ತನಗೆ ಕೈಕೊಟ್ಟು ಪತಿ ಎರಡನೇ ಮದುವೆಯಾಗಿದ್ದಾರೆ ಎಂದು ಮಂಗಳೂರಿನ ವಕೀಲೆಯೊಬ್ಬರು ತನ್ನ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪತಿ ಅಭಿಷೇಕ್ ರೈ ತನಗೆ ಅಧಿಕೃತವಾಗಿ ವಿಚ್ಛೇದನ ನೀಡದೆ ಇನ್ನೊಬ್ಬಾಕೆಯನ್ನು ವರಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮಂಗಳೂರಿನ ವಕೀಲರಾದ ಶ್ರೀಮತಿ ಪೂರ್ಣಿಮಾ ರೈ ಅವರು ಕದ್ರಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಕರಣದ ವಿವರ
ಸುಮಾರು 9 ವರ್ಷಗಳ ಹಿಂದೆ ಅಭಿಷೇಕ್ ರೈ ಜೊತೆ ವಿಟ್ಲ ನಿವಾಸಿ ಪೂರ್ಣಿಮಾ ಮದುವೆಯಾಗಿದ್ದರು. 2019ರ ಆಗಸ್ಟ್ ವೇಳೆ ತಮ್ಮ ಪತಿ ವಿನಾ ಕಾರಣ ತಮ್ಮನ್ನು ತ್ಯಜಿಸಿದ್ದರು ಎನ್ನಲಾಗಿದೆ. 2019ರ ಅಕ್ಟೋಬರ್ ನಲ್ಲಿ ಪತ್ನಿ ಪೂರ್ಣಿಮಾ ತನ್ನ ಪತಿ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಹೋದಾಗ, ಪತಿಯ ತಾಯಿ ಪತಿಯ ಜೊತೆ ಜೀವನ ಮಾಡಲು ಬಿಡದೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತನ್ನ ಮಗನಿಗೆ ಬೇರೆ ಮದುವೆ ಮಾಡಿಸುವುದಾಗಿ ಹೆದರಿಸುತ್ತಿದ್ದರು. ಮದುವೆಯ ಸಂದರ್ಭದಲ್ಲಿ ತಮಗೆ ನೀಡಿದ್ದ ಬಂಗಾರದ ಒಡವೆಗಳನ್ನು ಕೂಡ ವಶದಲ್ಲಿ ಇಟ್ಟುಕೊಂಡು ವರದಕ್ಷಿಣೆ ಹಿಂಸೆ ನೀಡುತ್ತಿದ್ದರು. ಪತಿ ಮತ್ತು ಅವರ ಕುಟುಂಬದವರು ಕೊಲೆ ಬೆದರಿಕೆ ಹಾಕಿದ್ದರು. ಪತಿಯ ಸಹೋದರ ವಿದೇಶದಿಂದ ಕರೆ ಮಾಡಿ ಬೆದರಿಕೆ ಹಾಕಿದ್ದರು ಎಂದು ಪೂರ್ಣಿಮಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಇದೇ ವೇಳೆ, ಪತಿ ಅಭಿಷೇಕ್ ರೈ ಅವರು ಪ್ರಿಯಾಂಕ ಶೆಟ್ಟಿ ಎಂಬವರನ್ನು ಮದುವೆಯಾಗಿದ್ದಾರೆ. ಅಭಿಷೇಕ್‌ಗೆ ತನ್ನ ಜೊತೆ ಮದುವೆಯಾಗಿದೆ ಎಂಬುದು ತಿಳಿದಿದ್ದರು ತನ್ನ ಪತಿಯನ್ನು ಅವರು ಮದುವೆಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಾನೂನು ರೀತಿಯಲ್ಲಿ ನಮ್ಮಿಬ್ಬರ ವಿಚ್ಚೇದನ ಆಗದೆ ಅವರು ಮರುಮದುವೆಯಾಗಿದ್ದಾರೆ ಎಂದು ಪೂರ್ಣಿಮಾ ರೈ ದೂರಿನಲ್ಲಿ ತಿಳಿಸಿದ್ದಾರೆ.