ಮಡಿಕೇರಿ: ಅಪ್ಪಚ್ಚು ರಂಜನ್ ಮತ್ತೆ ಮೌನ ಮುರಿದಿದ್ದಾರೆ. ಸಚಿವ ಸಂಪುಟದ ವಿಸ್ತರಣೆಯಲ್ಲಿ ಆದ ಅವಮಾನಕ್ಕೆ ಕೆಂಡಾಮಂಡಲಗೊಂಡಿದ್ದಾರೆ. ಬೇಗುದಿ, ಹತಾಶೆ ಹಾಗೂ ನಿರಾಸೆಯಿಂದ ಕೋಪಗೊಂಡಿರುವ ಅವರು ಬಿ.ಎಸ್. ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಮಾಣಿಕರನ್ನು ಕಡೆಗಣಿಸಲಾಗಿದ್ದು, ಬಕೆಟ್ ಹಿಡಿಯುವವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಅವರು ಬಿಜೆಪಿ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಘದ ಮಾತು ಕೇಳಿ ಪ್ರಾಮಾಣಿಕವಾಗಿ ಸಂಘಟನೆ, ಸೇವೆ ಮಾಡಿಕೊಂಡಿರುವ ನಮ್ಮನ್ನು ಕಡೆಗಣಿಸಲಾಗಿದೆ. ಪಕ್ಷ ವಿಚಾರ ಬೀದಿಗೆ ತರಬಾರದು ಎಂದು ನಾವೆಲ್ಲ ಸುಮ್ಮನಿದ್ದೇವೆ. ಆದರೆ, ಇನ್ನು ಮುಂದೆ ಹಾಗೆ ಆಗಲ್ಲ. ಇನ್ನು ಹತ್ತು ದಿನಗಳೊಳಗೆ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇವೆ ಎಂದು ತಮ್ಮ ರಣತಂತ್ರದ ಬಗ್ಗೆ ಮಾಹಿತಿ ನೀಡಿದರು.
ಇನ್ನೂ ಮುಂದುವರಿದು ಮಾತನಾಡಿದ ಅವರು, ಹುಣಸೂರು ಹುಲಿ, ಶಾಸಕ ಅಡಗೂರು ವಿಶ್ವನಾಥ್ ಹೇಳಿರುವುದು ಸರಿಯಾಗಿಯೇ ಇದೆ. ವಿಶ್ವನಾಥ್ ಅವರನ್ನು ಬಿಜೆಪಿ ನಾಯಕ ಯೋಗೀಶ್ವರ್ ಸೋಲಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹುಣಸೂರು ಉಸ್ತುವಾರಿಯನ್ನು ನಾನೇ ಹೊತ್ತಿದ್ದೆ. ಆ ವೇಳೆ ಎಲ್ಲವನ್ನೂ ನಾನು ಕಣ್ಣಾರೆ ನೋಡಿದ್ದೇನೆ. ಚುನಾವಣೆಗೆ ಎರಡು ದಿನಗಳು ಇರುವಾಗ ಏನೆಲ್ಲ ನಡೆಯಿತು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಪಕ್ಷದ ಅಭ್ಯರ್ಥಿಯನ್ನೇ ಸೋಲಿಸಿದ ವ್ಯಕ್ತಿಗೆ ಸಚಿವ ಸ್ಥಾನ ನೀಡಿರುವುದು ದುರಂತ ಎಂದು ಅಪ್ಪಚ್ಚು ರಂಜನ್ ಕಿಡಿ ಕಾರಿದರು.