದ ಕೆಲ ದಿನಗಳ ಕಾಲ ಇಲ್ಲಿನ ನಾಗರಿಕರು ಈ ಸಮಸ್ಯೆಯನ್ನು ಉಸಿರುಗಟ್ಟಿಕೊಂಡು ಅನುಭವಿಸಿದ್ದಾರೆ. ಆದರೆ, ಕಾಮಗಾರಿ ವಿಳಂಬವಾಗಿದ್ದು, ಜನ ಸಮಸ್ಯೆಯಿಂದ ಬಳಲಿ ಸಂಕಷ್ಟಕ್ಕೀಡಾಗಿದ್ದಾರೆ. ಕಾಮಗಾರಿ ವಿಳಂಬ ಮಾಡಿರುವ ಪಾಲಿಕೆಯ ಮಹಾಪೌರರು ಸೇರಿದಂತೆ ಜನಪ್ರತಿನಿಧಿಗಳು ಮತ್ತು ಅದರ ಅಧಿಕಾರಿಗಳೇ ನಾಗರಿಕರ ಸಮಸ್ಯೆಗೆ ಮುಖ್ಯ ಕಾರಣವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಆದುದರಿಂದ, ನಾಗರಿಕರಿಗೆ ಮೂಲಭೂತ ಸೌಕರ್ಯವನ್ನು ಬಳಸದಂತೆ ತಡೆಹಿಡಿದ ಈ ಮೇಲ್ಕಂಡ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತಿದ್ದೇನೆ. ಈ ಮೂಲಕ ಇಲ್ಲಿನ ನಾಗರಿಕರನ್ನು ಉಸಿರುಗಟ್ಟಿದ ವಾತಾವರಣದಿಂದ ಬಿಡುಗಡೆ ಮಾಡಬೇಕೆಂದು ವಿನಂತಿಸುತ್ತಿದ್ದೇವೆ ಎಂದು ತಮ್ಮ ದೂರು ಅರ್ಜಿಯಲ್ಲಿ ನಾಗರಿಕ ಸಮಿತಿ ವಿನಂತಿಸಿದೆ.
